ಷಷ್ಠಿ ಬಂದರೆ ಹಾಲು, ಬೆಣ್ಣೆ, ಪಂಚಾಮೃತವನ್ನು ಹುತ್ತಕ್ಕೆ ಎರೆಯುವುದು ಮಾಮೂಲು. ಆದರೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೋಳಿ ರಕ್ತ, ಮೊಟ್ಟೆಯನ್ನು ಎರೆಯುವ ಪದ್ಧತಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಷಷ್ಠಿ ಬಂದರೆ ಹಾಲು, ಬೆಣ್ಣೆ, ಪಂಚಾಮೃತವನ್ನು ಹುತ್ತಕ್ಕೆ ಎರೆಯುವುದು ಮಾಮೂಲು. ಆದರೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೋಳಿ ರಕ್ತ, ಮೊಟ್ಟೆಯನ್ನು ಎರೆಯುವ ಪದ್ಧತಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.

ಚಾಮರಾಜನಗರದ ಉಪ್ಪಾರ ಬಡಾವಣೆ, ಮಲ್ಲಯ್ಯನಪುರ, ಉತ್ತುವಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿ ಹೀಗೆ ಬಹುತೇಕ ಕಡೆ ಬುಧವಾರ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ನಾಗಪ್ಪನಿಗೆ ನಮಿಸಿ, ಇಷ್ಟಾರ್ಥ ಈಡೇರಿಕೆಗೆ ಪೂಜೆ ಸಲ್ಲಿಸಿದರು.

ಜಿಲ್ಲೆಯ ಬಹುಪಾಲು ಮಂದಿ ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಹಾಲು, ಬೆಣ್ಣೆ, ಕೋಳಿ ಬಲಿ ಕೊಟ್ಟು ಕೋಳಿ ರಕ್ತ, ತಲೆ, ಮೊಟ್ಟೆಯನ್ನು ಹುತ್ತದ ಕೋವಿಗೆ ಹಾಕುತ್ತಾರೆ, ಭಯ ಭಕ್ತಿಯಿಂದ ಈ ಹಬ್ಬ ಆಚರಿಸಲಿದ್ದು ಪೂಜೆಯಾಗುವರರೆಗೂ ಒಂದು ಹನಿ ನೀರನ್ನು ಕುಡಿಯುವುದಿಲ್ಲ.

ಈ ರೀತಿ ಹಾಲು, ಬೆಣ್ಣೆ, ಕೋಳಿ ಬಲಿಕೊಟ್ಟರೇ ಸರ್ಪ ಸಂಬಂಧದ ತೊಂದರೆ ನಿವಾರಣೆ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ. ಎಂಬುದು ಭಕ್ತರ ನಂಬಿಕೆ. ಒಟ್ಟಿನಲ್ಲಿ, ನಾಗಪ್ಪನಿಗೆ ಕೋಳಿ ಬಲಿ ಎಂಬುದು ವಿಲಕ್ಷಣವಾಗಿ ಕಂಡರೂ ಭಯ-ಭಕ್ತಿ ಹಾಗೂ ನಂಬಿಕೆಯಿಂದ ಜನರು ಷಷ್ಠಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ರೀತಿ ಆಚರಿಸಿದರೆ ಸರ್ಪದೋಷ ಬರುವುದಿಲ್ಲ, ಮಕ್ಕಳು ಮರಿಗಳಿಗೆ ಹಾವು ಕಾಣಿಸುವುದಿಲ್ಲ, ಕನಸಿನಲ್ಲೂ ಮಕ್ಕಳಿಗೆ ಹಾವು ಕಾಣಿಸಿಕೊಳ್ಳಬಾರದು ಎಂಬುದು ಇವರ ಕೋರಿಕೆ.