ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ (ಫೆ.16) ಒಟ್ಟು 1.5 ಲಕ್ಷ ಮೆಣಸಿಕಾಯಿ ಚೀಲಗಳು ಆವಕಾಗಿದ್ದು, ಕಳೆದ ಗುರುವಾರಕ್ಕಿಂತ 18 ಸಾವಿರ ಚೀಲ ಅಧಿಕ ಮೆಣಸಿನಕಾಯಿ ಮಾರುಕಟ್ಟೆಗೆ ಆಗಮಿಸಿದ್ದು ದರದಲ್ಲಿ ಎಂದಿನಂತೆ ಸ್ಥಿರತೆ ಮುಂದುವರೆದಿದೆ. ಪ್ರಸಕ್ತ ವರ್ಷದ ಮೆಣಸಿನಕಾಯಿ ಸೀಸನ್ ಹೆಚ್ಚು ದಿನಗಳ ಕಾಲ ಮುಂದುವರೆಯುವುದಿಲ್ಲ ಎನ್ನುವ ಮಾತುಗಳು ವರ್ತಕರಿಂದ ಕೇಳಿ ಬರುತ್ತಿರುವ ಬೆನ್ನಲ್ಲೇ ಮೆಣಸಿನಕಾಯಿ ಆವಕದಲ್ಲಿ ಗಣನೀಯ ಪ್ರಮಾಣದ ಏರಿಕೆ ಕಾಣುತ್ತಿದೆ. ಹೀಗಾಗಿ ದಲಾಲರು ಮತ್ತು ಖರೀದಿದಾರರಲ್ಲಿ ಹುಮ್ಮಸ್ಸು ಹೆಚ್ಚಾಗಿದ್ದು ಸುಮಾರು ಇಂದು ಒಟ್ಟು 367 ಖರೀದಿದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

10 ಲಕ್ಷಕ್ಕೂ ಅಧಿಕ ಚೀಲ: ಕಳೆದ 6 ವಾರದಿಂದ ಸುಮಾರು 10 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಅವಕವಾದ ಬಗ್ಗೆ ಮಾರುಕಟ್ಟೆ ಮೂಲಗಳು ದೃಢಪಡಿಸಿದೆ, ಉತ್ತಮ ದರ ಸಿಗುತ್ತಿರುವ ಬೆನ್ನಲ್ಲೇ ಪ್ರಮುಖ ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಬ್ಯಾಡಗಿ ಪಟ್ಟಣದ ಕಡೆಗೆ ಹೆಚ್ಚಿನ ರೈತರು ಮುಖಮಾಡಿದ್ದಾಗಿ ತಿಳಿದು ಬಂದಿದೆ. ಪಾರದರ್ಶಕ ವ್ಯಾಪಾರ: ಟೆಂಡರ್ ದಿನವೇ ಎಲ್ಲಾ ಮಾಲುಗಳು ಮಾರಾಟ, ಅಂದೇ ರೈತರಿಗೆ ಹಣಕಾಸಿನ ಸೌಲಭ್ಯ, ಸ್ಪರ್ಧಾತ್ಮಕ ದರಕ್ಕಾಗಿ ಇ-ಟೆಂಡರ್ ಸೌಲಭ್ಯ, ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಬಳಕೆ ಪಾರದರ್ಶಕ ವ್ಯಾಪಾರವನ್ನು ಒಪ್ಪಿಕೊಂಡ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರು ಬ್ಯಾಡಗಿ ಮಾರುಕಟ್ಟೆಯತ್ತ ಹರಿದು ಬರುತ್ತಿದ್ದಾರೆ.ಬಿಗಿಭದ್ರತೆ ನಡುವೆ ಟೆಂಡರ್: ಪ್ರಸಕ್ತ ವರ್ಷದ ಸೀಸನ್ ಆರಂಭದಿಂದಲೂ ಬಿಗಿ ಭದ್ರತೆ ಏರ್ಪಡಿಸಿರುವ ಪೋಲಿಸರು ರೈತರ ಹೆಸರಿನಲ್ಲಿ ಪುಂಡಾಟಿಕೆ ನಡೆಸುವವರ ವಿರುದ್ಧ ತೀವ್ರ ನಿಗಾ ವಹಿಸಿದ್ದು ಮಾರುಕಟ್ಟೆ ಪ್ರಾಂಗಣದಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿಯೊಂದಿಗೆ ಉಪಸ್ಥಿತರಿದ್ದರು.147,893 ಚೀಲ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಒಟ್ಟು 147,893 ಚೀಲಗಳು ಮಾರಾಟಕ್ಕಿದ್ದು ಇದರಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹ 4859 ಗರಿಷ್ಠ 69999 ಸರಾಸರಿ 48259, ಡಬ್ಬಿತಳಿ ಕನಿಷ್ಠ ₹ 5809 ಗರಿಷ್ಠ 89999 ಸರಾಸರಿ 51569, ಗುಂಟೂರು ಕನಿಷ್ಠ ₹ 1869 ಗರಿಷ್ಠ 18909 ಸರಾಸರಿ 14809 ರು.ಗಳಿಗೆ ಮಾರಾಟವಾಗಿವೆ.