ಬಾಗಲಕೋಟೆಯಲ್ಲಿ ಕೈ-ಕಮಲ ಶಕ್ತಿ ಪ್ರದರ್ಶನ

KannadaprabhaNewsNetwork |  
Published : Mar 24, 2026, 02:30 AM IST
ಬಿಜೆಪಿ ರ್ಯಾಲಿ | Kannada Prabha

ಸಾರಾಂಶ

ಬಾಗಲಕೋಟೆ ವಿಧಾನಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಬಲಾಬಲ ಪ್ರದರ್ಶನ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ವಿಧಾನಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಬಲಾಬಲ ಪ್ರದರ್ಶನ ನಡೆಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಉಮೇಶ ಮೇಟಿ ಬೆಳಗ್ಗೆ ತಮ್ಮ ಹುಟ್ಟೂರಾದ ತಿಮ್ಮಾಪುರದಲ್ಲಿ ಅವರ ತಂದೆಯವರಾದ ದಿ.ಎಚ್‌.ವೈ.ಮೇಟಿಯವರ ಸಮಾಧಿಯ ದರ್ಶನ ಪಡೆದು, ಮನೆಯಲ್ಲಿ ಗೋಪೂಜೆ ನೆರವೇರಿಸಿ, ನಂತರ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ಮೂರು ಸೆಟ್ಟು ನಾಮಪತ್ರ ಸಲ್ಲಿಸಿದರು. ಮೂರು ಸಟ್ಟು ನಾಮಪತ್ರ ಸಲ್ಲಿಸಿದ ಉಮೇಶ ಮೇಟಿಗೆ ಮೊದಲ ಸೆಟ್ಟು ನಾಮಪತ್ರ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ, ಅಜಯಕುಮಾರ ಸರನಾಯಕ ಸೇರಿದಂತೆ ಇತರರು ಇದ್ದರು. 2ನೇ ಸೆಟ್ಟು ನಾಮಪತ್ರ ಸಲ್ಲಿಸುವಾಗ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವ ಎಸ್‌.ಆರ್‌.ಪಾಟೀಲ, ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಇದ್ದರು. ಮೂರನೇ ಸೆಟ್ಟು ನಾಮಪತ್ರ ಸಲ್ಲಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವ ಶಿವಾನಂದ ಪಾಟೀಲ ಇದ್ದರು.

ಚರಂತಿಮಠಗೆ ಬಿವೈವಿ, ಜೋಷಿ ಸಾಥ್‌!:

ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಬೆಳಗ್ಗೆ ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ನಂತರ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮೊದಲಿಗೆ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಒಟ್ಟು ಮೂರು ಸೆಟ್ಟು ನಾಮಪತ್ರ ಸಲ್ಲಿಸಿದರು. ಮೊದಲ ಸೆಟ್ಟು ಸಲ್ಲಿಸುವಾಗ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಮಾಜಿ ಸಚಿವ ಮಹೇಶ ಇದ್ದರು. ಎರಡನೇ ಸೆಟ್ಟು ಸಲ್ಲಿಸುವಾಗ ಸಂಸದ ಪಿ.ಸಿ. ಗದ್ದಿಗೌಡರ, ಗೋವಿಂದ ಕಾರಜೋಳ, ವಿಧಾನ ಪರರ್ತ್‌ ಸದಸ್ಯ ಪಿ.ಎಚ್‌. ಪೂಜಾರ ಇದ್ದರು. ಇನ್ನೂ ಮೂರನೇ ಸಟ್ಟು ನಾಮಪತ್ರ ಸಲ್ಲಿಸುವಾಗ ಮಾಜಿ ಸಚಿವ ಮುರುಗೇಶ ನಿರಾಣಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜೆಡಿಎಸ್‌ ಮುಖಂಡ ನಾಡಗೌಡ ಇದ್ದರು.

ಭವ್ಯ ಮೆರವಣಿಗೆ, ಪಕ್ಷಗಳ ಶಕ್ತಿ ಪ್ರದರ್ಶನ:

ನಂತರ ಬಿಜೆಪಿ ಹಳೇ ಬಾಗಲಕೋಟೆಯಲ್ಲಿ ತನ್ನ ಶಕ್ತಿ ಪ್ರದರ್ಶನದ ಭವ್ಯ ಮೆರವಣಿಗೆ ನಡೆಸಿದರೆ, ಕಾಂಗ್ರೆಸ್‌ ವಿದ್ಯಾಗಿರಿ ಹಾಗೂ ನವನಗರದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿತು. ಕಾಂಗ್ರೆಸ್‌ ಅಭ್ಯರ್ಥಿ ಉಮೇಶ ಮೇಟಿ ಶಕ್ತಿ ಪ್ರದರ್ಶನದ ಭವ್ಯ ಮೆರವಣಿಗೆ ವಿದ್ಯಾಗಿರಿಯ ಕಾಲೇಜು ಸರ್ಕಲ್‌ನಿಂದ ಆರಂಭವಾಗಿ ಕಾಳಿದಾಸ ಸರ್ಕಲ್‌, ಕೋರ್ಟ್‌ ಸರ್ಕಲ್‌ ಮೂಲಕ ಹಾಯ್ದು ತಾಪಂ ಪಂಚಾಯಿತಿ ಕಚೇರಿ ಸರ್ಕಲ್‌ಗೆ ಆಗಮಿಸಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಸರ್ಕಾರದ ಅನೇಕ ಸಚಿವರು, ಹಾಲಿ ಮಾಜಿ ಶಾಸಕರು ಪಾಲ್ಗೊಂಡಿದ್ದರು.

ಇನ್ನೊಂದೆಡೆ ಹಳೇ ಬಾಗಲಕೋಟೆಯ ಕಣವಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಬಿಜೆಪಿ ಅಭ್ಯರ್ಥಿಯ ಶಕ್ತಿ ಪ್ರದರ್ಶನದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ವಲ್ಲಭಬಾಯಿ ಸರ್ಕಲ್‌ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು.

ಹಳೇ ಬಾಗಲಕೋಟೆಯಲ್ಲಿ ಬಿಜೆಪಿಯ ಕೇಸರಿ ಶಾಲು, ಬ್ಯಾನರ್‌ಗಳು ಹಾರಾಡಿದರೆ, ವಿದ್ಯಾಗಿರಿ ನವನಗರದಲ್ಲಿ ಕಾಂಗ್ರೆಸ್‌ ಧ್ವಜ ಹಾಗೂ ಬ್ಯಾನರ್‌ಗಳು ಹಾರಾಡಿದವು. ಎರಡು ಪಕ್ಷಗಳು ತಲಾ 5 ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ಸೇರಿಸುವ ಮೂಲಕ ಚುನಾವಣೆಗೆ ನಾವು ರೆಡಿ ಎಂಬ ಸಂದೇಶ ಸಾರಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ರಕ್ತದಾನ ಶಿಬಿರ ಉದ್ಘಾಟನೆ
ಅಂಬಾತನಯ ಮುದ್ರಾಡಿ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾಕೃತಿಗಳಿಗೆ ಆಹ್ವಾನ