ಆರ್ಮ್ ಸ್ಟ್ರಾಂಗ್ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿ

KannadaprabhaNewsNetwork | Published : Jul 15, 2024 1:45 AM

ಸಾರಾಂಶ

ರಾಮನಗರ: ತಮಿಳುನಾಡಿನ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಅವರ ಹತ್ಯೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಪಕ್ಷದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ರಾಮನಗರ: ತಮಿಳುನಾಡಿನ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಅವರ ಹತ್ಯೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಪಕ್ಷದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರನ್ನು ಭೇಟಿಯಾದ ಬಿಎಸ್ಪಿ ಪದಾಧಿಕಾರಿಗಳು ಆರ್ಮ್ ಸ್ಟ್ರಾಂಗ್‌ ಹತ್ಯೆಯಾಗಿ ಒಂದು ವಾರ ಕಳೆದರೂ ತಮಿಳುನಾಡು ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸಂಚುಕೋರರನ್ನು ಹಿಡಿಯಲು ವಿಫಲವಾಗಿದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು, ಆ ಮೂಲಕ ಸಂತ್ರಸ್ತರ ಕುಟುಂಬಕ್ಕೆ ನಾಡಿನ ಲಕ್ಷಾಂತರ ಅವರ ಅಭಿಮಾನಿಗಳಿಗೆ ನ್ಯಾಯ ಒದಗಿಸಬೇಕೆಂದು ತಮಿಳುನಾಡು ರಾಜ್ಯದ ಮುಖ್ಯಮಂತ್ರಿಗಳಿಗೆ ತಾವು ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

ತಮಿಳುನಾಡು ರಾಜಧಾನಿ ಚೆನ್ನೈನ ಪೆರಂಬೂರಿನ ಜನನಿಬಿಡ ವಸತಿ ಪ್ರದೇಶದಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಆರ್ಮ್ ಸ್ಟ್ರಾಂಗ್ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವುದು ಅತ್ಯಂತ ದುಃಖದ ಘಟನೆ. ಇದು ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ದೂರಿದರು..

ಇಡೀ ದಕ್ಷಿಣ ಭಾರತವೇ ಈ ಕೊಲೆಯ ಬಗ್ಗೆ ದಿಗ್ಭ್ರಮೆಗೊಂಡು ದುಃಖದಲ್ಲಿರುವಾಗ ಮಾನ್ಯ ಆರ್ಮ್ ಸ್ಟ್ರಾಂಗ್ ಅವರ ಹತ್ಯೆಯನ್ನು ಸಮರ್ಥಿಸುವ ರೀತಿಯಲ್ಲಿ ಮಾಧ್ಯಮಗಳಲ್ಲಿ ಅವರ ತೇಜೋವಧೆ ಮಾಡುವ ಸುದ್ದಿ ಬಿತ್ತರವಾಗುತ್ತಿರುವುದನ್ನು ಗಮನಿಸಿದರೆ ಈ ಹತ್ಯೆಯಲ್ಲಿ ಬಲವಾದ ರಾಜಕೀಯ ಶಕ್ತಿಯ ಕೈವಾಡ ಮತ್ತು ಷಡ್ಯಂತ್ರ ಅಡಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ದೂರಿದರು.

ಘಟನೆಯಲ್ಲಿ ಗುಪ್ತಚರ ವೈಫಲ್ಯದ ಜೊತೆಗೆ ರಾಜಕೀಯ ಷಡ್ಯಂತ್ರ ಅಡಗಿದೆ. ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಿಗೆ ರಕ್ಷಣೆ ಒದಗಿಸುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ಹಿಂದೆ ಆರ್ಮ್ ಸ್ಟ್ರಾಂಗ್ ಹಾಲಿ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸಹಜವಾಗಿಯೇ ಮುಖ್ಯಮಂತ್ರಿ ಆರ್ಮ್ ಸ್ಟ್ರಾಂಗ್ ವಿರುದ್ಧ ಅಸಮಾಧಾನ ಹೊಂದಿರುವ ಸಾಧ್ಯತೆ ಇದೆ. ಈ ಕಾರಣಗಳಿಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್ , ರಾಜ್ಯ ಪ್ರಧಾನ ಕಾರ್ಯದ್ರಶಿ ಅನ್ನದಾನಪ್ಪ, ಜಿಲ್ಲಾ ಸಂಯೋಜಕರಾದ ಟಿ.ಸಿ.ಉಮೇಶ್ , ವೆಂಕಟಾಚಲ, ಜಿಲ್ಲಾ ಉಪಾಧ್ಯಕ್ಷ ಮಹದೇವು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಗೇಶ್ , ಜಿಲ್ಲಾ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

14ಕೆಆರ್ ಎಂಎನ್ 2.ಜೆಪಿಜಿ

ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರಿಗೆ ಬಿಎಸ್ಪಿ ಮುಖಂಡರು ಮನವಿ ಸಲ್ಲಿಸಿದರು.

Share this article