ಕನ್ನಡಪ್ರಭ ವಾರ್ತೆ ಮೂಲ್ಕಿ ಸುರತ್ಕಲ್ ಸಮೀಪದ ಕೈಗಾರಿಕಾ ವಲಯ (ಎಂಎಸ್‌ಇಝಡ್)ದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಥೆಂಟಿಕ್ ಓಷನ್ ಟ್ರಶರ್ ಮತ್ಸ್ಯೋದ್ಮಯ ಫ್ಯಾಕ್ಟರಿಯಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.
ಅಥೆಂಟಿಕ್ ಓಷನ್ ಟ್ರೆಶರ್ ಕಂಪನಿಯು ಮೀನನ್ನು ಸ್ವಚ್ಛಗೊಳಿಸಿ ಮಾಂಸದ ರೂಪಕ್ಕೆ ಪರಿವರ್ತಿಸಿ 10 ಕೆ.ಜಿ. ಯ ಪ್ಯಾಕೆಟ್‌ಗಳನ್ನಾಗಿ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಕಂಪನಿಯಾಗಿದೆ. ಈ ಸಂಸ್ಥೆಯ ಕೋಲ್ಡ್ ಸ್ಟೋರ್ ಸೆಕ್ಷನ್ ಹಾಗೂ ಕಟ್ಟಿಂಗ್ ಸೆಕ್ಷನ್‌ಗಳಲ್ಲಿ ದುರಸ್ತಿ ಕಾರ್ಯನಡೆಯುತ್ತಿತ್ತು. ಈ ವೇಳೆ ಕೋಲ್ಡ್ ಸ್ಟೋರೆಜ್ ಸೆಕ್ಷನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆಗೆ ಆಕಾಶದೆತ್ತರಕ್ಕೆ ಹೊಗೆ ಉಗುಳುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಅಗ್ನಿ ಅವಘಡದಿಂದ ಸುಮಾರು 10 ಕೋಟಿ ರು. ಮೌಲ್ಯದ ಮೀನಿನ ಉತ್ಪನ್ನಗಳು ಬೆಂಕಿಗಾಹುತಿಯಾಗಿವೆ. ಕೈಗಾರಿಕಾ ವಲಯದ ಎಂಆರ್ ಪಿಎಲ್, ಗೇಲ್ ಇಂಡಿಯಾ ಕಂಪನಿಗಳ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದವು.