ಹಾಲು ಒಕ್ಕೂಟದ ಭ್ರಷ್ಟಾಚಾರ ಸಿಬಿಐಗೆ ಒಪ್ಪಿಸಿ: ರೈತಸಂಘದ ಒತ್ತಾಯ

KannadaprabhaNewsNetwork | Published : Mar 20, 2025 1:19 AM

ಸಾರಾಂಶ

ಹಾಲು ಒಕ್ಕೂಟದ ಭ್ರಷ್ಟಾಚಾರ ಸಿಬಿಐ ತನಿಖೆಗೆ ಒಪ್ಪಿಸಿ ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ರೈತಸಂಘದಿಂದ ಕೋಮುಲ್ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಕೋಲಾರ

ಹಾಲು ಒಕ್ಕೂಟದ ಭ್ರಷ್ಟಾಚಾರ ಸಿಬಿಐ ತನಿಖೆಗೆ ಒಪ್ಪಿಸಿ ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ರೈತಸಂಘದಿಂದ ಕೋಮುಲ್ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟದಲ್ಲಿ ನಡೆದಿರುವ ನೂರಾರು ಕೋಟಿ ಹಗರಣದ ರೂವಾರಿಗಳು ಯಾರು? ಹೈನೋದ್ಯಮದಲ್ಲಿ ಒಕ್ಕೂಟವನ್ನು ನಷ್ಟಕ್ಕೆ ತಂದು ನಿಲ್ಲಿಸಿರುವ ಮಾಜಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ವಿರುದ್ಧ ಬಂಗಾರಪೇಟೆ ಶಾಸಕರು ಮಾಡುತ್ತಿರುವ ಆರೋಪಕ್ಕೆ ಆಡಳಿತಾಧಿಕಾರಿಗಳು ತೆಗೆದುಕೊಂಡಿರುವ ನಿರ್ಧಾರವೇನು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದರು.

ಎರಡೂ ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ಮಾಡುತ್ತಿರುವ ಜನಪ್ರತಿನಿಧಿಗಳು ಕೃಷಿ ಭೂಮಿಗೆ ಒಂದು ದಿನವೂ ನೇಗಿಲು ಕಟ್ಟಿ ಉತ್ತಿಲ್ಲ, ಹಸು ಕಟ್ಟಿ ಸಗಣಿ ಎತ್ತಿಲ್ಲ. ಬಟ್ಟೆ ಕೊಳಕಾಗಿಲ್ಲ. ಆದರೂ ಸಹ ದಿನಕ್ಕೊಂದು ಆರೋಪ ಮಾಡಿಕೊಳ್ಳುವ ಮುಖಾಂತರ ಇಡೀ ಒಕ್ಕೂಟವನ್ನೇ ಹಾಳು ಮಾಡಲು ತುದಿಗಾಲಲ್ಲಿ ನಿಂತಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

ಡೀಸೆಲ್ ಖರೀದಿಯಿಂದ ಹಿಡಿದು ವಿದೇಶಿ ಪ್ರವಾಸ, ನೇಮಕಾತಿ, ಮೆಗಾ ಡೇರಿ ಸೋಲಾರ್ ಘಟಕ, ಕೋಟ್ಯಾಂತರ ರುಪಾಯಿ ಹಗರಣ ಎಂದು ಬಂಗಾರಪೇಟೆ ಶಾಸಕರು ಮಾಲೂರು ಶಾಸಕರ ಮೇಲೆ ನಿರಂತರವಾಗಿ ಆರೋಪ ಮಾಡುತ್ತಿದ್ದರೂ ಆಡಳಿತಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಏಕೆ ಪರಿಗಣಿಸುತ್ತಿಲ್ಲ. ರೈತರ ಸಮಸ್ಯೆ ಎಂದು ನಿರ್ಲಕ್ಷ್ಯವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಆಡಳಿತಾಧಿಕಾರಿ, ಒಕ್ಕೂಟದ ಅವ್ಯವಸ್ಥೆ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಶೀಘ್ರವೇ ಚುನಾವಣೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಮುಖಂಡ ಬಂಗವಾದಿ ನಾಗರಾಜ ಗೌಡ, ತೆರ್‍ನಹಳ್ಳಿ ಆಂಜಿನಪ್ಪ, ಶಿವಾರೆಡ್ಡಿ, ಯಲ್ಲಣ್ಣ, ಹರೀಶ್, ಮುನಿರಾಜು, ಕದಿರಿನತ್ತ ಅಪ್ಪೋಜಿರಾವ್, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಯಲುವಳ್ಳಿ ಪ್ರಭಾಕರ್, ಮಂಗಸಂದ್ರ ತಿಮ್ಮಣ್ಣ, ಹೆಬ್ಬಣಿ ಅನಂದರಡ್ದಿ. ಸುಪ್ರೀಂಚಲ ಚಂದ್ರಪ್ಪ, ಗೌರಮ್ಮ, ಶೈಲಜ, ರತ್ನಮ್ಮ, ಮುನಿವೆಂಕಟಮ್ಮ ಇದ್ದರು.

Share this article