ಬನವಾಸಿಯ ಪರಂಪರೆ ಮುಂದಿನ ಪೀಳಿಗೆಗೆ ಹಸ್ತಾಂತರಿಸಿ: ಶಿವರಾಮ ಹೆಬ್ಬಾರ

KannadaprabhaNewsNetwork |  
Published : Apr 11, 2025, 12:35 AM IST
೧೦ಎಸ್.ಆರ್.ಎಸ್೨ಪೊಟೋ೧ (ಕದಂಬ ಜ್ಯೋತಿಗೆ ಗುಡ್ನಾಪುರ ಬಂಗಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು.)೧೦ಎಸ್.ಆರ್.ಎಸ್೨ಪೊಟೋ೨ (ಮಾತೆಯರು ಪೂರ್ಣಕುಂಭ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.) | Kannada Prabha

ಸಾರಾಂಶ

ಏ. 12 ಮತ್ತು 13ರಂದು ಬನವಾಸಿಯಲ್ಲಿ ಕದಂಬೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಗುರುವಾರ ಶಿರಸಿ ತಾಲೂಕಿನ ಗುಡ್ನಾಪುರದ ರವಿವರ್ಮನ ಅರಮನೆ ಮೈದಾನದಲ್ಲಿ ಕದಂಬ ಜ್ಯೋತಿ ರಥಕ್ಕೆ ಚಾಲನೆ ನೀಡಲಾಯಿತು.

ಶಿರಸಿ: ಬನವಾಸಿಯ ಪ್ರಾಚೀನ ವಿಭಿನ್ನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಅವರು ಗುರುವಾರ ತಾಲೂಕಿನ ಗುಡ್ನಾಪುರದ ರವಿವರ್ಮನ ಅರಮನೆ ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಹಮ್ಮಿಕೊಂಡ ಕದಂಬ ಜ್ಯೋತಿ ರಥ ಯಾತ್ರೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಕದಂಬೋತ್ಸವ ಎಂಬುದು ಕನ್ನಡಿಗರ ಹಬ್ಬವಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ವಿಭಿನ್ನ ರೀತಿಯಲ್ಲಿ ಆಚರಣೆಯಾಗಬೇಕು, ಕೇವಲ ಸರ್ಕಾರಿ ಆಚರಣೆಯಾಗದೇ ಸಾರ್ವಜನಿಕರ ಉತ್ಸವ ಆಗಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.

ಕನ್ನಡಕ್ಕೆ ೮ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇನ್ಯಾವುದೇ ಭಾಷೆಗೆ ಇಷ್ಟೊಂದು ಜ್ಞಾನಪೀಠ ಪ್ರಶಸ್ತಿ ದೊರೆತಿಲ್ಲ. ಕನ್ನಡಕ್ಕೆ ತನ್ನದೇ ಆದ ಶ್ರೀಮಂತಿಕೆ ಇದೆ. ಆದಿಕವಿ ಪಂಪ ಹಾಡಿ ಹೊಗಳಿದ ಬನವಾಸಿಯಲ್ಲಿ ಕಳೆದ ೧೬ ವರ್ಷಗಳಿಂದ ಕದಂಬೋತ್ಸವ ಆಚರಿಸಲಾಗುತ್ತಿದೆ ಎಂದ ಅವರು, ಗುಡ್ನಾಪುರದಲ್ಲಿ ಹಚ್ಚಿದ ಕದಂಬ ಜ್ಯೋತಿಯು ೨ ಜಿಲ್ಲೆಯಲ್ಲಿ ಸಂಚರಿಸಿ, ಅದೇ ಜ್ಯೋತಿಯಲ್ಲಿ ಕದಂಬೋತ್ಸವ ಉದ್ಘಾಟನೆಗೊಳ್ಳಲಿದೆ ಎಂದರು.ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿ, ಕದಂಬೋತ್ಸವ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸಹಾಯಕ ಆಯುಕ್ತೆ ಕಾವ್ಯಾರಾಣಿ ನೇತೃತ್ವದಲ್ಲಿ ಕದಂಬಜ್ಯೋತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಏ. ೧2 ಮತ್ತು ೧3ರಂದು ಬನವಾಸಿಯಲ್ಲಿ ಕದಂಬೋತ್ಸವ ಅದ್ಧೂರಿಯಾಗಿ ಆಯೋಜನೆಗೊಳ್ಳಲಿದೆ. ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಾದ್ಯಂತ ಕದಂಬಜ್ಯೋತಿ ಸಂಚರಿಸಲಿದೆ. ಜ್ಯೋತಿ ಸಂಚಾರ ಮಾಡಿ ಎಲ್ಲರೂ ಆಮಂತ್ರಿಸಲಿದೆ ಎಂದರು.

ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ, ಸದಸ್ಯರಾದ ಜ್ಯೋತಿ ನಾಯ್ಕ, ರಘು ನಾಯ್ಕ, ಅಶೋಕ ನಾಯ್ಕ, ರಿಂದಾ ನಾಯ್ಕ, ಶಿಲ್ಪಾ ಚೆನ್ನಯ್ಯ, ಗುತ್ಯಮ್ಮ ವಾಲ್ಮೀಕಿ, ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್. ನಾಯ್ಡು, ಭೂ ನ್ಯಾಯ ಮಂಡಳಿ ಸದಸ್ಯ ರವಿ ನಾಯ್ಕ, ಜಿಪಂ ಮಾಜಿ ಸದಸ್ಯ ಬಸವರಾಜ ದೊಡ್ಮನಿ, ರೂಪಾ ನಾಯ್ಕ, ತಾಪಂ ಮಾಜಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ, ತಹಸೀಲ್ದಾರ್‌ ಶೈಲೇಶ ಪರಮಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮತ್ತಿತರರು ಇದ್ದರು.ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಸ್ವಾಗತಿಸಿದರು. ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾನ್ಯಾ ಹೆಗಡೆ ಪ್ರಾರ್ಥಿಸಿದರು. ಮಾರಿಕಾಂಬಾ ಪ್ರೌಢಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಉದಯಕುಮಾರ ಕಾನಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಹೂಳೆತ್ತುವ ಕೆಲಸವಾಗಲಿ: ಪ್ರತಿ ವರ್ಷವೂ ಅನೇಕ ಕಾರಣದಿಂದ ಕದಂಬೋತ್ಸವ ವಿಳಂಬವಾಗುತ್ತಿದೆ. ಡಿಸೆಂಬರ್ ತಿಂಗಳಿನಲ್ಲಿಯೇ ಕದಂಬೋತ್ಸವ ಆಚರಣೆಯಾಗಬೇಕು. ಬನವಾಸಿ ಅಷ್ಟೇ ಪ್ರಾಮುಖ್ಯತೆಯನ್ನು ಗುಡ್ನಾಪುರ ಹೊಂದಿದೆ. ಪ್ರಾಚ್ಯವಸ್ತು ಇಲಾಖೆಯ ಗುಡ್ನಾಪುರದ ರಾಣಿ ವಿಲಾಸವನ್ನು ನಿರ್ಲಕ್ಷ್ಯ ವಹಿಸಿದೆ. ಗುಡ್ನಾಪುರ ಕೆರೆಯು ೧೫೦ ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆ ಹೂಳು ತುಂಬಿದೆ. ಹೂಳೆತ್ತುವ ಕೆಲಸ ಆಗಬೇಕು ಎಂದು ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್. ನಾಯ್ಕ ಹೇಳಿದರು.

ಕದಂಬ ಜ್ಯೋತಿ ರಥಕ್ಕೆ ಚಾಲನೆ: ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸಂಚರಿಸಲಿರುವ ಕದಂಬ ಜ್ಯೋತಿ ರಥಕ್ಕೆ ಶಾಸಕ ಶಿವರಾಮ ಹೆಬ್ಬಾರ ಗುಡ್ನಾಪುರದ ರವಿವರ್ಮ ಅರಮನೆ ಮೈದಾನದಲ್ಲಿ ಚಾಲನೆ ನೀಡಿದರು.

ಗುಡ್ನಾಪುರದ ಬಂಗಾರೇಶ್ವರ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಕದಂಬ ಜ್ಯೋತಿಯನ್ನು ಉದ್ಘಾಟಿಸಲಾಯಿತು. ಆನಂತರ ಮಾತೆಯರ ಪೂರ್ಣಕುಂಬ, ಡೊಳ್ಳುಕುಣಿತ, ಗುಡ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಮೆರವಣಿಗೆ ಮೂಲಕ ಜ್ಯೋತಿಯನ್ನು ಸಭಾ ಕಾರ್ಯಕ್ರಮ ವರೆಗೆ ತರಲಾಯಿತು. ಆನಂತರ ೨ ಪ್ರತ್ಯೇಕ ವಾಹನಗಳ ಮೂಲಕ ಉತ್ತರ ಕನ್ನಡದ ವಿವಿಧ ತಾಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಿಗೆ ಸಂಚರಿಸಲಿದೆ. ಇದೇ ಜ್ಯೋತಿಯಲ್ಲಿ ಏ. ೧2ರಂದು ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ನಡೆಯುವ ಕದಂಬೋತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.

ನಾಳೆ ಕದಂಬೋತ್ಸವ, ಪಂಪ ಪ್ರಶಸ್ತಿ ಪ್ರದಾನ ಸಮಾರಂಭ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಇಲಾಖೆ, ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಕದಂಬೋತ್ಸವ-2025, ಪಂಪ ಪ್ರಶಸ್ತಿ ಪ್ರದಾನ ಸಮಾರಂಭವು ಏ.12, 13ರಂದು ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆಯಲಿದೆ.ಕದಂಬೋತ್ಸವ ಉದ್ಘಾಟನೆಯನ್ನು ಏ.12ರಂದು ಸಂಜೆ 5 ಗಂಟೆಗೆ ಬನವಾಸಿಯ ಮಯೂರ ವರ್ಮ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು. ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ.ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವ ಮಂಕಾಳು ವೈದ್ಯ, ಶಾಸಕರಾದ ಆರ್.ವಿ. ದೇಶಪಾಂಡೆ, ಸತೀಶ ಸೈಲ್, ದಿನಕರ ಶೆಟ್ಟಿ, ಭೀಮಣ್ಣ ನಾಯ್ಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ ಖಾಸಿಂ ಖಾನ್, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಪಾಲ್ಗೊಳ್ಳಲಿದ್ದಾರೆ.ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಪಂಪ ಪ್ರಶಸ್ತಿಯನ್ನು ಹಂಪಿ ಕನ್ನಡ ವಿವಿ ವಿಶ್ರಾಂತಿ ಕುಲಪತಿ ಡಾ. ಬಿ.ಎ. ವಿವೇಕ ರೈ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''