ಶಾಸಕ ಭರತ್ ರೆಡ್ಡಿ, ಗಣೇಶ್ ಕೋರಿಕೆಗೆ ಸ್ಪಂದಿಸಿದ ಸರ್ಕಾರ
ಕನ್ನಡಪ್ರಭ ವಾರ್ತೆ ಬಳ್ಳಾರಿಇಲ್ಲಿನ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) 2024ರ ಮಾರ್ಚ್ 7 ಹಾಗೂ 2024ರ ಜುಲೈ 8ರಂದು ಜರುಗಿದ ಸಭೆಯಲ್ಲಿ ಕೈಗೊಂಡ ನಿರ್ಣಯ ರದ್ದುಗೊಳಿಸಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಇದರಿಂದ ತೀವ್ರ ಕುತೂಹಲಕ್ಕೆಡೆ ಮಾಡಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ವ್ಯತಿರಿಕ್ತ ನಡೆಗೆ ರಾಜ್ಯ ಪ್ರಾಧಿಕಾರವೇ ತಡೆಯೊಡ್ಡಿದೆ.ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಸಭೆಯ ನಡವಳಿಗಳಲ್ಲಿ ಅಕ್ರಮ ನಡೆದಿರುವ ಕುರಿತು ವ್ಯಾಪಕವಾಗಿ ಸಾರ್ವಜನಿಕರಿಂದ ದೂರು ಬಂದಿವೆ. ಏತನ್ಮಧ್ಯೆ ಪ್ರಾಧಿಕಾರದ ಆಯುಕ್ತರೇ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಬಳ್ಳಾರಿ ಪ್ರಾಧಿಕಾರದ ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಿಯಮ ಮೀರಿ ಸಭೆಗಳಲ್ಲಿ ನಿರ್ಣಯ ಕೈಗೊಂಡಿದ್ದಾರೆ. ಹೀಗಾಗಿ 2024ರ ಮಾರ್ಚ್ 7 ಹಾಗೂ ಜುಲೈ 8ರ ಸಭೆಯ ನಡವಳಿಗಳನ್ನು ರದ್ದುಪಡಿಸಿ ಆದೇಶ ಹೊರಡಿಸಬೇಕು. ಮುಂದಿನ ಸಭೆಗಳಲ್ಲಿ ಕೈಗೊಳ್ಳಲಿರುವ ನಿರ್ಣಯಗಳನ್ನು ಶಾಸಕರುಗಳ ಗಮನಕ್ಕೆ ತಂದು ನಿರ್ಣಯಿಸಬೇಕು ಎಂದು ಸೂಕ್ತ ನಿರ್ದೇಶನ ನೀಡುವಂತೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆ ಎರಡು ಸಭೆಗಳ ನಡವಳಿ ರದ್ದುಗೊಳಿಸಿರುವ ಪ್ರಾಧಿಕಾರ, ಶಾಸಕರು ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳ ಕುರಿತು ತನಿಖೆ ನಡೆಸಲು ನಿರ್ಧರಿಸಿದೆ. 2024ರ ಮಾರ್ಚ್ 7 ರಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಸಭೆಯ ನಡವಳಿಯಲ್ಲಿ ಮಂಡಿಸಿರುವ 273 ಪ್ರಕರಣಗಳ ಪೈಕಿ ಶೇ.83ಕ್ಕಿಂತ ಹೆಚ್ಚಿನ ಪ್ರಕರಣಗಳು ಹಾಗೂ 2024ರ ಜು. 8ರಂದು ನಡೆದ ಪ್ರಾಧಿಕಾರ ಸಭೆಯ ನಡವಳಿಯ ಒಟ್ಟು 116 ಪ್ರಕರಣಗಳ ಪೈಕಿ ಶೇ.94ಕ್ಕಿಂತ ಹೆಚ್ಚಿನ ಪ್ರಕರಣಗಳು ಕೆಟಿಸಿಪಿ ಹಾಗೂ ಕೆಯುಡಿಎ ಕಾಯ್ದೆ, ಸರ್ಕಾರದ ಸುತ್ತೋಲೆ/ ಅಧಿಸೂಚನೆಗಳ ಅಂಶಗಳಿಗೆ ವ್ಯತಿರಿಕ್ತವಾಗಿ ನಿರ್ಣಯ ಕೈಗೊಂಡಿರುವುದರಿಂದ ಇನ್ನುಳಿದ ಕೆಲವೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾಗಶಃ ತೀರ್ಮಾನ ಕೈಗೊಂಡಲ್ಲಿ ಒಟ್ಟಾರೆ ಸಭೆಯ ನಿರ್ಣಯ ರದ್ದುಪಡಿಸಿ ಹೊಸದಾಗಿ ಪ್ರಾಧಿಕಾರದ ಸಭೆಯನ್ನು ಜರುಗಿಸಿ ನಿರ್ಣಯ ಕೈಗೊಳ್ಳುವುದು ಸೂಕ್ತ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಜರುಗಿದ ಎರಡು ಸಭೆಗಳ ನಡವಳಿಗಳಲ್ಲಿನ ನಿರ್ಣಯಗಳನ್ನು ಸರ್ಕಾರದ ಅಧಿಸೂಚನೆಯ ವ್ಯತಿರಕ್ತವಾಗಿ ಕೈಗೊಂಡಿರುವುದರಿಂದ ಸದರಿ ನಿರ್ಣಯಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 67(3)ರನ್ವಯ ಏಕೆ ರದ್ದುಪಡಿಸಬಾರದು ಎಂಬುದಕ್ಕೆ 15 ದಿನದೊಳಗೆ ಸಮಜಾಯಿಷಿ ನೀಡುವಂತೆ 2025ರ ಫೆ.19 ಹಾಗೂ 2025ರ ಮಾ.6 ರಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಕಾರಣ ಕೇಳಿ ನೊಟೀಸ್ ನೀಡಲಾಗಿತ್ತು.ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಭ್ರಷ್ಟಾಚಾರ ಪ್ರಕರಣದಿಂದಾಗಿ ಸಮರ್ಪಕವಾಗಿ ಸಭೆಗಳು ನಡೆಯದೆ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಕೂಡಲೇ ಜನರ ನೆರವಿಗೆ ಬರಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ವಿಧಾನಪರಿಷತ್‌ನಲ್ಲಿ ಧ್ವನಿ ಎತ್ತಿದ್ದರು. ಪ್ರಾಧಿಕಾರದಲ್ಲಿನ ಅವ್ಯವಸ್ಥೆಯಿಂದಾಗಿ ಹೊಸ ಲೇಔಟ್‌ಗಳ ಪರವಾನಿಗೆ ಸೇರಿದಂತೆ ನಾನಾ ಸಮಸ್ಯೆಗಳು ಉದ್ಭವಿಸಿವೆ. ಹೀಗಾಗಿ ಸರ್ಕಾರ ಕೂಡಲೇ ಮುಂದಿನ ಹಂತದ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಉತ್ತರಿಸಿದ್ದ ನಗರಾಭಿವೃದ್ಧಿ ಸಚಿವರು, ಅಧಿವೇಶನ ಮುಗಿದ ಬಳಿಕ ಬಳ್ಳಾರಿ ಪ್ರಾಧಿಕಾರದ ಸಮಸ್ಯೆ ಪರಿಹಾರಕ್ಕೆ ಸೂಕ್ತ ನಿಲುವು ತೆಗೆದುಕೊಳ್ಳುವುದಾಗಿ ಸದನದಲ್ಲಿ ಉತ್ತರಿಸಿದ್ದರು.