ಬುರುಡೆ ಫಿಲ್ಮ್‌ಗೆ ಕೈ ಪ್ರೊಡ್ಯೂಸರ್‌ : ಅಶೋಕ್‌

KannadaprabhaNewsNetwork |  
Published : Sep 02, 2025, 01:00 AM ISTUpdated : Sep 02, 2025, 12:15 PM IST
Karnataka LoP R Ashoka (File photo/ANI)

ಸಾರಾಂಶ

ತಿಮಿಂಗಿಲ ಹಿಡಿಯಬೇಕಾದ ಎಸ್‌ಐಟಿ ಮೀನು ಹಿಡಿಯುತ್ತಾ ಇದೆ. ಹೀಗಾಗಿ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು. ಆಗ ಮಾತ್ರ ನ್ಯಾಯ ಸಿಗಬಲ್ಲುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಪಾದಿಸಿದ್ದಾರೆ.

  ಬೆಳ್ತಂಗಡಿ :  ತಿಮಿಂಗಿಲ ಹಿಡಿಯಬೇಕಾದ ಎಸ್‌ಐಟಿ ಮೀನು ಹಿಡಿಯುತ್ತಾ ಇದೆ. ಹೀಗಾಗಿ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು. ಆಗ ಮಾತ್ರ ನ್ಯಾಯ ಸಿಗಬಲ್ಲುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಪಾದಿಸಿದ್ದಾರೆ.

ಧರ್ಮಸ್ಥಳದಲ್ಲಿ ಸೋಮವಾರ ಬಿಜೆಪಿ ವತಿಯಿಂದ ನಡೆದ ಧರ್ಮಸ್ಥಳ ಚಲೋ, ನಮ್ಮ ನಡಿಗೆ ಧರ್ಮದೆಡೆಗೆ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುರುಡೆ ಗ್ಯಾಂಗ್‌ನ ಹಿಂದೆ ತಮಿಳುನಾಡಿನ ಸಂಸದರೊಬ್ಬರು ಇದ್ದಾರೆ. ಬುರುಡೆ ತೆಗೆದುಕೊಂಡು ದೆಹಲಿಯಲ್ಲಿ ಭೇಟಿ ಮಾಡಿದ್ದು ಯಾರನ್ನು? ಕೇರಳದಲ್ಲೂ ಪ್ರಕರಣ ಪ್ರತಿಧ್ವನಿಸಿದೆ ಎಂದರು.ಕಾಂಗ್ರೆಸ್‌ ಬುರುಡೆ ಸಿನಿಮಾದ ಪ್ರೊಡ್ಯೂಸರ್‌:ಚಾಮುಂಡಿ ದೇವಿ ಹಿಂದೂಗಳದ್ದಲ್ಲ ಅನ್ನುತ್ತಿದ್ದಾರೆ. ಬಂಡೆ ಹೇಳುತ್ತಿದ್ದೀರಿ, ತಾಕತ್ ಇದೆ ಎಂದು ಹೇಳುತ್ತಿದ್ದೀರಿ. ಹಾಗಾದರೆ ಯಾವುದಾರು ಮಸೀದಿ ಮುಂದೆ ನಿಂತು ಇದು ಮುಸಲ್ಮಾನರದ್ದಲ್ಲ ಅಂತ ಹೇಳುವ ಧೈರ್ಯ ಇದೆಯಾ ಎಂದ ಅವರು, ಸಿದ್ದರಾಮಯ್ಯ ಸುತ್ತ ನಕ್ಸಲ್ ಗ್ಯಾಂಗ್ ಇದೆ. ಧರ್ಮಸ್ಥಳದಲ್ಲಿ ಸಾವಿರಾರು ರೇಪ್, ಹೆಣ ಅಂತ ಬುರುಡೆ ಹುಡುಕುವ ನಿಮಗೆ ಯಾವುದಾರೂ ಮಸೀದಿಯಲ್ಲಿ ಮೂಳೆ ಹುಡಕುವ ಧೈರ್ಯ ಮಾಡಿದ್ದೀರಾ? ನಾವು ಸತ್ಯದ ಪರ ಇದ್ದೇವೆ. ಸೌಜನ್ಯ ಪರ ತನಿಖೆಗೆ ನಾವು ಬೆಂಬಲ ಕೊಡುತ್ತೇವೆ ಎಂದು ಹೇಳಿದರು.

ಧರ್ಮಸ್ಥಳಕ್ಕೆ ಕಾಂಗ್ರೆಸ್‌ನವರು ಯಾವ ಮುಖ ಇಟ್ಟುಕೊಂಡು ಬರುತ್ತಾರೆ. ಹೆಗಡೆ ಕುಟುಂಬ ಅನುಭವಿಸಿದ ಚಿತ್ರಹಿಂಸೆಯು ನಿಮಗೆ ಶಾಪವಾಗಿ ತಟ್ಟಲಿದೆ. ಬುರುಡೆ ಪ್ರಕರಣವೆಂಬ ಸಿನಿಮಾದ ನಿರ್ದೇಶಕ ಯಾರು ಅಂತ ಗೊತ್ತಿಲ್ಲದಿದ್ದರೂ ಕಾಂಗ್ರೆಸ್ ಅದರ ಪ್ರೊಡ್ಯೂಸರ್ ಅನ್ನುವುದು ಮಾತ್ರ ಸತ್ಯ ಎಂದು ಅಶೋಕ್‌ ಹೇಳಿದರು.ಬಾನು ಮುಷ್ತಾಕ್ ಅವರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಬನ್ನಿ. ನಿಮ್ಮ ಧರ್ಮಸ್ಥಳ ಯಾತ್ರೆಯನ್ನು ಅವರಿಂದಲೇ ಉದ್ಘಾಟಿಸಿ ಎಂದು ಅಶೋಕ್ ಕುಟುಕಿದರು.

ಚಿನ್ನಯ್ಯ ಕಾಂಗ್ರೆಸ್‌ ಸ್ನೇಹಿತ: ಜೋಶಿ

 ಬೆಳ್ತಂಗಡಿ :  ಕಾಂಗ್ರೆಸ್ ಸ್ನೇಹಿತ ಚಿನ್ನಯ್ಯನಿಗೆ ಬುರುಡೆ ಎಲ್ಲಿಂದ ತಂದೆ ಅಂತ ಸಿದ್ದರಾಮಯ್ಯ ಸರ್ಕಾರ ಕೇಳಿಲ್ಲ. ಆತನ ಮಾತು ಕೇಳಿ ಧರ್ಮಸ್ಥಳದ ಬಾಹುಬಲಿ ಬೆಟ್ಟ ಸಹಿತ ಅನೇಕ ಕಡೆ ಅಗೆತ ಮಾಡಿದಿರಿ. ಇದೇ ರೀತಿ ಅನ್ಯಮತೀಯರ ಜಾಗದಲ್ಲಿ ಮಾಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು. ಅಲ್ಲದೆ ಹಿಂದುಗಳ ಸಹನೆಯನ್ನು ಸಿದ್ದರಾಮಯ್ಯ ಸರ್ಕಾರ ಕೆಣಕುತ್ತಿದೆ. ಅದಕ್ಕೆ ತಕ್ಕ ಉತ್ತರ ನೀಡಲು ಸಿದ್ಧ ಎಂದು ಎಚ್ಚರಿಕೆ ನೀಡಿದರು.

ಧರ್ಮಸ್ಥಳದಲ್ಲಿ ಸೋಮವಾರ ಬಿಜೆಪಿ ವತಿಯಿಂದ ಧರ್ಮಸ್ಥಳ ಚಲೋ, ನಮ್ಮ ನಡಿಗೆ ಧರ್ಮದೆಡೆಗೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಧಿಕ್ಕಾರವನ್ನು ಹೇಳಿಸುತ್ತಾ ಭಾಷಣ ಪ್ರಾರಂಭಿಸಿದ ಜೋಶಿ, ವೋಟ್ ಬ್ಯಾಂಕಿಗೋಸ್ಕರ ಕಾಂಗ್ರೆಸ್ ಹಿಂದೂ ಸಮಾಜವನ್ನು ಒಡೆಯಲು ಸಂಚು ರೂಪಿಸುತ್ತಿದೆ. ಮುಸುಕುಧಾರಿ ಕಾಂಗ್ರೆಸ್ ಸ್ನೇಹಿತ. ಅವನಿಗೆ ಒದಿಯಬೇಕು ಎಂದು ಅನಿಸಿಲ್ವಾ? ಆತ ಬುರುಡೆ ಎಲ್ಲಿಂದ ತಂದ. ಸೋಮವಾರ ಕೋರ್ಟ್‌ಗೆ ಬಂದ, ಭಾನುವಾರ ಎಸ್‌ಐಟಿ ರಚನೆ ಮಾಡಿದರು ಎಂದರು.

ಕಾಂಗ್ರೆಸ್‌ನಿಂದ ಷಡ್ಯಂತ್ರ:

ಆಪರೇಶನ್ ಸಿಂದೂರ ಆದಾಗ ಪಾಕಿಸ್ತಾನದವರು ಕೇಳಬೇಕಾದ ಪ್ರಶ್ನೆಗಳನ್ನು ಕಾಂಗ್ರೆಸ್‌ನವರು ಕೇಳಿದ್ದಾರೆ. ಆರಂಭದಿಂದಲೂ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಾ ಟ್ರಿಪಲ್ ತಲಾಕ್, ಸಿಐಎ, ಕಾಶ್ಮೀರದ ವಿಶೇಷ ವಿಧಿಯನ್ನು ವಿರೋಧಿಸುವ ಬದಲು ಪೋಷಿಸಿದೆ. ಬಹುಸಂಖ್ಯಾರ ವಿರುದ್ಧ ಕಾಂಗ್ರೆಸ್ ನಿರಂತರ ಷಡ್ಯಂತ್ರ ಮಾಡಿಕೊಂಡು ಬಂದಿದೆ. ಶಬರಿಮಲೆ, ಶನಿಶಿಂಗಣಾಪುರ, ಕಪಾಲಿ ಬೆಟ್ಟ, ಧರ್ಮಸ್ಥಳ ಇದೀಗ ಚಾಮುಂಡಿ ಬೆಟ್ಟದತ್ತ ಕಣ್ಣು ಹಾಕಿದೆ. ಹೀಗಾಗಿ ಇಂಥವರನ್ನು ಸಮಾಜ ತಿರಸ್ಕರಿಸಬೇಕು ಎಂದು ಹೇಳಿದರು.

ಕಳೆದ 30-40 ವರ್ಷಗಳಿಂದ ದಕ್ಷಿಣ ಕನ್ನಡದಲ್ಲಿನ ಹಿಂದುತ್ವದ ಶಕ್ತಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲದ ಕಾರಣಕ್ಕಾಗಿ ದೇವಾಲಯ, ಮಠ ಹಾಗೂ ಧಾರ್ಮಿಕ ಮುಖಂಡರ ನಡವಳಿಕೆಯನ್ನು ಪ್ರಶ್ನಿಸಲು, ಕೆದಕಲು ಪ್ರಾರಂಭಿಸಿದೆ. ಎಡಪಂಥೀಯರ ಜತೆ ಸೇರಿಕೊಂಡು ಧರ್ಮಸ್ಥಳದ ಅಣ್ಣಪ್ಪ, ಮಂಜುನಾಥನ ಮೇಲಿನ ಶ್ರದ್ಧೆಯನ್ನು ಕಡಿಮೆ ಮಾಡಬೇಕೆಂದು ಕುತಂತ್ರ ರೂಪಿಸಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ