ಹೊಸಪೇಟೆ: ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲವಿದ್ದು, ಇದನ್ನು ಸಮರ್ಥವಾಗಿ ಎದುರಿಸಲು ಕುಡಿಯುವ ನೀರು, ಮೇವು ಮತ್ತು ಜನರು ಗುಳೆ ಹೋಗದಂತೆ ಸ್ಥಳೀಯವಾಗಿ ಉದ್ಯೋಗ ನೀಡಲು ಕಂಟೆಂಜೆನ್ಸಿ ಪ್ಲಾನ್ ಮಾಡಲು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೊದಲ ಆದ್ಯತೆಯಾಗಿ ಜನ, ಜಾನುವಾರುಗಳಿಗೆ ನೀರು, ಮೇವು ಜತೆಗೆ ಉದ್ಯೋಗ ನೀಡಬೇಕು. ಎಲ್ ನಿನೋ ಪರಿಣಾಮದಿಂದ ಅನೇಕ ವರ್ಷಗಳಲ್ಲಿ ಕಂಡರಿಯದ ತೀವ್ರ ಬರಗಾಲವಿದೆ. ಜಿಲ್ಲೆಯಲ್ಲಿ ಮೇವು ಬೆಳೆಯಲು ಕಿಟ್ ವಿತರಿಸಬೇಕಿತ್ತು, ಅದು 3-4 ಅಡಿ ಎತ್ತರ ಬೆಳೆಯಬೇಕಿತ್ತು. ಕೆಎಂಎಫ್ ನಿಂದ ಹಾಲು ಉತ್ಪಾದಕರ ಮೂಲಕ ಮೇವು ಬೆಳೆಗೆ ಆದ್ಯತೆ ನೀಡಬೇಕಿತ್ತು, ಆದರೆ ವಿಜಯನಗರ ಜಿಲ್ಲೆಯಲ್ಲಿ ಇದಾಗಿಲ್ಲ. 41 ವಾರಗಳಿಗೆ ಆಗುವಷ್ಟು ಮೇವು ಇದೆ ಎಂದು ಅಂಕಿ ಅಂಶ ನೀಡಿದ್ದು ಇದು ಹೇಗೆ ಸಾಧ್ಯ ಎಂದು ವಿವರಿಸಲು ಅಧಿಕಾರಿಗಳಿಂದ ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಪರಿಶೀಲಿಸಲು ಸೂಚನೆ ನೀಡಿದರು.
ಸಭೆಗಳಲ್ಲಿ ಅಧಿಕಾರಿಗಳು ಮಂಡಿಸುವ ಅಂಕಿ-ಅಂಶಗಳು ವಾಸ್ತವಕ್ಕೆ ಹತ್ತಿರವಾಗಿರಬೇಕು. ಹಿಂದಿನ ವರ್ಷ ಹಾಗೂ ಪ್ರಸ್ತುತ ವರ್ಷದ ತುಲನಾತ್ಮಕ ಮಾಹಿತಿ ಅಧಿಕಾರಿಗಳ ಬೆರಳ ತುದಿಯಲ್ಲಿರಬೇಕು. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಇಲಾಖಾವಾರು ಪೂರ್ವಭಾವಿ ಸಭೆ ನಡೆಸಿ ಸಿದ್ಧರಾಗಿ ಬರಬೇಕು ಎಂದು ತಾಕೀತು ಮಾಡಿದರು.ಸೂಪರ್ ಎಲ್ ನಿನೋ'''' ಪ್ರಭಾವದಿಂದ ಕಳೆದ 125 ವರ್ಷಗಳಲ್ಲೇ ಕಾಣದಂತಹ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಶೇ. 98 ರಷ್ಟು ಬೆಳೆ ಹಾನಿಯಾಗಿದ್ದು, ಪ್ರಮುಖ ಜಲಾಶಯಗಳು ಹಾಗೂ ಕೆರೆಗಳು ಬತ್ತಿಹೋಗಿವೆ. ಕುಡಿಯುವ ನೀರಿಗೆ ತೀವ್ರ ಅಭಾವ ಎದುರಾಗುವ ಆತಂಕವಿದ್ದು, ಲಭ್ಯವಿರುವ ನೀರನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
15 ಲಕ್ಷ ನಿವೇಶನ ಹಂಚಿಕೆ ಮಹತ್ವಾಕಾಂಕ್ಷಿ ಯೋಜನೆ:ಸರ್ಕಾರವು ಬಡವರಿಗಾಗಿ 15 ಲಕ್ಷ ನಿವೇಶನ ನೀಡುವ ಬೃಹತ್ ಯೋಜನೆ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರತಿ ತಾಲೂಕು/ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 5,000 ನಿವೇಶನಗಳ ನಿರ್ಮಾಣಕ್ಕೆ ಅಗತ್ಯವಿರುವ ಸರ್ಕಾರಿ ಜಮೀನನ್ನು ಆದ್ಯತೆಯ ಮೇರೆಗೆ ಗುರುತಿಸಬೇಕು. ಆಯ್ದ ಸ್ಥಳಗಳಲ್ಲಿ ಮಾದರಿ ಗ್ರಾಮಗಳ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ನಿರ್ದೇಶನ ನೀಡಿದರು.