ಬರಪೀಡಿತ 5 ತಾಲೂಕನ್ನು ನಿಭಾಯಿಸಿ: ಡಿಸಿಎಂ ಡಾ.ಪರಮೇಶ್ವರ್

KannadaprabhaNewsNetwork |  
Published : Sep 03, 2026, 01:45 AM IST
 ಹನೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು  | Kannada Prabha

ಸಾರಾಂಶ

ಜಿಲ್ಲೆಯ ಐದು ತಾಲೂಕುಗಳು ತೀವ್ರ ಬರಪೀಡಿತ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಐದು ತಾಲೂಕುಗಳು ತೀವ್ರ ಬರಪೀಡಿತ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ, ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಹಾಗೂ ಹನೂರು ತಾಲೂಕಿನ ಅಜ್ಜೀಪುರದ ಬರಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಹನೂರು ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಬರ ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿದೆ. ಸರ್ಕಾರ ಬರ ನಿರ್ವಹಣೆ ಬಗ್ಗೆ ಬಹಳ ಗಂಭೀರವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬರವನ್ನು ಹಗುರವಾಗಿ ಪರಿಗಣಿಸಬಾರದು. ಜನರಿಗೆ ಕುಡಿಯುವ ನೀರು, ಆಹಾರ, ಉದ್ಯೋಗ, ಆರೋಗ್ಯ, ಜಾನುವಾರುಗಳಿಗೆ ಮೇವು-ನೀರು ಒದಗಿಸುವುದು ನಮ್ಮ ಮುಂದಿರುವ ಸವಾಲು ಎಂದು ಹೇಳಿದರು.

ಉದ್ಯೋಗ ಸೃಷ್ಟಿ ಕುಸಿತಕ್ಕೆ ಅಸಮಾಧಾನ:

ಚಾಮರಾಜನಗರದಲ್ಲಿ 2026ರ ಜುಲೈನಿಂದ ಈಚೆಗೆ ಕೇವಲ 0.81 ಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಸಲಾಗಿದೆ. ಆದರೆ ಕಳೆದ ವರ್ಷ ಇದೇ 2 ತಿಂಗಳಲ್ಲಿ 2.50 ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು. ಶೇ.67 ರಷ್ಟು ಕುಸಿತವಾಗಿದೆ. ಉತ್ತಮ ಮಳೆ ಬಂದ ವರ್ಷ 2.50 ಲಕ್ಷ ಉದ್ಯೋಗ ಸೃಷ್ಟಿಯಾದರೆ ಈ ವರ್ಷ ಯಾಕೆ ಇಷ್ಟು ಕಡಿಮೆ? ಜನರು ಉದ್ಯೋಗ ಕೇಳುತ್ತಿಲ್ಲವೇ? ಜಿಲ್ಲಾ ಪಂಚಾಯತ್ ಸಿಇಒ ಮತ್ತು ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಬೆಳೆ ವಿಮೆ ನೋಂದಣಿ ಕಡಿಮೆ:

ರಾಜ್ಯದಲ್ಲಿ 49.64 ಲಕ್ಷ ರೈತರ ಅರ್ಜಿಗಳಿಗೆ ಹಾಗೂ 33,17,167 ಹೆಕ್ಟೇರ್ ಭೂಮಿಗೆ ಬೆಳೆ ವಿಮೆ ಮಾಡಿಸಲಾಗಿದೆ. ಆದರೆ ಚಾಮರಾಜನಗರದಲ್ಲಿ ಕೇವಲ 18,436 ರೈತರು 9,984 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಉತ್ತೇಜನ ನೀಡಬೇಕು ಎಂದು ಸೂಚಿಸಿದರು.

ಮಳೆ ಕೊರತೆ ಅಂಕಿ-ಅಂಶ:

ಚಾಮರಾಜನಗರದಲ್ಲಿ ವಾಡಿಕೆ ಮಳೆ 193 ಮಿ.ಮೀ ಆಗಬೇಕಿತ್ತು, ಆದರೆ ಸುರಿದಿರುವುದು ಕೇವಲ 87 ಮಿ.ಮೀ. ಶೇ.55ರಷ್ಟು ಕೊರತೆಯಿದೆ. ಜಿಲ್ಲೆ ಕೊರತೆಯ ವರ್ಗದಲ್ಲಿದೆ. ಆಗಸ್ಟ್ ತಿಂಗಳಲ್ಲಿ ಶೇ.76 ರಷ್ಟು ಭಾರಿ ಮಳೆ ಕೊರತೆಯಾಗಿದೆ. ಕೊಳ್ಳೇಗಾಲದಲ್ಲಿ ಶೇ.67 ಮತ್ತು ಯಳಂದೂರಿನಲ್ಲಿ ಶೇ.65 ಮಳೆ ಕೊರತೆಯಾಗಿದೆ ಎಂದು ಮಾಹಿತಿ ನೀಡಿದರು.

ಕುಡಿಯುವ ನೀರು, ಮೇವು ಪರಿಸ್ಥಿತಿ

ಜಿಲ್ಲೆಯ 17 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, 48 ಗ್ರಾಮಗಳಿಗೆ 48 ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 11 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ. 1 ನಗರ ಸ್ಥಳೀಯ ಸಂಸ್ಥೆಯ 4 ವಾರ್ಡ್‌ಗಳಿಗೆ 2 ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಹನೂರು ಶಾಸಕ ಮಂಜುನಾಥ್, ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ, ಜಿಲ್ಲಾಧಿಕಾರಿ ಶ್ರೀರೂಪ, ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ರೈತರ ಪ್ರತಿಭಟನೆ
ಅಧ್ಯಾಪಕರು ಕೌಶಲ್ಯಗಳನ್ನು ರೂಪಿಸಿಕೊಳ್ಳಬೇಕು: ಪ್ರೊ.ಡಿ.ಎಸ್.ಪ್ರತಿಮಾ