ಕೈಹಿಡಿದ ಹವಾಮಾನ: ಉತ್ತಮ ಮಾವು ಫಸಲಿನ ನಿರೀಕ್ಷೆ

KannadaprabhaNewsNetwork |  
Published : Jan 21, 2025, 12:33 AM IST
ಮುಂಡಗೋಡ: ಪ್ರಸಕ್ತ ಸಾಲಿನಲ್ಲಿ ಮಾವಿನ ಮರಗಳೀಗ ಮೈ ತುಂಬ ಹೂ ಬಿಟ್ಟು ಕಾಯಿ ಕಚ್ಚುತಿದ್ದು, ಮಾವು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. | Kannada Prabha

ಸಾರಾಂಶ

ಬಾರಿ ಮಾವಿನ ಮರಗಳು ಭಾರಿ ಪ್ರಮಾಣದ ನೆನೆ ಬಿಟ್ಟಿದ್ದು, ಉತ್ತಮ ಫಸಲು ಬರುವ ನಿರೀಕ್ಷೆ ಮೂಡಿಸಿದೆ. ಮಾವು ಬೆಳೆಗಾರರು ಗಿಡಗಳ ಪೋಷಣೆಯಲ್ಲಿ ಸದ್ಯ ನಿರತರಾಗಿದ್ದಾರೆ.

ಸಂತೋಷ ದೈವಜ್ಞ

ಮುಂಡಗೋಡ: ಪ್ರಸಕ್ತ ಸಾಲಿನಲ್ಲಿ ಮಾವಿನ ಮರಗಳೀಗ ಮೈತುಂಬ ಹೂ ಬಿಟ್ಟು ಕಾಯಿ ಕಚ್ಚುತ್ತಿದ್ದು, ಮಾವು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಈ ಬಾರಿ ಮಾವಿನ ಮರಗಳು ಭಾರಿ ಪ್ರಮಾಣದ ನೆನೆ (ಹೂವು) ಬಿಟ್ಟಿದ್ದು, ಉತ್ತಮ ಫಸಲು ಬರುವ ನಿರೀಕ್ಷೆ ಮೂಡಿಸಿದೆ. ಮಾವು ಬೆಳೆಗಾರರು ಗಿಡಗಳ ಪೋಷಣೆಯಲ್ಲಿ ಸದ್ಯ ನಿರತರಾಗಿದ್ದಾರೆ.

ಕೆಲವು ಬಾರಿ ಅವಧಿಗೂ ಮುನ್ನ, ಅಂದರೆ ನವೆಂಬರ್, ಡಿಸೆಂಬರ್‌ ತಿಂಗಳಲ್ಲಿಯೇ ಮೈತುಂಬ ಹೂಬಿಟ್ಟು ಹವಾಮಾನ್ಯ ವೈಪರಿತ್ಯ ಅಥವಾ ಕೀಟಬಾಧೆಗೆ ತುತ್ತಾಗಿ ಅರ್ಧದಷ್ಟು ಹೂವು ಉದುರಿ ನಾಶವಾಗುತ್ತಿತ್ತು. ಆದರೆ, ಈ ಬಾರಿ ಇದುವರೆಗೂ ಮೂಡಗಾಳಿ, ಅಂಟು ಇಬ್ಬನಿ ಅಥವಾ ಕೀಟಬಾಧೆ ಕಾಣಿಸಿಕೊಳ್ಳದೇ ಇರುವುದು ಮಾವು ಬೆಳೆಗಾರರಲ್ಲಿ ಸಮಾಧಾನ ಮೂಡಿಸಿದೆ.

ತಾಲೂಕಿನಲ್ಲಿ ಸುಮಾರು ೫ ಸಾವಿರ ಎಕರೆ ಪ್ರದೇಶದಲ್ಲಿ ಆಪೂಸ್, ಪೈರಿ, ಇಸಾಡ್, ಸಿಂದೂಲಾ, ಮಾನಕೂರ, ಗಿಳಿಮಾವು, ಮಲ್ಲಿಕಾ, ಮಲಗೋಬಾ ಸೇರಿದಂತೆ ಹಲವಾರು ತಳಿಯ ಮಾವನ್ನು ಬೆಳೆಯಲಾಗಿದೆ. ಮಾವಿನ ಕಣಜ ಎಂದೇ ಪ್ರಸಿದ್ಧವಾಗಿರುವ ತಾಲೂಕಿನ ಪಾಳಾ ಭಾಗದಲ್ಲಿ ಲಕ್ಷಾಂತರ ರುಪಾಯಿ ನೀಡಿ ಗೇಣಿ ಹಿಡಿದ ದಲ್ಲಾಳಿಗಳು ಈಗಾಗಲೇ ತಮ್ಮ ಕಾರ್ಯ ಪ್ರಾರಂಭಿಸಿದ್ದಾರೆ. ತಾಲೂಕಿನ ಬಹುತೇಕ ಮಾವಿನ ತೋಪುಗಳನ್ನು ಗಿಡಗಳ ಸಂಖ್ಯೆ ಹಾಗೂ ಫಸಲು ಬಿಡುವ ಆಧಾರದ ಮೇಲೆ ಬೇರೆ ಬೇರೆ ಕಡೆಯಿಂದ ಬರುವ ಮಾವು ವ್ಯಾಪಾರಸ್ಥ ದಲ್ಲಾಳಿಗಳು ಗುತ್ತಿಗೆ ಪಡೆಯುತ್ತಾರೆ. ದಲ್ಲಾಳಿಗಳು ವರ್ಷ ವರ್ಷಕ್ಕೆ ದರ ಏರಿಸಿ, ಮಾವಿನ ಕೊಪ್ಪಲುಗಳನ್ನು ಗುತ್ತಿಗೆ ಪಡೆಯುತ್ತಾರೆ. ೩-೪ ತಿಂಗಳುಗಳ ಕಾಲ ಸಾವಿರಾರು ರುಪಾಯಿ ವೇತನ ನೀಡಿ ಕಾವಲುಗಾರನ್ನು ನೇಮಿಸಿ, ಔಷಧ ಸಿಂಪರಣೆ ಮಾಡುವುದು ಸೇರಿದಂತೆ ವಿವಿದ ರೀತಿಯ ನಿರ್ವಹಣೆ ಮಾಡುತ್ತಾರೆ. ಅದಕ್ಕಾಗಿ ಲಕ್ಷಾಂತರ ರುಪಾಯಿ ವ್ಯಯಿಸುತ್ತಾರೆ. ಪ್ರಾರಂಭದ ವಾತಾವರಣ ನೋಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಮಾವಿನ ತೋಟಗಳನ್ನು ಲಕ್ಷಾಂತರ ರುಪಾಯಿಗೆ ಗುತ್ತಿಗೆ ಪಡೆದು ಕೈ ಸುಟ್ಟುಕೊಂಡ ಅನುಭವ ಕೂಡ ಮಾವು ವ್ಯಾಪಾರಸ್ಥರಿಗಾಗಿದೆ.

ಇಲಾಖೆ ನಿರ್ಲಕ್ಷ್ಯ

ಇಲ್ಲಿ ಬತ್ತ, ಗೋವಿನಜೋಳ ಹೊರತುಪಡಿಸಿ ಇನ್ನಾವುದೇ ರೀತಿ ವಾಣಿಜ್ಯ ಬೆಳೆ ಬೆಳೆಯಲು ಅವಕಾಶ ಕಡಿಮೆ ಇರುವುದರಿಂದ ಇಲ್ಲಿಯ ಬಹುತೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಮಾವಿನ ತೋಪುಗಳನ್ನು ಮಾಡಿಕೊಂಡಿದ್ದಾರೆ. ಇಲ್ಲಿಂದ ಸಾಕಷ್ಟು ಪ್ರಮಾಣದ ಮಾವಿನ ಬೆಳೆ ವಿವಿಧ ರಾಜ್ಯಗಳಿಗೂ ರವಾನೆಯಾಗುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ ತೋಟಗಾರಿಕೆ ಇಲಾಖೆಯಿಂದ ಮಾವು ಬೆಳೆಗಾರರಿಗೆ ಸಮರ್ಪಕ ಮಾರ್ಗದರ್ಶನ ನೀಡುತ್ತಿಲ್ಲ, ಸರ್ಕಾರದಿಂದ ಬರುವ ಸಹಾಯಧನ ನೀಡಿ ಕೈತೊಳೆದುಕೊಳ್ಳುತ್ತಾರೆ ಎಂಬುದು ಮಾವು ಬೆಳೆಗಾರರ ಆರೋಪ. ಮಾವಿನ ಫಸಲಿನ ಪಾಲನೆ-ಪೋಷಣೆ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ. ಪೂರಕ ವಾತಾವರಣ

ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಮಾವಿನ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಹೂ ಬಿಟ್ಟಿದ್ದು, ಉತ್ತಮ ಫಸಲು ಬರುವ ನಿರೀಕ್ಷೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಈ ವರೆಗೆ ಶೇ. ೧೦೦ರಷ್ಟು ಪೂರಕ ವಾತಾವರಣವಿವೆ. ಇಲಾಖೆಯಿಂದ ನಿತ್ಯ ಮಾವಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದ್ದು, ಅಗತ್ಯ ಮುಂಜಾಗ್ರತಾ ಕ್ರಮವಾಗಿ ಮಾವು ಬೆಳೆಗಾರರಿಗೆ ಸೂಕ್ತ ಸಲಹೆ-ಸೂಚನೆ ನೀಡಲಾಗುತ್ತಿದೆ.

ಕೃಷ್ಣ ಕುಳ್ಳೂರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು

ಒಳ್ಳೆಯ ಫಸಲು

ಮಾವಿನ ಮರಗಳು ಉತ್ತಮ ಹೂವು ಬಿಟ್ಟಿದ್ದು, ಹೆಚ್ಚು ಫಸಲು ಬರುವ ನಿರೀಕ್ಷೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕೂಡ ಇಬ್ಬನಿ ಹಾಗೂ ಕೀಟಬಾಧೆ, ರೋಗ ಬಾರದಂತೆ ವಾತಾವರಣ ಕೈ ಹಿಡಿದರೆ ಒಳ್ಳೆಯ ಫಸಲು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಹ್ಮದಗೌಸ ಪಾಟೀಲ, ಮಾವು ಬೆಳೆಗಾರರು

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ