ಪಿಎಂ ಸೂರ್ಯ ಘರ್ ಯೋಜನೆಗೆ ಹಂಗಳ ಗ್ರಾಮ ಆಯ್ಕೆ

KannadaprabhaNewsNetwork |  
Published : Sep 08, 2025, 01:00 AM IST
7ಜಿಪಿಟಿ1ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮ ಪಂಚಾಯಿತಿ ಕಚೇರಿಯ ನೋಟ. | Kannada Prabha

ಸಾರಾಂಶ

ಪ್ರಧಾನಿ ಮಂತ್ರಿ ಸೂರ್ಯ ಘರ್‌ ಮುಫ್ತ್‌ ಬಿಜ್ಲಿ ಯೋಜನೆಗೆ ತಾಲೂಕಿನ ಕಾಡಂಚಿನ ಹಂಗಳ ಗ್ರಾಮ ಆಯ್ಕೆಯಾಗಿದ್ದು, ಮಾದರಿ ಸೌರ ಗ್ರಾಮವಾಗಿಸುವ ಸಲುವಾಗಿ ಸೆಸ್ಕಾಂ ಮತ್ತು ಹಂಗಳ ಗ್ರಾಮ ಪಂಚಾಯಿತಿ ಮುಂದಾಗಿವೆ.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಪ್ರಧಾನಿ ಮಂತ್ರಿ ಸೂರ್ಯ ಘರ್‌ ಮುಫ್ತ್‌ ಬಿಜ್ಲಿ ಯೋಜನೆಗೆ ತಾಲೂಕಿನ ಕಾಡಂಚಿನ ಹಂಗಳ ಗ್ರಾಮ ಆಯ್ಕೆಯಾಗಿದ್ದು, ಮಾದರಿ ಸೌರ ಗ್ರಾಮವಾಗಿಸುವ ಸಲುವಾಗಿ ಸೆಸ್ಕಾಂ ಮತ್ತು ಹಂಗಳ ಗ್ರಾಮ ಪಂಚಾಯಿತಿ ಮುಂದಾಗಿವೆ.

ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು, ಪ್ರಮುಖವಾಗಿ ಜನವಸತಿ ಪ್ರದೇಶದ ಜನರ ಮನೆಗಳ ಮೇಲೆ ಸೌರ ವಿದ್ಯುತ್‌ ಉತ್ಪಾದಿಸುವ ಪ್ಯಾನಲ್‌ ಅಳವಡಿಸಲಾಗುತ್ತದೆ. ವಿದ್ಯುತ್‌ ಕೊರತೆ ನೀಗಿಸುವ ಹಾಗೂ ದುಬಾರಿ ವೆಚ್ಚ ತಗ್ಗಿಸುವ ಮತ್ತು ಪರಿಸರ ಪೂರಕ ಹಸಿರು ಶಕ್ತಿ ಉತ್ಪಾದನೆ ಮಾಡುವ ಮನೆಗಳ ಮೇಲೆ ಸೌರ ವಿದ್ಯುತ್‌ ಉತ್ಪಾದನೆ ಮಾಡಬೇಕು ಎನ್ನುವ ಗುರಿಯೊಂದಿಗೆ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ತಂದಿದೆ.

ಮಾದರಿ ಸೌರ ಗ್ರಾಮ:

ಗ್ರಾಮ ಆಯ್ಕೆಯಾದ ಬಳಿಕ ಗ್ರಾಮವನ್ನು ಸಂಪೂರ್ಣವಾಗಿ ಸೌರ ಗ್ರಾಮವನ್ನಾಗಿಸುವುದು ಈ ಯೋಜನೆ ಉದ್ದೇಶ. ಕಳೆದ ಜೂನ್‌ನಲ್ಲಿ ಯೋಜನೆ ಜಾರಿಗೆ ಬಂದಿದ್ದು, ಈ ವರ್ಷದ ಅಂತ್ಯದೊಳಗೆ ಅತಿ ಹೆಚ್ಚು ಸಂಖ್ಯೆಯ ಫಲಾನುಭವಿಗಳು ಇರುವ ಗ್ರಾಪಂಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ಧನ ನೀಡಲಿದೆ. ಜೊತೆಗೆ ಗ್ರಾಮವನ್ನು ಮಾದರಿ ಸೌರ ಗ್ರಾಮವೆಂದು ಘೋಷಿಸಲಾಗುವುದು. ಯೋಜನೆ ಜಾರಿಗೆ ಆಯ್ಕೆಯಾದ ಗ್ರಾಮದಲ್ಲಿ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರಬೇಕು ಹಾಗಾಗಿ ಹಂಗಳ ಗ್ರಾಮವನ್ನು ಜಿಲ್ಲಾಡಳಿತ ಆಯ್ಕೆ ಮಾಡಿಕೊಂಡಿದೆ.

ಉದ್ದೇಶಗಳೇನು?

ಗ್ರಾಮವನ್ನು ಸಂಪೂರ್ಣವಾಗಿ ಸೌರ ವಿದ್ಯುತ್‌ ಬಳಕೆ ಗ್ರಾಮವನ್ನಾಗಿಸುವ ಮೂಲಕ ಪರಿಸರ ಪೂರಕ ಹಾಗೂ ನವೀಕರಿಸಬಹುದಾದ ಇಂಧನದ ಉತ್ಪಾದನೆಗೆ ಉತ್ತೇಜನೆಗೆ ನೀಡುವುದು. ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬಿಗಳನ್ನಾಗಿಸುವ ಮೂಲಕ ಆರ್ಥಿಕ ಹೊರೆ ತಗ್ಗಿಸುವ ಗ್ರಾಮದ ಜನರು ವಿದ್ಯುತ್‌ನ್ನು ಮಾರಾಟ ಮಾಡುವ ಸ್ಥಿತಿಗೆ ತರಬೇಕು ಎನ್ನುವುದು ಉದ್ದೇಶವಾಗಿದೆ.

ವಸತಿ ಪ್ರದೇಶಗಳಲ್ಲಿ ಯೋಜನೆ ಸ್ಥಾಪಿಸುವ ಜೊತೆಗೆ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ. ಸಮುದಾಯ ಘಟಕ ಸ್ಥಾಪನೆ, ಎನ್‌ಆರ್‌ಎಲ್‌ಎಂ ಮೂಲಕ ಸ್ವ ಸಹಾಯ ಗುಂಪುಗಳಿಗೆ ಘಟಕ ಸ್ಥಾಪನೆ, ಗ್ರಾಮದ ಕುಡಿಯುವ ನೀರು ಮತ್ತು ಬೀದಿ ದೀಪಗಳ ಅಳವಡಿಕೆಯಲ್ಲಿ ಸೋಲಾರ್‌ ಪ್ಯಾನಲ್‌ಗಳ ಬಳಕೆ, ಸರ್ಕಾರಿ ಕಟ್ಟಡ, ಕೃಷಿ ಪಂಪ್‌ ಸೆಟ್‌ ಗಳಿಗೆ ಸೋಲಾರ್‌ ಅಳವಡಿಕೆಗೆ ಅವಕಾಶವಿದೆ.

ಗ್ರಾಪಂ ಪಾತ್ರ ಮುಖ್ಯ:

ಈ ಯೋಜನೆ ಯಶಸ್ಸು ಸಾಧಿಸಲು ಗ್ರಾಪಂನ ಪಾತ್ರ ಬಹು ಮುಖ್ಯವಾಗಿದ್ದು, ಕೇಂದ್ರ ಸರ್ಕಾರದ ಸಬ್ಸಿಡಿ ಜೊತೆ ಬ್ಯಾಂಕ್‌ಗಳಲ್ಲಿ ಸೋಲಾರ್‌ ಅಳವಡಿಸಿಕೊಳ್ಳುವ ಜನರಿಗೆ ಸಾಲ, ನೋಂದಣಿಯಾದ ಫಲಾನುಭವಿಗೆ ಸೋಲಾರ್‌ ಅಳವಡಿಸುವಾಗ ಸಹಕಾರ ನೀಡಬೇಕು. ಪ್ರತಿ ಮನೆಗೆ ತೆರಳಿ ಯೋಜನೆ ಬಗ್ಗೆ ಉಪಯೋಗಳನ್ನು ತಿಳಿಸಬೇಕು ಹಾಗೂ ಫಲಾನುಭವಿಗಳ ಒಪ್ಪಿಸಬೇಕು.ಗೃಹಜ್ಯೋತಿ ಯೋಜನೆ ಹಿನ್ನೆಡೆಗೆ ಹೊಡೆತ ಸಾಧ್ಯತೆ?:ತಾಲೂಕಿನ ಹಂಗಳ ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಧನವಂತರು, ರಾಜಕೀಯ ಮತ್ತು ಆರ್ಥಿಕವಾಗಿ ಸದೃಡರಾದ ಸಮುದಾಯಗಳಿವೆ. ವಾಣಿಜ್ಯ ಉದ್ದೇಶ ಹಾಗೂ ರೆಸಾರ್ಟ್ ಮಾಲೀಕರು ಸೋಲಾರ್ ಪ್ಯಾನಲ್ ಅಳವಡಿಸಿಕೊಂಡಿದ್ದಾರೆ. ಈ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜ‌ನೆ ಅಡ್ಡಿಯಾಗುತ್ತದೆ ಎಂಬ ಮಾತಿದೆ. ರಾಜ್ಯದ ಜನರಿಗೆ ವಿದ್ಯುತ್‌ ಉಚಿತವಾಗಿ ಸಿಗುತ್ತಿದೆ. ಬಂಡವಾಳ ಹಾಕುವುದು ಏಕೆ ಎಂಬ ಮಾತಿದೆ. ಆದರೆ ಭವಿಷ್ಯದ ದೃಷ್ಟಿಯಿಂದ ವಿದ್ಯುತ್‌ ಸ್ವಾವಲಂಬನೆಗೆ ಗ್ರಾಮಸ್ಥರು ಈಗಲೇ ಅಳವಡಿಸಿಕೊಳ್ಳೋದು ಸೂಕ್ತ ಎಂದು ಗ್ರಾಮದ ಯುವಕರ ಮಾತಾಗಿದೆ.

ಯೋಜನೆ ನೋಂದಾಯಿಸಲು ಅವಕಾಶ:

ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಪೋರ್ಟಲ್‌ ಮೂಲಕ ಸೂರ್ಯ ಘರ್‌ ಯೋಜನೆಗೆ ಫಲಾನುಭವಿಗಳು ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಸೋಲಾರ್‌ ಪ್ಯಾನಲ್‌ ಅಳವಡಿಸುವ ಕಂಪನಿಗಳು ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ದೇಶೀಯ ತಂತ್ರ ಜ್ಞಾನ ಹಾಗೂ ಉಪಕರಣಳನ್ನೇ ಬಳಸಬೇಕು ಜೊತೆಗೆ ಸೋಲಾರ್‌ ಪ್ಯಾನಲ್‌ ಗಳನ್ನು ಅಳವಡಿಸಲು ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ಸಾಕಷ್ಟು ಕಂಪನಿಗಳು ಇವೆ.

ಗ್ರಾಮದ ಜನರ ಗುರಿಯಾಗಿಸಿಕೊಂಡು ಜಾರಿಗೆ ತಂದಿರುವ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿಯನ್ನು ನೀಡುತ್ತದೆ. ಒಂದು ಕೆವಿ ಪ್ರಮಾಣದ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯದ ಸೋಲಾರ್‌ ಪ್ಯಾನಲ್‌ಗೆ 30ಸಾವಿರ, 2 ಕೆವಿ ಸಾಮರ್ಥ್ಯದ ಸೋಲಾರ್‌ ಪ್ಯಾನಲ್‌ಗೆ 60 ಸಾವಿರ, 3 ಕೆವಿ ಸಾಮರ್ಥ್ಯದ ಸೋಲಾರ್‌ ಪ್ಯಾನಲ್‌ಗೆ 78 ಸಾವಿರ ಸಹಾಯ ಧನ ನಿರ್ಧರಿಸಲಾಗಿದೆ.

ಹಂಗಳ ಗ್ರಾಮ ಪಿಎಂ ಸೌರ ಘರ್‌ ಯೋಜನೆಗೆ ಆಯ್ಕೆಯಾಗಿದೆ. ಯೋಜನೆ ಕುರಿತು ಗ್ರಾಪಂ, ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೊದಲಿಗೆ ಮೂಡಿಸಬೇಕು. ಗ್ರಾಪಂ ಸದಸ್ಯರ ಸಭೆ ನಡೆಸಿ, ಯೋಜನೆ ಜಾರಿಗೆ ಶ್ರಮಿಸಲಾಗುವುದು.

-ಶಾಂತಮಲ್ಲಪ್ಪ, ಪಿಡಿಒ, ಹಂಗಳ

ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಲು ಸೌರ ಘರ್‌ ಯೋಜನೆ ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರ ಸಬ್ಸಿಡಿ ಕೂಡ ಘೋಷಿಸಿದೆ. ಹಂಗಳ ಗ್ರಾಪಂ ಸಹಯೋಗದಲ್ಲಿ ಯೋಜನೆ ಯಶಸ್ಸಿಗೆ ಸೆಸ್ಕಾಂ ಕೂಡ ನಿಲ್ಲಲಿದೆ. ಗ್ರಾಮಸ್ಥರ ಸಹಕಾರ ಅತ್ಯಗತ್ಯ.

-ಸಿದ್ದಲಿಂಗಪ್ಪ, ಸೆಸ್ಕಾಂ ಎಇಇ, ಗುಂಡ್ಲುಪೇಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''