ಕುಂಭೇನಹಳ್ಳಿಯ ಸಂಜೀವಿನಿ ಆಂಜನೇಯ ಸನ್ನಿಧಿಯಲ್ಲಿ ಹನುಮ ಜಯಂತಿ

KannadaprabhaNewsNetwork | Published : Dec 27, 2023 1:31 AM

ಸಾರಾಂಶ

ಹನುಮ ಪರ್ವತವನ್ನು ಕೊಂಡೊಯ್ಯುವಾಗ, ಆತನ ಪಾದಸ್ಪರ್ಶವಾಗಿದೆಯಂತೆ. ಅರಣ್ಯ ವಾಸದ ವೇಳೆ ರಾಮ ಲಕ್ಷ್ಮಣ, ಸೀತೆ ಈ ಕುಂಭೇನಹಳ್ಳಿ ಗ್ರಾಮದಲ್ಲಿ ತಂಗಿದ್ದರಂತೆ. ಅದಕ್ಕಾಗಿ ಊರ ಹೊರಗಿರುವ ಪಂಜೆಕಲ್ಲು ರಂಗಸ್ವಾಮಿಬೆಟ್ಟದಲ್ಲಿ ಅವರ ವಿಗ್ರಹಗಳಿದ್ದು, ಅದಕ್ಕೆ ತಲೆತಲಾಂತರದಿಂದ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

೪೯ನೇ ವರ್ಷದ ಸಂಜೀವಿನಿ ಆಂಜನೇಯ ಸನ್ನಿಧಿಯಲ್ಲಿ ಹನುಮ ಜಯಂತಿ ಕಾರ್ಯಕ್ರಮವನ್ನ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು.

ತಾಲೂಕಿನ ಶ್ರವಣಬೆಳಗೊಳ ಸಮೀಪದ ಕುಂಭೇನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಸಂಜೀವಿನಿ ಆಂಜನೇಯ ಸ್ವಾಮಿಗೆ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯ ನೆರವೇರಿದವು. ಮುಂಜಾನೆ ದೇವಸ್ಥಾನದ ಸಮೀಪ ಗಂಗಾ ಪೂಜೆ ಸಲ್ಲಿಸಿ, ನಂತರ ದೇವರಿಗೆ ಪಂಚಾಮೃತ ಅಭಿಷೇಕದ ಜೊತೆ ಕುಂಭಾಭಿಷೇಕವಾದ ಬಳಿಕ ನವಗ್ರಹ ಪೂಜೆ ಜೊತೆ ದೇವರಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು.

ಧರ್ಮ ಗ್ರಂಥಗಳ ಪ್ರಕಾರ ಹನುಮ ಜನಿಸಿದ ದಿನ ಈ ದಿನವನ್ನು ಶಿವನ ೧೧ನೇ ಅವತಾರ ಎಂದು ಕೂಡ ಕರೆಯಲಾಗುತ್ತದೆ. ರಾಮನಿಗೆ ತನ್ನ ಜೀವನವನ್ನೇ ಮುಡಿಪಿಟ್ಟಂತಹ ಮತ್ತು ದುಷ್ಟಶಕ್ತಿಗಳಿಗೆ ದುಃಸ್ವಪ್ನವಾಗಿ ಕಾಡಿದ ಅಪ್ರತಿಮ ವೀರ ಎಂದರೆ ಆತನೇ ಭಜರಂಗಿ. ಹೀಗಾಗಿ ಹೀಗಾಗಿ ಕುಂಬೇನಹಳ್ಳಿಯ ಸಂಜೀವಿನಿ ಆಂಜನೇಯನಿಗೆ ಬೆಳಗ್ಗೆ ತುಪ್ಪದಲ್ಲಿ ಮತ್ತು ಸಾಸಿವೆ ಎಣ್ಣೆಯಲ್ಲಿ ದೀಪಗಳನ್ನು ಹಚ್ಚಿ ಭಕ್ತಾದಿಗಳು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡರು. ಆದರೆ ಕುಂಭೇನಹಳ್ಳಿಯ ಆಂಜನೇಯನನ್ನು ಸಂಜೀವಿನಿ ಆಂಜನೇಯ ಎಂದು ಕರೆಯಲಾಗುತ್ತದೆ. ಕಾರಣ ಹನುಮ ಪರ್ವತವನ್ನು ಕೊಂಡೊಯ್ಯುವಾಗ, ಆತನ ಪಾದಸ್ಪರ್ಶವಾಗಿದೆಯಂತೆ. ಅರಣ್ಯ ವಾಸದ ವೇಳೆ ರಾಮ ಲಕ್ಷ್ಮಣ, ಸೀತೆ ಈ ಗ್ರಾಮದಲ್ಲಿ ತಂಗಿದ್ದರಂತೆ. ಅದಕ್ಕಾಗಿ ಊರ ಹೊರಗಿರುವ ಪಂಜೆಕಲ್ಲು ರಂಗಸ್ವಾಮಿಬೆಟ್ಟದಲ್ಲಿ ಅವರ ವಿಗ್ರಹಗಳಿದ್ದು, ಅದಕ್ಕೆ ತಲೆತಲಾಂತರದಿಂದ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ಇದೇ ವೇಳೆ ಮಾತನಾಡಿದ ಗ್ರಾಮದ ಮುಖಂಡರಾದ ವಾಸುದೇವ್, ನಮ್ಮ ದೇವರಿಗೆ ಒಂದು ಇತಿಹಾಸವೇ ಇದೆ ಶ್ರವಣಬೆಳಗೊಳದ ಗೊಮ್ಮಟೇಶ್ವರ ಕೆತ್ತನೆಯಾದ ಸಂದರ್ಭದಲ್ಲಿಯೇ ಸಂಜೀವಿನಿ ಆಂಜನೇಯ ಕೂಡ ಕೆತ್ತನೆಯಾಗಿದೆಯಂತೆ. ಮತ್ತೊಂದು ವಿಶೇಷ ಎಂದರೆ ದಕ್ಷಿಣ ಅಭಿಮುಖವಾಗಿ ನಿಂತಿರುವಂತಹ ಅಪರೂಪದ ದೇವಾಲಯ. ಗಂಗಾ ಪೂಜೆ ನೆರವೇರಿಸುವ ಮೂಲಕ ಸೂರ್ಯೋದಯಕ್ಕೂ ಮುನ್ನ ತೊಟ್ಟಿಲನ್ನು ಕಟ್ಟಿ, ಭಜರಂಗಿಯನ್ನು ಮಲಗಿಸಿ ತೊಟ್ಟಿಲು ತೂಗುವ ಶಾಸ್ತ್ರದ ಮೂಲಕ ಹನುಮ ಜಯಂತಿ ಆಚರಿಸುವ ಏಕೈಕ ಗ್ರಾಮ ಎಂದರೆ ಅದು ನಮ್ಮೂರು ಎನ್ನುತ್ತಾರೆ ಗ್ರಾಮಸ್ಥರಾದ ವಾಸುದೇವ್.

ನಮಗೆ ಮದುವೆಯಾಗಿ ೧೦ ವರ್ಷ ಕಳೆದರೂ ಮನೆಯಲ್ಲಿ ತೊಟ್ಟಿಲು ಕಟ್ಟಲು ಸಾಧ್ಯವಾಗಿರಲಿಲ್ಲ. ನಾವು ರಾಜ್ಯದ ನಾನಾ ದೇವಾಲಯಗಳಿಗೆ ಭೇಟಿ ನೀಡಿ ಸಂತಾನ ಫಲವನ್ನ ಬೇಡಿದವು. ಇದಲ್ಲದೆ ವೈದ್ಯರ ಬಳಿಯೂ ಸಾಕಷ್ಟು ಪರೀಕ್ಷೆಗಳನ್ನ ಮಾಡಿಸಿದ್ದೆವು. ಆದರೂ ಕೂಡ ಯಾವುದೇ ಫಲ ನಮಗೆ ದೊರಕಲಿಲ್ಲ. ಆದರೆ ಕುಂಬೇನಳ್ಳಿಯ ನಮ್ಮ ಸಂಬಂಧಿ ಒಬ್ಬರು ನಮ್ಮ ದೇವಾಲಯಕ್ಕೆ ಬಂದು ತೊಟ್ಟಿಲನ್ನು ತೂಗುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಹರಕೆ ಹೊತ್ತೆವು. ಆಶ್ಚರ್ಯ ಎಂಬಂತೆ ಕೇವಲ ನಾಲ್ಕು ತಿಂಗಳ ಒಳಗೆ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ ಎಂಬ ವಿಷಯ ತಿಳಿದು ಆಶ್ಚರ್ಯವಾಯಿತು. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಇಲ್ಲಿಗೆ ಬಂದು ಸತತವಾಗಿ ಪೂಜೆ ಸಲ್ಲಿಸುವ ಮೂಲಕ ನಮ್ಮ ಭಕ್ತಿಯನ್ನು ಸಮರ್ಪಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ಒಳಿತನ್ನು ಕಂಡ ಅಣ್ಣಪ್ಪ.

ಇನ್ನು ಹನುಮ ಜಯಂತಿಯ ಹಿನ್ನೆಲೆಯಲ್ಲಿ ಗ್ರಾಮ ಮದುವಣಗಿತ್ತಿಯಂತೆ ವಿದ್ಯುತ್ ಅಲಂಕಾರಗಳಿಂದ ಶೃಂಗಾರಗೊಂಡು ಕಂಗೊಳಿಸುತ್ತಿತ್ತು. ಉತ್ಸವ ಮೂರ್ತಿಯನ್ನು ತೆರೆದ ವಾಹನದಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಇದೇ ವೇಳೆ ಡೊಳ್ಳು ಕುಣಿತ, ವಾಲ್ ಡ್ರಮ್, ಮತ್ತು ವೀರಗಾಸೆ ಕುಣಿತ ಕಾಂತಾರ ನೃತ್ಯ ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಭಕ್ತರ ಮನಸ್ಸನ್ನ ತಣಿಸಿದರೆ, ಸಿಡಿ ಮದ್ದು ಗುಂಡಿನ ಪ್ರದರ್ಶನ ಯುವಜನತೆಯನ್ನು ಮನಸೂರೆಗೊಂಡಿತು. ಇದೇ ವೇಳೆ ಹನುಮನ ಭಕ್ತರು ಒಬ್ಬರು ಸುಮಾರು ೧೦೧ ಕೆ. ಜಿ ತೂಕದ ಹೂವಿನ ಹಾರವನ್ನು ದೇವರಿಗೆ ಹಾಕಿದ್ದು ವಿಶೇಷಗಳಲ್ಲಿ ವಿಶೇಷವಾಗಿತ್ತು.

Share this article