ಕನ್ನಡಪ್ರಭ ವಾರ್ತೆ ಆಲೂರು
ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿ ಮೂರು ವರ್ಷಗಳ ಹಿಂದೆ ನೂತನವಾಗಿ ಪ್ರತಿಷ್ಠಾಪಿಸಲ್ಪಟ್ಟಿರುವ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿ.೧೩ರಂದು ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಲಿವೆ.ಬೆಳಗ್ಗೆ ೭ರಿಂದ ಅಭಿಷೇಕ, ಮಹಾಪೂಜೆ ನಂತರ ೧೦ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ೧೧ ಗಂಟೆಗೆ ಸುಗಮ ಸಂಗೀತ ಏರ್ಪಡಿಸಲಾಗಿದ್ದು, ಪ್ರಸಾದ ವಿನಿಯೋಗದ ನಂತರ, ಸಂಜೆ ೪.೩೦ರಿಂದ ಶ್ರೀ ಸ್ವಾಮಿಯವರ ದಿವ್ಯ ಉತ್ಸವವು ಬೃಹತ್ ಮಂಟಪದ ಅಲಂಕಾರ ಮತ್ತು ಡಿಜೆ ಸೌಂಡ್ಸ್‌ನೊಂದಿಗೆ ಭಕ್ತರ ಸಮ್ಮುಖದಲ್ಲಿ ಪಟ್ಟಣದಲ್ಲಿ ನಡೆಯಲಿದೆ.
ಹಿನ್ನೆಲೆ: ತಾಲೂಕು ಕೇಂದ್ರವಾದ ಆಲೂರು ಪಟ್ಟಣದಲ್ಲಿ ಯಾವುದೇ ದೇವಸ್ಥಾನಗಳಿಲ್ಲದೆ ಬಿಕೋ ಎನಿಸುತ್ತಿತ್ತು. ತಾಲೂಕು ಕೇಂದ್ರದಲ್ಲಿರುವ ಎಲ್ಲ ಕಚೇರಿಗಳಲ್ಲಿರುವ ಬಹುತೇಕ ನೌಕರರು ಮತ್ತು ಜನಸಾಮಾನ್ಯರು ದಿನನಿತ್ಯ ದೇವಸ್ಥಾನಕ್ಕಾಗಿ ಸುಮಾರು ೬ ಕಿ. ಮೀ. ದೂರದಲ್ಲಿರುವ ದೇವಸ್ಥಾನಗಳಿಗೆ ಓಡಾಡುತ್ತಿದ್ದರು.ತಹಸೀಲ್ದಾರ್ ಒಬ್ಬರು ಪಟ್ಟಣದಲ್ಲೊಂದು ದೇವಸ್ಥಾನ ನಿರ್ಮಾಣ ಮಾಡಿ, ದಿನದಲ್ಲೊಮ್ಮೆ ಕೆಲಕಾಲ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕಲು ಮನಸ್ಸಿನ ಏಕಾಗ್ರತೆಗೆ ದೇವಾಲಯ ಅವಶ್ಯವಿದೆ ಎಂದು ಸ್ಥಳೀಯರಾದ ಎಂ. ಪಿ. ಹರೀಶ್ ಅವರೊಂದಿಗೆ ವಿಷಯ ಪ್ರಸ್ತಾಪಿಸಿದರು.
ತಕ್ಷಣ ಹೌಸಿಂಗ್ ಬೋರ್ಡ್‌ನಲ್ಲಿರುವ ಸ್ಥಳೀಯರಾದ ಸಿಮೆಂಟ್ ಕಾಂತರಾಜು, ನಂದೀಶ್, ಕೆಂಪೇಗೌಡ, ರವಿಕುಮಾರ್, ಬೆಟ್ಟದಯ್ಯ, ಕೇಶವಮೂರ್ತಿ ಇತರ ನಿವಾಸಿಗಳೊಂದಿಗೆ ಚರ್ಚಿಸಿ, ೨೦೧೨ರ ವಿಜಯದಶಮಿಯಂದು ಎರಡು ಕಣ್ಣು ದೃಷ್ಟಿ ಇರುವ ಅಭಯ ಆಂಜನೇಯಸ್ವಾಮಿ ದೇವರ ಮೂರ್ತಿಯನ್ನು ತಾತ್ಕಾಲಿಕ ಗುಡಿಯೊಂದರಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇವಾಲಯ ಕಟ್ಟಡವನ್ನು ಶಾಸಕರ ಅನುದಾನ, ಅನೇಕ ಭಕ್ತರ ಸಹಕಾರದೊಂದಿಗೆ ಸುಂದರ ದೇವಾಲಯ ನಿರ್ಮಾಣ ಮಾಡಿ, ೨೦೨೨ರಲ್ಲಿ ಪುನಃ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಅಂದಿನಿಂದ ಈವರೆಗೂ ಭಕ್ತರ ಸಹಕಾರದಿಂದ ದೇವಾಲಯದಲ್ಲಿ ಪ್ರತಿದಿನ ಪೂಜೆ, ಹೋಮ, ಹವನ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಿವೆ. ಹೌಸಿಂಗ್ ಬೋರ್ಡ್ ಯುವ ಬಳಗದವರು ದೇವಸ್ಥಾನ ಅಭಿವೃದ್ಧಿ ಕೆಲಸದಲ್ಲಿ ಮುನ್ನಡೆಯುತ್ತಿದ್ದಾರೆ.