ಕೊಪ್ಪಳ: ಅಂಜನಾದ್ರಿಯಲ್ಲಿ ನಡೆಯಲಿರುವ ಹನುಮಮಾಲಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಭಕ್ತರಿಗೆ ಕುಡಿಯಲು ಮತ್ತು ಸ್ನಾನಕ್ಕೆ ನೀರಿನ ವ್ಯವಸ್ಥೆ, ವಾಹನಗಳಿಗೆ ಪಾರ್ಕಿಂಗ್ ಸೇರಿದಂತೆ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡುತ್ತಿರುವುದನ್ನು ಬುಧವಾರ ಜಿಲ್ಲಾಧಿಕಾರಿ ನಳಿನ್ ಅತುಲ್ ಪರಿಶೀಲಿಸಿದರು.ಮೊದಲು ಅಂಜನಾದ್ರಿ ಬೆಟ್ಟದ ಹತ್ತಿರ, ಪಂಪಾ ಸರೋವರ, ಉತ್ಸವ ಸ್ಥಳ, ಆದಿಶಕ್ತಿ ದುರ್ಗಾದೇವಿ ಗುಡಿ ಹತ್ತಿರ, ರಾಂಪುರ, ಚಿಕ್ಕರಾಂಪುರ ಬಳಿಯ ಪಾರ್ಕಿಂಗ್ ವ್ಯವಸ್ಥೆಯನ್ನು ಖುದ್ದು ವೀಕ್ಷಿಸಿದರು. ಪಾರ್ಕಿಂಗ್ ಬಗ್ಗೆ ಜನರಿಗೆ ತಿಳಿಯುವ ಹಾಗೆ ಅಲ್ಲಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೂಚನಾ ಫಲಕ ಅಳವಡಿಸಲು ಸೂಚಿಸಿದರು.ಪ್ರಸಾದ ವಿತರಣೆ, ಲಡ್ಡು ವಿತರಣೆ ಸ್ಥಳದಲ್ಲಿನ ಸಿದ್ಧತೆಯನ್ನು ಖುದ್ದು ಪರಿಶೀಲಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಆಂಜನೇಯ ದರ್ಶನ ಮುಗಿಸಿ ಬರುವ ಭಕ್ತರು ಸಮರ್ಪಕ ಪ್ರಸಾದ ಪಡೆಯುವ ಸಂದರ್ಭದಲ್ಲಿ ಜನಸಂದಣಿಯಾಗದಂತೆ ಬ್ಯಾರಿಕೇಡ್ ಬಳಸಿ ಸೂಕ್ತ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.ಊಟ ಕೊಡುವ ಸ್ಥಳದಲ್ಲಿ ಗದ್ದಲವಾಗದಂತೆ ಅಚ್ಚುಕಟ್ಟಾಗಿ 10 ಕೌಂಟರ್ ಮಾಡುತ್ತೇವೆ. ಪ್ರಸಾದ ಪಡೆದ ಬಳಿಕ ಲಡ್ಡು ವಿತರಿಸಲು ಸಹ ಸೂಕ್ತ ಸಂಖ್ಯೆಯಲ್ಲಿ ಕೌಂಟರ್‌ಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸುವ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು ಎಂದು ಜಿಲಾಧಿಕಾರಿ, ಆಹಾರ ಸಮಿತಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಯಾವುದೇ ಅವಘಡಗಳು ಆಗದಂತೆ ಎಲ್ಲ ಕಡೆಗೆ ವಿದ್ಯುತ್ ಪೂರೈಕೆ ಮತ್ತು ಲೈಟಿಂಗ್ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಬಗೆಬಗೆಯ ವಿದ್ಯುದೀಪಗಳನ್ನು ಅಳವಡಿಸಿ ದೇವಸ್ಥಾನವನ್ನು ಅಂಜನಾದ್ರಿ ಬೆಟ್ಟವನ್ನು ಅಲಂಕಾರಗೊಳಿಸಬೇಕು ಎಂದು ಜಿಲ್ಲಾಧಿಕಾರಿ, ಜೆಸ್ಕಾಂ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಜಿಲ್ಲಾಧಿಕಾರಿ ವೇದಪಾಠ ಶಾಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಹನುಮಮಾಲಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಚಿಸಿದ ಎಲ್ಲ ಸಮಿತಿಗಳ ಅಧ್ಯಕ್ಷರು ಮತ್ತು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಇದುವರೆಗಿನ ಸಿದ್ಧತೆಯ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಒಪ್ಪಿಸಿದರು.ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ ಕೆ.ವಿ., ತಹಸೀಲ್ದಾರ ಶ್ರುತಿ, ತಾಪಂ ಇಓ ಲಕ್ಷ್ಮಿದೇವಿ, ಪೊಲೀಸ್ ಇಲಾಖೆಯ ಅಧಿಕಾರಿ ಸಿದ್ದಲಿಂಗಪ್ಪಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.