ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನಾನಾ ಗ್ರಾಮಗಳಲ್ಲಿನ ಆಂಜನೇಯಸ್ವಾಮಿ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಗುರುವಾರ ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು.
ಇತಿಹಾಸ ಪ್ರಸಿದ್ಧ ಕರಡಿಗುಡ್ಡದ ಹನುಮಪ್ಪ, ನವಲಿಯ ಭೋಗಾಪುರೇಶ, ಕನಕಗಿರಿಯ ವೀರ ಪ್ರತಾಪರಾಯ, ಸಂಜೀವ ಮೂರ್ತಿ, ಅಗಸಿ ಆಂಜನೇಯಸ್ವಾಮಿ, ತೇರಿನ ಹನುಮಪ್ಪ ಸೇರಿದಂತೆ ವಿವಿಧ ಪ್ರಾಣ ದೇವರುಗಳ ಸನ್ನಿಧಾನದಲ್ಲಿ ಹನುಮ ಜಯಂತಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಹನುಮ ಜಯಂತಿ ಹಿನ್ನೆಲೆಯಲ್ಲಿ ನಾನಾ ದೇಗುಲಗಳಲ್ಲಿ ತೀರ್ಥ,ಪ್ರಸಾದ, ಪಾನಕ ವಿತರಿಸಲಾಯಿತು.
ಪೀಠ ಪೂಜೆ: ಹನುಮ ಜಯಂತಿ ನಿಮಿತ್ತ ವಿಶಿಷ್ಟ ವ್ರತಾಚರಣೆ ಮಾಡಿದ ಹನುಮ ಮಾಲಾ ಭಕ್ತರಿಂದ ಇಲ್ಲಿನ ತೊಂಡಿತೇವರಪ್ಪ ದೇಗುಲದ ಸಮುದಾಯ ಭವನದಲ್ಲಿ ಪ್ರಾಣ ದೇವರ ಪೀಠ ಪೂಜೆ ನಡೆಯಿತು. ಹನುಮನ ಅಷ್ಟೋತ್ತರ, ಶತನಾಮಾವಳಿ, ಆರತಿ, ಚಾಲೀಸ್ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ 2026ರ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮವೂ ಜರುಗಿತು.