ಧಾರವಾಡ: ದವನದ ಹುಣ್ಣಿಮೆ ಅಂಗವಾಗಿ ಈ ವರ್ಷವೂ ಹುಬ್ಬಳ್ಳಿ-ಧಾರವಾಡ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹನುಮ, ಮಾರುತಿ, ಆಂಜನೇಯ ವಿವಿಧ ದೇವಸ್ಥಾನದಲ್ಲಿ ಬೆಳಗ್ಗೆ ಹನುಮ ದೇವರಿಗೆ ಅಭಿಷೇಕ, ಅಲಂಕಾರ, ಬಿಲ್ವಾರ್ಚಾನೆ, ನಾಮಕರಣದ ಜೊತೆಗೆ ಬಾಲ ಹನುಮನ ತೊಟ್ಟಲೋತ್ಸವ ಜರುಗಿತು.
ಧಾರವಾಡದ ಲೈನ್ ಬಜಾರ್, ನುಗ್ಗಿಕೇರಿ, ಶಾಂತಿನಿಕೇತನ ನಗರ ಮತ್ತು ವೀರಭದ್ರೇಶ್ವರ ಓಣಿ, ಯಾದವಾಡ, ಅಮ್ಮಿನಬಾವಿ ಒಳಗೊಂಡು ವಿವಿಧಡೆ ಆಂಜನೇಯ ದೇವರ ರಥೋತ್ಸವ ಸಾವಿರಾರು ಭಕ್ತರೊಂದಿಗೆ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು.ಬೆಂಜೋ ಮೇಳ, ಯುವಕರ ಜಗ್ಗಲಿಗೆ ಮೇಳ, ಯುವತಿಯರ ಡೊಳ್ಳು ಕುಣಿತ, ಕರಡಿ ಮಜಲು, ಝಾಂಜ್ ಮೇಳ, ಕರಾವಳಿ ಚೆಂಡೆ ವಾದ್ಯ ಸೇರಿದಂತೆ ಇತ್ಯಾದಿ ವಾದ್ಯಮೇಳ ಹನುಮ ದೇವರ ರಥೋತ್ಸವಕ್ಕೆ ಮೆರಗು ತುಂಬಿದವು.
ನಗರದ ಸಾರಸ್ವತಪುರದ ಬಾಲ ಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಕುಂಭ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಶನಿವಾರ ಅತ್ಯಂತ ವಿಜೃಂಬಣೆಯಿಂದ ಜರುಗಿತು.
ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಹನುಮ ಜಯಂತಿ ಅಂಗವಾಗಿ ವೀರಾಂಜನೇಯ ಸ್ವಾಮಿಯ ಅಲಂಕೃತ ಭಾವಚಿತ್ರದ ಭವ್ಯ ಮೆರವಣಿಗೆ ಶನಿವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಜರುಗಿತು.
ರಘೋತ್ತಮ ಅವಧಾನಿ, ಸಂಜೀವ ಗೋಳಸಂಗಿ, ಡಾ. ಶ್ರೀನಾಥ, ಡಾ. ರವಿ ದುಮ್ಮವಾಡ, ವೆಂಕಟೇಶ ಕುಲಕರ್ಣಿ, ಹನುಮಂತ ಪುರಾಣಿಕ, ಕೇಶವ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.