ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವ ಹಿಂದು ಪರಿಷತ್, ಬಜರಂಗದಳ- ದುರ್ಗಾವಾಹಿನಿ ಮತ್ತು ಶ್ರೀರಾಮಾಂಜಿನೇಯ ಮಹೋತ್ಸವ ಸಮಿತಿ ವಿತಯಿಂದ ಏಪ್ರಿಲ್ ೧೨ರ ಶನಿವಾರದಂದು ಹನುಮ ಜಯಂತಿಯ ಅಂಗವಾಗಿ ಡಿಜೆ ಸಮೇತ ಶೋಭಾಯಾತ್ರೆಯನ್ನು ಮಂಡ್ಯ ನಗರದಲ್ಲಿ ಆಯೋಜಿಸಲಾಗಿದೆ ಎಂದು ವಿಎಚ್‌ಪಿ ಸಹಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ, ಹಿಂದು ಧಾರ್ಮಿಕ ಆಚರಣೆಗಳ ವೇಳೆ ಅಹಿತಕರ ಘಟನೆಗಳನ್ನು ನಡೆಸಿ, ನಾವು ದುರ್ಬಲರು ಎಂಬುದನ್ನು ತೋರುವುದರ ವಿರುದ್ದ, ಸಮಾಜ ಆಸ್ತಿಗಳನ್ನು ವಕ್ಫ್‌ಗೆ ವರ್ಗಾಯಿಸಿ ಅನ್ಯಾಯ ಎಸಗುವುದರ ವಿರುದ್ಧ ಜಾಗೃತಿ ಮೂಡಿಸಲು ಶೋಭಾಯಾತ್ರೆ ನಡೆಸಲಾಗುತ್ತಿದೆ ಎಂದರು.
ಏಪ್ರಿಲ್ ೧೨ರ ಶನಿವಾರ ಮಧ್ಯಾಹ್ನ ೧೨ ಗಂಟೆಗೆ ನಗರದ ಕಾಳಿಕಾಂಭ ದೇವಾಲಯದ ಬಳಿ ಪ್ರಾರಂಭವಾಗುವ ಶೋಭಾಯಾತ್ರೆಯು ಪೇಟೆಬೀದಿ ಮೂಲಕ ಹೊಳಲು ಸರ್ಕಲ್, ಸಂಜಯ ಸರ್ಕಲ್, ಮಹಾವೀರ ಸರ್ಕಲ್, ಹೊಸಹಳ್ಳಿ ಸರ್ಕಲ್, ಕನ್ನಿಕಾ ಪರಮೇಶ್ವರಿ ವಾಟರ್ ಟ್ಯಾಂಕ್, ಕುರುಬರ ಹಾಸ್ಟೆಲ್ ಸರ್ಕಲ್ ಮಾರ್ಗವಾಗಿ ಮಂಡ್ಯ ವಿಶ್ವವಿದ್ಯಾಲಯ ಮೈದಾನ ತಲುಪಲಿದ್ದು ಸಮಾವೇಶ ನಡೆಸಲಾಗುವುದು ಎಂದರು.ಸಮಾವೇಶದ ದಿವ್ಯ ಸಾನಿಧ್ಯವನ್ನು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ನಿಶ್ಚಲಾನಂದನಾಥ ಸ್ವಾಮೀಜಿ ವಹಿಸಲಿದ್ದು, ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮ ವಹಿಸುವರು. ಪ್ರಾಸ್ತವಿಕ ನುಡಿಗಳನ್ನು ವಿಹೆಚ್‌ಪಿ ಸಹಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು ಆಡಲಿದ್ದು, ವಾಗ್ಮಿ, ಅಂಕಣಕಾರ, ಯುವ ಬ್ರಿಗೆಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡುವರು. ಧರ್ಮ ಪ್ರಸಾರ ಪ್ರಮುಖ್ ಸೂರ್ಯನಾರಾಯಣ, ವಿಹೆಚ್‌ಪಿ ಉಪಾಧ್ಯಕ್ಷ ಬಲರಾಮೇಗೌಡ, ಕಾರ್ಯದರ್ಶಿ ರಾಘವೇಂದ್ರ ಕೆ.ಪುಣ್ಯಕೋಟಿ, ಶ್ರೀರಾಮಾಂಜನೇಯ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಿಪಾಯಿ ಶ್ರೀನಿವಾಸ್, ಬಜರಂಗದಳದ ಸಹಯೋಜಕರಾದ ಬಸವರಾಜು, ಪುನೀತ್, ದುರ್ಗಾವಾಹಿನಿಯ ಸಂಯೋಜಕಿ ಕುಮಾರಿ ರೇಖಾ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.
ಏ.೧೨ಕ್ಕೆ ನಡೆಯಲಿರುವ ಶೋಭಾಯಾತ್ರೆಯ ಸಂಬಂಧ ಏ.೧೦ರಂದು ಬೈಕ್ ರ್‍ಯಾಲಿಯ ಮೂಲಕ ನಗರದಲ್ಲಿ ಶೋಭಾಯಾತ್ರೆಯ ಜಾಗೃತಿ ಮೂಡಿಸಲಾಗುವುದು. ಶೋಭಾಯಾತ್ರೆಯಲ್ಲಿ ೨೦ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಸಮಾವೇದಲ್ಲಿಯೂ ಉಪಸ್ಥಿತರಿರಲಿದ್ದಾರೆ. ಶೋಭಾಯಾತ್ರೆಯಲ್ಲಿ ಭಾಗವಹಿಸುವಂತೆ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳಿಯೂ ಆಹ್ವಾನಿಸಲಾಗಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.ಗೋಷ್ಠಿಯಲ್ಲಿ ವಿಎಚ್‌ಪಿ ರಾಘವೇಂದ್ರ ಕೆ.ಪುಣ್ಯಕೋಟಿ, ಉಪಾಧ್ಯಕ್ಷ ಬಲರಾಮೇಗೌಡ, ಮಂಡ್ಯ ತಾಲೂಕು ಅಧ್ಯಕ್ಷ ರಾಜಶೇಖರ, ಬಜರಂಗದಳದ ಸಹಯೋಜಕರಾದ ಬಸವರಾಜು ಇದ್ದರು.