ಕನ್ನಡಪ್ರಭ ವಾರ್ತೆ ಪಾವಗಡ
ರೊಪ್ಪ ಗ್ರಾಪಂ ಸದಸ್ಯ ಗೋರಸ್ ಮಾವು ಹನುಮಂತರಾಯಪ್ಪ ನಡೆಸಿರುವ ಅನಿರ್ದಿಷ್ಟಾವಧಿ ಮುಷ್ಕರ ಕೇವಲ ಸ್ವ ಹಿತಾಸಕ್ತಿ ಹಾಗೂ ದುರುದ್ದೇಶದಿಂದ ಕೂಡಿದೆ ಎಂದು ಗ್ರಾಪಂ ಅಧ್ಯಕ್ಷೆ ರೂಪ ನಾಗರಾಜ್ ತಿರುಗೇಟು ನೀಡಿದರು.ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ದೂರಿನ ಮೇರೆಗೆ ದಾಖಲೆ ಪರಿಶೀಲಿಸುವ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ್ದ ಲೇಔಟ್ ಅನುಮೋದನೆ ಮಂದೂಡಲಾಗಿದೆ. ಇದನ್ನೆ ನೆಪ ಮಾಡಿಕೊಂಡ ಗ್ರಾಪಂ ಸದಸ್ಯ ಗೋರಸ್ ಮಾವು ಹನುಮಂತರಾಯಪ್ಪ ಕಳೆದ 8ದಿನಗಳಿಂದ ಕೈಗೊಂಡಿರುವ ಮುಷ್ಕರದಿಂದ ಸಾರ್ವಜನಿಕರಿಗೆ ಲಾಭವಾಗುವಂತದಲ್ಲ ಜೊತೆಗೆ ಇದು ಸಾರ್ವಜನಿಕ ಸಮಸ್ಯೆಯೂ ಅಲ್ಲ ಎಂದು ಅಧ್ಯಕ್ಷೆ ರೂಪನಾಗರಾಜ್ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದರು.
ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ತಾಲೂಕಿನ ರೊಪ್ಪ ಗ್ರಾಪಂ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ. ಗ್ರಾಪಂ ಪ್ರಗತಿ ದತ್ತ ಸಾಗುತ್ತಿದ್ದು ಇದನ್ನು ಸಹಿಸದ ಸದಸ್ಯ ಹನುಮಂತರಾಯಪ್ಪ ಮುಷ್ಕರ ಕೈಗೊಳ್ಳುವ ಮೂಲಕ ರೊಪ್ಪ ಗ್ರಾಪಂಗೆ ಕೆಟ್ಟಹೆಸರು ತರುವ ಕೆಲಸದಲ್ಲಿ ನಿರತರಾಗಿದ್ದು ಅವರು ಕೈಗೊಂಡ ಮುಷ್ಕರ ಕುತಂತ್ರದ ಭಾಗವಾಗಿದೆ ಎಂದು ದೂರಿದರು.ರೊಪ್ಪ ಗ್ರಾಮ ವ್ಯಾಪ್ತಿಯ ಖಾಸಗಿ ವ್ಯಕ್ತಿಗೆ ಸೇರಿದ್ದ ಲೇ ಔಟ್ ಮಂಜೂರಾತಿ ಕುರಿತು ತೀರ್ಮಾನ ಕೈಗೊಳ್ಳಲು ವಿಷಯವನ್ನು ಮುಂದಿನ ಸಭೆಗೆ ಮುಂದೂಡಲಾಗಿತ್ತು. ಇದೇ ನೆಪ ಮಾಡಿಕೊಂಡ ಸದಸ್ಯ ಹನುಮಂತರಾಯಪ್ಪ ಮುಷ್ಕರ ನಡೆಸುತ್ತಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ತನಿಖೆ ನಡೆಸಿದ್ದಾರೆ.ಅಂತಹ ಅವ್ಯವಹಾರ ನಡೆದಿದ್ದರೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಬೊಮ್ಮತನಹಳ್ಳಿಯ ರಾಮಾಂಜಿನಪ್ಪ ಮಾತನಾಡಿ, ಮುಷ್ಕರ ನಡೆಸುತ್ತಿರುವ ಹನುಮಂತರಾಯಪ್ಪ ಪತ್ನಿ ಹೆಸರಿಗೆ ಪುರಸಭೆಯಿಂದ ಮನೆ ಮಂಜೂರಾತಿ ಪಡೆದಿದ್ದು ಇದು ಭ್ರಷ್ಟಾಚಾರ ಅಲ್ಲವೇ ? ಅವ್ಯವಹಾರದ ಬಗ್ಗೆ ಅರೋಪಿಸುವ ಸದಸ್ಯ ಸರ್ಕಾರದ ವಿವಿಧ ಯೋಜನೆ ಅಡಿ ಭ್ರಷ್ಟಾಚಾರ ವೆಸಗಿದ ಬಗ್ಗೆ ದಾಖಲೆಗಳಿವೆ ತನಿಖೆಗೆ ಸಿಇಒ ಹಾಗೂ ತಾಪಂಗೆ ದೂರು ಸಲ್ಲಿಸಲಾಗಿದೆ ಎಂದರು. ಈ ವೇಳೆ ಎಸ್.ಎಚ್.ವೆಂಕಟೇಶ್ ಮೂರ್ತಿ,ಲಕ್ಷ್ನೀ ನಾರಾಯಣ, ನಾಗಮಣಿ ಮೂರ್ತಿ, ರಾಧಮ್ಮ ವೆಂಕಟರಮಣಸ್ವಾಮಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.p