ಹನುಮಂತಪ್ಪರ ಆತ್ಮಸ್ಥೈರ್ಯ ಅನುಕರಣೀಯ: ಜಗದೀಶ

KannadaprabhaNewsNetwork |  
Published : Jun 04, 2024, 12:30 AM IST
3ಕೆಪಿಎಲ್21 ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2024 _25 ನೇ ಸಾಲಿನ ಕೊಪ್ಪಳ ಜಿಲ್ಲಾಮಟ್ಟದ ಸರ್ಕಾರಿ, ಖಾಸಗಿ, ಅನುದಾನ ಮತ್ತು ಅನುದಾನ ರಹಿತ ಕಾಲೇಜುಗಳ ಪ್ರಾಚಾರ್ಯರ ಪ್ರಥಮ ಸಭೆಯಲ್ಲಿ ಹನುಮಂತಪ್ಪ ಅಂಡಗಿ ಅವರನ್ನು ಸನ್ಮಾನ ಕಾರ್ಯಕ್ರಮ | Kannada Prabha

ಸಾರಾಂಶ

ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿಯೇ ಉಚಿತ ಪ್ರವೇಶ ದೊರಕಿಸಿಕೊಟ್ಟ ಕೀರ್ತಿ ಡಾ. ಹನುಮಂತಪ್ಪ ಅಂಡಗಿ ಅವರಿಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಡಾ. ಹನುಮಂತಪ್ಪ ಅಂಡಗಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ, ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರಿಯಾಶೀಲ ಪ್ರಭಾರಿ ಪ್ರಾಚಾರ್ಯರಾಗಿ, ಹಿರೇಸಿಂದೋಗಿಯ ದಾನಿಗಳಾದ ಬಸವರೆಡ್ಡಿ ಮಾದಿನೂರ, ಸದಾಶಿವ ರೆಡ್ಡಿ ಮಾದಿನೂರು ಇವರಿಂದ ದಾನ ಪಡೆದು ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿಯೇ ಉಚಿತ ಪ್ರವೇಶ ದೊರಕಿಸಿಕೊಟ್ಟ ಕೀರ್ತಿ ಡಾ. ಹನುಮಂತಪ್ಪ ಅಂಡಗಿ ಅವರಿಗೆ ಸಲ್ಲುತ್ತದೆ ಎಂದು ಕೊಪ್ಪಳದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಗದೀಶ ಜಿ.ಎಚ್. ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಜಿಲ್ಲಾಮಟ್ಟದ ಸರ್ಕಾರಿ, ಖಾಸಗಿ, ಅನುದಾನ ಮತ್ತು ಅನುದಾನ ರಹಿತ ಕಾಲೇಜುಗಳ ಪ್ರಾಚಾರ್ಯರ ಪ್ರಥಮ ಸಭೆಯಲ್ಲಿ ಹನುಮಂತಪ್ಪ ಅಂಡಗಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಹನುಮಂತಪ್ಪ ಅಂಡಗಿ ಜ್ಞಾನದಾಯಿಗಳು. ಸಾಹಿತಿಗಳು, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇಡೀ ಕರ್ನಾಟಕದಲ್ಲಿಯೇ ರಾಜ್ಯಮಟ್ಟದ 14ನೇ ಹಾಗೂ 17ನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ಕೊಪ್ಪಳ ಜಿಲ್ಲಾ ಮಟ್ಟದ 10 ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಂಡು ಕೊಪ್ಪಳದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದರು.

ಹನುಮಂತಪ್ಪ ಅಂಡಗಿ ಕಳೆದ ನಾಲ್ಕು ತಿಂಗಳಿಂದ ರೋಗದಿಂದ ಬಳಲುತ್ತಿದ್ದಾರೆ. ನಾವು ಅವರಿಗೆ ರೋಗದ ಬಗ್ಗೆ ಚಿಂತಿಸಬೇಡಿರಿ ಎಂದು ಹೇಳಬೇಕೆಂದರೆ, ಅವರೇ ನಮಗೆ ಧೈರ್ಯ ಹೇಳುತ್ತಿದ್ದು, ಅವರ ಆತ್ಮಸ್ಥೈರ್ಯ ಅನುಕರಣಿಯ ಹಾಗೂ ಮೆಚ್ಚುವಂಥದ್ದು ಎಂದರು.

ಸನ್ಮಾನ ಸ್ವೀಕರಿಸಿದ ಹನುಮಂತಪ್ಪ ಅಂಡಗಿ ಮಾತನಾಡಿ, ನನಗೆ ರೋಗ ಬಂದಿದೆ, ವಿನಃ ಸಾವು ಬಂದಿಲ್ಲ. ಹೀಗಾಗಿ ನಾನು ಎದೆಗುಂದದೆ ಮುಂದೆ ಸಾಗಿದ್ದೇನೆ. ಆದ್ದರಿಂದ ರೋಗ ಬಂದವರು ಅದು ರೋಗವೆಂದು ಭಾವಿಸಬೇಕೆ ವಿನಃ ಸಾವಲ್ಲ ಎಂದು ಪರಿಗಣಿಸಿ ಧೈರ್ಯದಿಂದ ಮುನ್ನುಗ್ಗಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಿ. ಅನಿಲಕುಮಾರ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಡಾ. ರವಿ ಚವ್ಹಾಣ್, ಬಸಪ್ಪ ನಾಗೋಲಿ, ರಾಜಶೇಖರ ಪಾಟೀಲ, ಬಸವರಾಜ ಮುನಿರಾಬಾದ, ಶರಣಪ್ಪ ಬೆಲೇರಿ, ಎಚ್.ಬಿ. ಜಗ್ಗಲ್, ಶಾಂತಪ್ಪ ತೋಟದ, ಎ.ಆರ್. ಶಿವಾನಂದ, ಎಚ್.ಎಸ್. ದೇವರಮನಿ, ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಮಾರುತಿ ಲಕಮಾಪುರ, ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಹೊಳಗುಂದಿ, ಉಪನ್ಯಾಸಕ ಎಸ್.ವಿ. ಮೇಳಿ ಉಪಸ್ಥಿತರಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?