ಹನೂರು ಪಪಂ ಒಳಚರಂಡಿ ಯೋಜನೆ: ₹81ಕೋಟಿ ಅಂದಾಜು ಪಟ್ಟಿಗೆ ಒಪ್ಪಿಗೆ

KannadaprabhaNewsNetwork |  
Published : Feb 08, 2025, 12:30 AM IST
7ಸಿಎಚ್‌ಎನ್‌51ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ  ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಮ್ತಾಜ್ ಬಾನು ಅಧ್ಯಕ್ಷತೆಯಲ್ಲಿ  ತುರ್ತು ಸಭೆ ನಡೆಯಿತು. | Kannada Prabha

ಸಾರಾಂಶ

ಹನೂರು ಪಪಂ ವ್ಯಾಪ್ತಿಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಮ್ತಾಜ್ ಬಾನು ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.

ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13 ವಾರ್ಡ್‌ಗಳಲ್ಲಿನ ಒಳಚರಂಡಿ ಯೋಜನೆಯ ₹81 ಕೋಟಿ ಅಂದಾಜು ಪಟ್ಟಿಗೆ ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪಪಂ ಅಧ್ಯಕ್ಷೆ ಮುಮ್ತಾಜ್ ಬಾನು ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಲಾಯಿತು. ಮೂರು ವಿಷಯಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಮುಖವಾಗಿ ಒಳ ಚರಂಡಿ ನಿರ್ಮಾಣ ಮಾಡಲು ₹81 ಕೋಟಿಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಒಳಚರಂಡಿ ಕಾಮಗಾರಿ ಪೂರ್ಣಗೊಂಡರೆ ಪಟ್ಟಣದಲ್ಲಿ ಚರಂಡಿ ಸಮಸ್ಯೆಯೇ ಇರುವುದಿಲ್ಲ ಇದರಿಂದ ಪಟ್ಟಣದ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು. ಪಪಂ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರವಿದೆ. ಉದ್ದೇಶಿತ ಒಳಚರಂಡಿ ನಿರ್ಮಾಣ ಮಾಡಲು ತಯಾರಿಸಿರುವ ಅಂದಾಜು ಪಟ್ಟಿಗೆ ಸರ್ವ ಸದಸ್ಯರು ಅನುಮೋದನೆ ನೀಡಿದರು.

ಪಪಂ ಮುಖ್ಯಾಧಿಕಾರಿ ಅಶೋಕ್ ಮಾತನಾಡಿ, ಪಪಂ ವ್ಯಾಪ್ತಿಯಲ್ಲಿ ಯುಜಿಡಿ, ನೂತನ ಕಚೇರಿ ನಿರ್ಮಾಣ ಎಲ್ಲ ವಾರ್ಡ್‌ಗಳಲ್ಲಿಯೂ ಸಿಸಿ ರಸ್ತೆ ನಿರ್ಮಾಣ, ವಿನೂತನ ಮಾದರಿಯ ಬೀದಿ ದೀಪ ಹಾಗೂ ಕುಡಿಯುವ ನೀರಿಗೆ 265 ಕೋಟಿಗಳ ಕ್ರಿಯಾಯೋಜನೆ ತಯಾರು ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿ ಕೊಡಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಅನುಮತಿ ದೊರೆತು ಅನುದಾನ ಬಿಡುಗಡೆಯಾದರೆ ಪಟ್ಟಣದ 13 ವಾರ್ಡ್‌ಗಳಲ್ಲಿಯೂ ಸಮಗ್ರ ಅಭಿವೃದ್ಧಿಯಾಗಲಿದೆ ಎಂದರು.

ನಾಮ ನಿರ್ದೇಶಿತ ಸದಸ್ಯ ಬಸವರಾಜು ಮಾತನಾಡಿ, ಪಪಂ ಮುಖ್ಯಾಧಿಕಾರಿಯಾಗಿ ಅಶೋಕ್ ಅಧಿಕಾರವಹಿಸಿಕೊಂಡ ನಂತರ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹ ಮಾಡುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ನಮ್ಮೆಲ್ಲರ ಸಹಕಾರ ಇರುತ್ತದೆ ಎಂದು ತಿಳಿಸಿದರು.

ಪಪಂ ಸದಸ್ಯ ಗಿರೀಶ್ ಮಾತನಾಡಿ, ಪಟ್ಟಣದಲ್ಲಿ 68 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಪ್ರಾರಂಭಿಸಬೇಕು. ಮುಂದಿನ ತಿಂಗಳು ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಪ್ರಾರಂಭವಾಗುವುದರಿಂದ ಆಯಾ ವಾರ್ಡ್‌ಗಳಲ್ಲಿ ಕೆಲಸ ಪ್ರಾರಂಭ ಮಾಡುವುದು ಬೇಡ. ಜಾತ್ರೆ ಮುಗಿದ ನಂತರ ಕೆಲಸ ಪ್ರಾರಂಭಿಸಲಿ ಎಂದು ಸಲಹೆ ನೀಡಿದರು.ಪಪಂ ಸದಸ್ಯ ಸಂಪತ್ ಕುಮಾರ್ ಮಾತನಾಡಿ, ₹23 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ ಅನುದಾನ ಮೀಸಲಿಟ್ಟಿದೆ. ಆದರೆ ಟೆಂಡರ್ ಪ್ರಕ್ರಿಯೆ ಮುಗಿಯದೆ ಇರುವುದರಿಂದ ಅನುದಾನ ಬಳಕೆ ಆಗುತ್ತಿಲ್ಲ, 2ನೇ ವಾರ್ಡಿನಿಂದ ಮೂರನೇ ವಾರ್ಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಹೆಚ್ಚಿನ ಅನುದಾನ ಕೊಡಿಸುವ ಮೂಲಕ ಕಾಮಗಾರಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಪಟ್ಟಣದ 13 ವಾರ್ಡಗಳಲ್ಲಿ ಕೈಗೊಂಡಿರುವ ₹68 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ಹಾಗೂ ಪಟ್ಟಣದಲ್ಲಿರುವ ಪ್ಯಾಸೆಂಜರ್ ಆಟೋಗಳನ್ನು ಖಾಸಗಿ ಬಸ್ ನಿಲ್ದಾಣ ಹಾಗೂ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ನಿಲ್ಲಿಸಿಕೊಳ್ಳಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಆನಂದ್ ಕುಮಾರ್, ಸದಸ್ಯರಾದ ಸೋಮಶೇಖರ್, ಸುದೇಶ್, ಮಹೇಶ್ ನಾಯಕ್, ಪವಿತ್ರ ಮಂಜುಳಾ, ರೂಪ, ಮಹೇಶ್ ನಾಮ ನಿರ್ದೇಶಿತ ಸದಸ್ಯರಾದ ಬಸವರಾಜು, ಮಹಾದೇಶ್, ನವೀನ್ ಹಾಗೂ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!