ಜಿ ದೇವರಾಜ ನಾಯ್ಡು
ಕನ್ನಡಪ್ರಭ ವಾರ್ತೆ ಹನೂರುತಾಲೂಕು ಕೇಂದ್ರವಾಗಿ ದಶಕ ಕಳೆದರೂ ಕೇಂದ್ರ ಸ್ಥಾನದಲ್ಲಿ ಭೂಮಾಪನ ಕಚೇರಿ ತೆರೆಯದೆ ನೂರಾರು ಕಿ.ಮೀ ಹೋಗಿ ಬರಬೇಕಾದ ಪರಿಸ್ಥಿತಿ ರೈತರಿಗೆ ಉಂಟಾಗಿದೆ.
ಹನೂರು ನೂತನ ತಾಲೂಕು ರಚನೆಯಾಗಿ ಈ ಹಿಂದೆ ಇದ್ದಂತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ 2013-14ನೇ ಸಾಲಿನಲ್ಲಿ ತಾಲೂಕು ರಚನೆಯಾಗಿ ಪಟ್ಟಣದ ಹೆಚ್ಚುವರಿ ತಹಸೀಲ್ದಾರ್ ಕಚೇರಿ ಹಾಗೂ ಪಡಸಾಲೆ ವಿವಿಧ ಕಚೇರಿಗಳು ತೆರೆಯಲಾಗಿದ್ದು, ನಂತರ ಜನವರಿ 2018ರಲ್ಲಿ ತಾಲೂಕು ಅಧಿಕೃತವಾಗಿ ಘೋಷಣೆಗೊಂಡು ಸರ್ಕಾರಿ ಕಚೇರಿಗಳು ಪಟ್ಟಣದಲ್ಲಿ ಒಂದೊಂದಾಗಿ ತೆರೆಯುತ್ತಿದ್ದರೂ ಸಹ ಭೂಮಾಪನ ಕಚೇರಿ ತೆರೆಯದೆ ರೈತರು ತಮ್ಮ ಜಮೀನಿನ ದಾಖಲೆಗಳಿಗಾಗಿ ಕೊಳ್ಳೇಗಾಲಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.ಭೂಮಾಪನ ಕಚೇರಿ ಬೇಡಿಕೆ:
ಪಟ್ಟಣದಲ್ಲಿ ಭೂಮಾಪನ ಕಚೇರಿ ತೆರೆಯುವಂತೆ ಕಳೆದ ಹತ್ತಾರು ವರ್ಷಗಳಿಂದ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಈ ಹಿಂದೆ ಇದ್ದಂತ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಹತ್ತಾರು ಬಾರಿ ಪ್ರತಿಭಟನೆ ನಡೆಸಿ ಗಮನಸೆಳೆದಿದ್ದರೂ ಇನ್ನು ಭೂಮಾಪನ ಕಚೇರಿ ತೆರೆಯಲು ವಿಳಂಬ ನೀತಿ ಅನಿಸುತ್ತಿರುವ ಸರ್ಕಾರ ಹಾಗೂ ಜಿಲ್ಲಾಡಳಿತ ಬಗ್ಗೆ ರೈತರು ಕೂಡಲೇ ಪಟ್ಟಣದಲ್ಲಿ ಕಚೇರಿ ತೆರೆದು ಪ್ರತ್ಯೇಕ ಅಧಿಕಾರಿ ಸಿಬ್ಬಂದಿ ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ.ದಾಖಲೆ ಪಡೆಯಲು ಅಲೆದಾಟ:
ಹನೂರು ನೂತನ ತಾಲೂಕಿನಲ್ಲಿ ಭೂಮಾಪನ ಕಚೇರಿ ಇಲ್ಲದೆ ರೈತರು ತಮಗೆ ಬೇಕಾದ ತಮ್ಮ ಜಮೀನಿನ ಸಂಬಂಧಿಸಿದ ದಾಖಲೆ ಪಡೆಯಲು ಎಫ್ಎಮ್ ಬಿ, ಗ್ರಾಮ ನಕಾಶೆ, ಆರ್‌ಆರ್, ಪಕ್ಕನಕಲು, ಆಕಾರ್ ಬಂದ್ ಇನ್ನಿತರ ದಾಖಲೆಗಳನ್ನು ಪಡೆಯಲು ಕೊಳ್ಳೇಗಾಲಕ್ಕೆ ತೆರಳಬೇಕಾದ ಅನಿವಾರ್ಯತೆಯಿಂದ ಸಮಸ್ಯೆ ಉಂಟಾಗಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸುವ ಮೂಲಕ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.ತಾಲೂಕು ಕೇಂದ್ರದಲ್ಲೇ ವ್ಯವಸ್ಥೆಗೆ ಆಗ್ರಹ:
ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ದಾಖಲೆ ಪಡೆಯಲು ಗೋಪಿನಾಥಂ, ಮಲೆಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲಕ್ಕೆ 150 ಕಿ.ಮೀ ದೂರ ಇರುವುದರಿಂದ ತೊಂದರೆಯಾಗಿದ್ದು ಇತ್ತ ಕಡೆ ಬೈಲೂರಿನಿಂದ ಕೊಳ್ಳೇಗಾಲಕ್ಕೆ 70 ಕಿ.ಮೀ, ಮತ್ತೊಂದೆಡೆ ಗಾಣಿಗಮಂಗಲದಿಂದ ಕೊಳ್ಳೇಗಾಲಕ್ಕೆ 60 ಕಿ.ಮೀ ದೂರದಲ್ಲಿದೆ. ಪಟ್ಟಣದಲ್ಲಿ ಕಚೇರಿ ತೆರೆದರೆ ಎಲ್ಲಾ ದಾಖಲೆಗಳು ಒಂದೇ ಸೂರಿನಡಿ ಅಗತ್ಯ ದಾಖಲೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸುವಂತೆ ರೈತರು ಒತ್ತಾಯಿಸಿದ್ದಾರೆಮಜರೆ, ಕಂದಾಯ ಗ್ರಾಮಗಳು:
ಹನೂರು ತಾಲೂಕಿಗೆ 3 ಹೋಬಳಿಗಳಾಗಿ ವಿಂಗಡಿಸಲಾಗಿತ್ತು. ಹನೂರು, ಲೊಕ್ಕನಹಳ್ಳಿ ಮತ್ತು ರಾಮಾಪುರ ಹೋಬಳಿಗಳಿಂದ 50ಕ್ಕೂ ಹೆಚ್ಚು ಕಂದಾಯ ಗ್ರಾಮಗಳು ಉಳಿದಂತೆ ನೂರಕ್ಕೂ ಹೆಚ್ಚು ಮಜರೇ ಗ್ರಾಮಗಳಾಗಿದ್ದು ಹನೂರು ತಾಲೂಕು ಕೊಳ್ಳೇಗಾಲ ತಾಲೂಕುಗಿಂತ ವಿಸ್ತಾರವಾಗಿ ದೊಡ್ಡ ತಾಲೂಕಾಗಿರುವುದರಿಂದ ಇಲ್ಲಿ ರೈತರು ಜಮೀನುಗಳ ದಾಖಲೆಗಳನ್ನು ಪಡೆಯಲು ಪಟ್ಟಣದ ಕೇಂದ್ರ ಸ್ಥಾನದಲ್ಲಿ ಭೂಮಾಪನ ಕಚೇರಿ ತೆರೆಯಲು ರೈತರು ಒತ್ತಾಯಿಸಿದ್ದಾರೆ. ದೊಡ್ಡ ತಾಲೂಕು ಸರ್ಕಾರಿ ಕೆಲಸಗಳಿಗೆ ಹಿನ್ನಡೆ: ತಾಲೂಕಿನಲ್ಲಿ ಸರ್ಕಾರಿ ಕೆರೆಕಟ್ಟೆಗಳು, ಸರ್ಕಾರಿ ದಾರಿಗಳು, ಸಮಸ್ಯೆಗಳನ್ನು ರೈತರು ಬಗೆಹರಿಸುವಂತೆ ದಿನನಿತ್ಯ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದರೂ ಇನ್ನೂ ಕೆಲವು ಇತ್ಯರ್ಥಗೊಳ್ಳದೆ ಹಾಗೆ ಉಳಿದಿರುವ ನಿರ್ದರ್ಶನಗಳು ಉಳಿದಿದೆ. ಜೊತೆಗೆ ಅರಣ್ಯ ಪ್ರದೇಶದ ಭಾಗದಲ್ಲಿ ಬರುವ ಕಿರಾಪತಿ ಹಾಗೂ ವಿವಿಧ ಗ್ರಾಮಗಳಲ್ಲಿ ಇನ್ನೂ ಕೂಡ ಅರಣ್ಯ ಇಲಾಖೆ ಹಾಗೂ ರೈತರ ಜಮೀನುಗಳು ಪ್ರತ್ಯೇಕ ಪೋಡಿ ಮಾಡದೆ ಜಮೀನುಗಳನ್ನು ರೈತರಿಗೆ ಸರ್ಕಾರಿ ಸೌಲತ್ತು ಸಿಗದೇ ಪರದಾಡುವಂತಾಗಿದೆ.ಪ್ರತ್ಯೇಕ ತಾಲೂಕಿಗೆ ಬೇಕಾಗಿದೆ ಅಧಿಕಾರಿ ವರ್ಗ:
ದೊಡ್ಡ ತಾಲೂಕು ಆಗಿರುವುದರಿಂದ ಇಲ್ಲಿಗೆ ಭೂಮಾಪನ ಇಲಾಖೆಯ ಎಡಿಎಲ್ಆರ್, ಸೂಪರಿಡೆಂಟ್ ಮತ್ತು ತಾಲೂಕಿನ ಜಮೀನುಗಳನ್ನು ಅಳತೆ ಮಾಡಿ ತುರ್ತಾಗಿ ರೈತರಿಗೆ ಕೆಲಸ ಮಾಡಲು ಭೂಮಾಪನ ಸರ್ವೆಯರ್‌ಗಳನ್ನು ನೇಮಕ ಮಾಡಬೇಕಾಗಿದೆ. ಜನಪ್ರತಿನಿಧಿಗಳ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದ ರೈತರು ನೂರಾರು ಕಿ.ಮೀ ಕೊಳ್ಳೇಗಾಲಕ್ಕೆ ಹೋಗಬೇಕಾಗಿರುವುದರಿಂದ ಸಂಬಂಧಪಟ್ಟವರು ಕೂಡಲೇ ಕ್ರಮವಹಿಸಿ ಭೂಮಾಪನ ಕಚೇರಿ ತೆರೆದು ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಮಾಡಬೇಕಾಗಿದೆ.ದೊಡ್ಡ ತಾಲೂಕು ಹಾಗೂ ಬೆಟ್ಟಗುಡ್ಡಗಳಿಂದ ವಿಸ್ತಾರವಾದ ತಾಲೂಕಿಗೆ ಬೇಕಾಗಿದೆ ಪ್ರತ್ಯೇಕ ಭೂಮಾಪನ ಕಚೇರಿ. ರೈತರಿಗೆ ಬೇಕಾದ ದಾಖಲಾತಿ ಪಡೆಯಲು ಇಲ್ಲಿನ ಸಮಸ್ಯೆ ಅರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಪಟ್ಟಣದ ಕೇಂದ್ರ ಸ್ಥಾನದಲ್ಲಿ ಕಚೇರಿ ತೆರೆದು ಅಧಿಕಾರಿ ವರ್ಗ ನೇಮಕ ಮಾಡಿ ರೈತರು ಕೊಳ್ಳೇಗಾಲಕ್ಕೆ ಅಲೆಯುವುದನ್ನು ತಪ್ಪಿಸಲು ಕ್ರಮ ವಹಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ಸಂಘ ಸಂಸ್ಥೆಗಳ ಜೊತೆ ಸಂಘಟನೆಯ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.-ಹೊನ್ನೂರ್ ಪ್ರಕಾಶ್, ಹಸಿರುಸೇನೆ ಜಿಲ್ಲಾಧ್ಯಕ್ಷ
ಪಟ್ಟಣದಲ್ಲಿ ಭೂಮಾಪನ ಇಲಾಖೆ ಕಚೇರಿ ತೆರೆಯಲು ಸಮೀಪದಲ್ಲಿರುವ ಅಂಗನವಾಡಿ ಕೇಂದ್ರವನ್ನು ಸರ್ಕಾರಿ ಶಾಲೆಗೆ ವರ್ಗಾಯಿಸಿ ಅಲ್ಲಿ ಭೂಮಾಪನ ಇಲಾಖೆಗೆ ಬೇಕಾಗಿರುವ ಸ್ಥಳವಕಾಶವನ್ನು ಕಲ್ಪಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ವಹಿಸಲಾಗಿದೆ. ತುರ್ತಾಗಿ ಹನೂರಿಗೆ ಭೂಮಾಪನ ಕಚೇರಿ ಬೇಕಾಗಿದೆ. ರೈತರು ಜಮೀನುಗಳ ನಕಾಶೆ ಪಡೆಯಲು ಕೊಳ್ಳೇಗಾಲಕ್ಕೆ ಅಲೆಯುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.-ಗುರುಪ್ರಸಾದ್, ಹನೂರು ತಾಲೂಕು ದಂಡಾಧಿಕಾರಿ,ಪಟ್ಟಣದಲ್ಲಿ ಭೂಮಾಪನ ಕಚೇರಿ ತೆರೆಯಲು ನಿವೇಶನ ಸಮಸ್ಯೆ ಇದ್ದು ಸರ್ಕಾರಿ ಕಚೇರಿ ನೀಡಿದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು. ತಾಲೂಕು ದಂಡಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.-ವಿದ್ಯಾಯಿನಿ, ಡಿಡಿಎಲ್ ಭೂಮಾಪನ ಇಲಾಖೆ ಚಾಮರಾಜನಗರ.
ಭೂಮಾಪನ ಕಚೇರಿ ತೆರೆಯಲು ಶಾಸನ ಸಭೆಯಲ್ಲಿ ಸಹ ಚರ್ಚಿಸಲಾಗಿದೆ. ಸಂಬಂಧಿಸಿದ ಸಚಿವರು ಹಾಗೂ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಭೂಮಾಪನ ಕಚೇರಿ ತೆರೆದು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.-ಎಂ.ಆರ್. ಮಂಜುನಾಥ್, ಹನೂರು ಶಾಸಕರು