ಉಡುಪಿ: ವಿದ್ಯಾರ್ಥಿಗಳು ಈ ದೇಶದ ಶಕ್ತಿ. ನಮ್ಮ ಬುದ್ದಿ ವಿದ್ಯೆ ಎಲ್ಲವೂ ದೇಶದ ಏಳಿಗೆಗೆ ಪೂರಕವಾಗಿರಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಸದಾ ಉಪಾಸನೆ, ಉಪಯೋಗ, ಉಪದೇಶದ ಕುರಿತು ಚಿಂತಿಸಿದರೆ ಉತ್ತಮ. ಧ್ಯಾನ, ಸಾತ್ವಿಕ ಆಹಾರ, ಜಾಗೃತ ಮನೋಭಾವದೊಂದಿಗೆ ದೇಶ ಕಟ್ಟುವ ಕಾಯಕದಲ್ಲಿ ನಮ್ಮ ವಿದ್ಯಾರ್ಥಿಗಳು ನಿರತರಾಗಿರಬೇಕು ಎಂದು ಅದಮಾರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹಾರೈಸಿದರು. ಅವರು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ನಿಟ್ಟೆಯ ಭಾರತೀಯ ಜ್ಞಾನ ವ್ಯವಸ್ಥಾಪನಾ ಕೇಂದ್ರದ ನಿರ್ದೇಶಕ ಡಾ. ಸುಧೀರ್ ರಾಜ್ ಕೆ. ಅವರು, ಭಗವದ್ಗೀತೆಯಲ್ಲಿ ನಮ್ಮ ಜೀವನದ ಯಶಸ್ವಿಗೆ ಬೇಕಾದ ಎಲ್ಲಾ ಮೌಲ್ಯಗಳು ದೊರಕುತ್ತವೆ. ಜಗದ್ಗುರು ಶ್ರೀ ಕೃಷ್ಣನು ಅರ್ಜುನನಿಗೆ ಅಂದು ಮಾಡಿದ ಉಪದೇಶವು ನಮ್ಮ ಇಂದಿನ ವಿದ್ಯಾರ್ಥಿಗಳಿಗೂ ಅವರ ಬದುಕಿನ ಸವಾಲುಗಳನ್ನು ಎದುರಿಸಲು ಅತ್ಯುತ್ತಮ ಸಾಧನ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಟಿ. ಪ್ರಶಾಂತ್ ಹೊಳ್ಳ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್, ಐಕ್ಯುಎಸಿ ಸಂಯೋಜಕ ಡಾ. ರಾಘವೇಂದ್ರ ಎಲ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ವಿನಾಯಕ್ ಪೈ ಹಾಗೂ ಡಾ. ಪ್ರಜ್ಞಾ ಮಾರ್ಪಳ್ಳಿ ಉಪಸ್ಥಿತರಿದ್ದರು.ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷ ಗಗನ್ ಕೆ. ಸುವರ್ಣ, ಉಪಾಧ್ಯಕ್ಷ ಧೀರಜ್, ಕಾರ್ಯದರ್ಶಿ ಕು. ಖುಷಿ, ಉಪಕಾರ್ಯದರ್ಶಿ ಉಜ್ವಲ ನಾಯಕ್ ಹಾಗೂ ತರಗತಿಯ ವಿದ್ಯಾರ್ಥಿ ಪ್ರತಿನಿಧಿಗಳನ್ನೂ, ವಿವಿಧ ಸಂಘಗಳ ಪ್ರತಿನಿಧಿಗಳನ್ನು ಶ್ರೀಪಾದರು ಅನುಗ್ರಹಿಸಿದರು.ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಲವಿಟ ಡಿಸೋಜ, ಗೌರಿ ಶೆಣೈ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಜಿಗಳೂರು ಅವರ ಕೃತಿಗಳನ್ನು ಶ್ರೀಪಾದರು ಲೋಕಾರ್ಪಣೆಗೊಳಿಸಿದರು. ಡಾ.ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ವಿನಾಯಕ್ ಪೈ ವಂದಿಸಿದರು. ವಿದ್ಯಾರ್ಥಿನಿ ಕು. ರಾನಿಯಾ ನಿರೂಪಿಸಿದರು.