ಯಲ್ಲಾಪುರ: ಜಡ ವಸ್ತುವಿನಲ್ಲಿರುವ ಸುಖ ಶಾಶ್ವತವಲ್ಲ. ಚೈತನ್ಯ ಸುಖ ಶಾಶ್ವತವಾದುದು ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಬಾಹ್ಯಶಕ್ತಿಯ ಆಸೆಯ ಭೋಗಕ್ಕೆ ಒಳಗಾಗದೇ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಮರುಳಾಗದೇ ನಮ್ಮ ಧರ್ಮದ ಪರಂಪರೆ, ಮೌಲ್ಯವನ್ನು ನಮಗೆ ಋಷಿಮುನಿಗಳು ನೀಡಿದ ದಾರಿಯಲ್ಲಿ ಸಾಗಿದಾಗ ಮಾತ್ರ ಸಕಲವೂ ಸಿದ್ಧಿಸುತ್ತದೆ. ಹಿಂದೂ ಧರ್ಮದಲ್ಲಿ ಮಾತ್ರ ವಿಗ್ರಹ ಪೂಜೆಯಿದೆ. ವಿಗ್ರಹ ಪೂಜೆಯನ್ನು ಮಾಡುವ ಮೂಲಕ ನಮ್ಮ ಹೃದಯದಲ್ಲಿ ಭಗವಂತನನ್ನು ಸ್ಥಾಪಿಸಿಕೊಂಡು ಆಧ್ಯಾತ್ಮಿಕ ಶಕ್ತಿ ಜಾಗ್ರತಗೊಳಿಸಿದಾಗ ಮಾತ್ರ ನಾವು ಉತ್ಕೃಷ್ಟತೆ ಪಡೆಯಬಹುದು ಎಂದು ಹೇಳಿದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಭಗವಂತನಿಗೆ ಯಾರ ಬಳಿ ಯಾವ ಕೆಲಸ ಮಾಡಿಸಬೇಕು ಎನ್ನುವುದು ಗೊತ್ತಿದೆ. ಆ ಕೆಲಸವನ್ನು ಭಗವಂತ ಆತನಿಂದ ಮಾಡಿಸುತ್ತಾನೆ ಎಂದು ಹೇಳಿದರು.ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಗಣಪತಿ ಎನ್. ಭಟ್ಟ ನಡಿಗೆಮನೆ ಮಾತನಾಡಿ, ನಮ್ಮ ಸನಾತನ ಸಂಸ್ಕೃತಿ, ಪರಂಪರೆಯನ್ನು ನಾವೆಲ್ಲ ಉಳಿಸಿಕೊಳ್ಳುವುದಕ್ಕೆ ಕಾರಣರಾಗಬೇಕು ಎಂದರು.
ದೇವಸ್ಥಾನದ ಅಧ್ಯಕ್ಷ ದತ್ತಾತ್ರೇಯ ಹೆಗಡೆ ಕಣ್ಣಿಪಾಲ, ಕುಳಿನಾಡು ಸೀಮಾಧ್ಯಕ್ಷ ನಾರಾಯಣ ಹೆಗಡೆ, ಪುರೋಹಿತರಾದ ಕೃಷ್ಣ ಭಟ್ಟ ಚಿಮ್ನಳ್ಳಿ, ತಾಂತ್ರಿಕರಾದ ಕುಮಾರಗುರು ತಂತ್ರಿ ಉಡುಪಿ, ಗಣಪತಿ ಭಟ್ಟ ಹಿರೇ ಗೋಕರ್ಣ ಮತ್ತಿತರರು ಉಪಸ್ಥಿತರಿದ್ದರು. ವಿಶ್ವದರ್ಶನ ಪಿಯು ಕಾಲೇಜು ಪ್ರಾಚಾರ್ಯ ಡಾ. ಡಿ.ಕೆ. ಗಾಂವ್ಕರ ಕಾರ್ಯಕ್ರಮ ನಿರ್ವಹಿಸಿದರು. ದೇವಸ್ಥಾನದ ಸದಸ್ಯ ಜಯನಾರಾಯಣ ಭಟ್ಟ ನಡಿಗೆಮನೆ ವಂದಿಸಿದರು.