ಡಿ.ಕೆ.ಸುರೇಶ್ ಕೆಎಂಎಫ್ ಅಧ್ಯಕ್ಷರಾದರೆ ಸಂತೋಷ

KannadaprabhaNewsNetwork | Published : Apr 28, 2025 11:46 PM

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಡಿ.ಕೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾದರೆ ಸಂತೋಷ. ಇದರಿಂದ ಕೆಎಂಎಫ್ ಸಮೂಹದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಕುದೂರುಕೆಎಂಎಫ್ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಆಯ್ಕೆಯಾದರೆ ರೈತರಿಗೆ ಅನುಕೂಲವಾಗುತ್ತದೆ. ಜೊತೆಗೆ ಹೈನುಗಾರಿಕೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೆ ಕೆಎಂಎಫ್ ಅಧ್ಯಕ್ಷರಾದವರ ಕಾರ್ಯವೈಖರಿ ಬೇರೆಯಾಗಿತ್ತು. ಡಿ.ಕೆ.ಸುರೇಶ್ ರವರು ಅಧ್ಯಕ್ಷರಾದರೆ ಅವರ ಕಾರ್ಯವೈಖರಿಯೇ ಬೇರೆಯಾಗಿರುತ್ತದೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಡಿ.ಕೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾದರೆ ಸಂತೋಷ. ಇದರಿಂದ ಕೆಎಂಎಫ್ ಸಮೂಹದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತದೆ. ಅದರಲ್ಲೂ ಹೈನುಗಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯುದ್ಧ ಬೇಡ ಸತ್ತವರು ಮತ್ತೆ ಎದ್ದು ಬರಲಾರರು ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಕುರಿತ ಪ್ರಶ್ನೆಗೆ ಮುಖ್ಯಮಂತ್ರಿಯವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ನಾನು ಅವರ ಹೇಳಿಕೆಯನ್ನು ಗಮನಸಿಲ್ಲ ಎಂದು ತಿಳಿಸಿದರು.ಯುದ್ಧ ಮಾಡಿ ಬಿಡುತ್ತೇವೆ ಅಂತ ಬರೀ ಮಾತಲ್ಲಿ ಹೇಳಿದರೆ ಸಾಲದು. ಒಸಮಾ ಬಿನ್ ಲ್ಯಾಡನ್ ನನ್ನು ಅಮೆರಿಕಾದವರು ಪಾಕಿಸ್ತಾನದ ನೆಲದಲ್ಲಿ ಹೊಡೆದಂತೆ ಉಗ್ರಗಾಮಿಗಳನ್ನು ಹೊಡೆದಾಕಬೇಕು. ಆಗ ಮೋದಿಯವರು ಮತ್ತು ಅಮಿತ್ ಶಾ ಅವರನ್ನು ಮೆಚ್ಚಬಹುದು. ಭದ್ರತಾಪಡೆ ವೈಫಲ್ಯದ ಹೊಣೆಯನ್ನು ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವೇ ಹೊರಬೇಕು. ಭಯೋತ್ಪಾದನೆಯನ್ನು ಇದುವರೆವಿಗೆ ಆಳಿದ ಯಾವ ಸರ್ಕಾರಗಳೂ ನಿಲ್ಲಿಸಲಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ವಿರೋಧಿಗಳ ಮಾತಿಗೆ ಹೆಚ್ಚು ಮಹತ್ವವನ್ನು ನೀಡದೆ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದೇನೆ. ನಾನು ಮಾತನಾಡದೆ ನಾವು ಮಾಡುವ ಕೆಲಸಗಳ ಮೂಲಕ ಉತ್ತರ ಕೊಡುವಂತಾಗಬೇಕು ಎಂಬುದು ನನಗೆ ಮನವರಿಕೆಯಾಗಿದೆ. ಆರೋಗ್ಯಕರ ಚರ್ಚೆಯಾದರೆ ನಾನು ಯಾರೊಂದಿಗೂ ಸಿದ್ಧನಾಗಿದ್ದೇನೆ. ವಿತಂಡ ವಾದಗಳಿಗೆ ನನ್ನಲ್ಲಿ ಸಮಯವಿಲ್ಲ ಎಂದು ಬಾಲಕೃಷ್ಣ ಹೇಳಿದರು.ಹತ್ತು ಕೋಟಿ ರು. ವೆಚ್ಚದಲ್ಲಿ ಕೆಪಿಎಸ್ ಶಾಲಾ ಕಟ್ಟಡ ಅತ್ಯಂತ ವ್ಯವಸ್ಥಿತವಾಗಿ ಕಟ್ಟಣ ನಿರ್ಮಾಣವಾಗುತ್ತಿದೆ. ಆರು ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಮೈದಾನವನ್ನು ವೀಕ್ಷಿಸಿ ಕಳಪೆ ಕಾಮಗಾರಿ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು. ಇನ್ನೊಂದು ವರ್ಷದಲ್ಲಿ ಅಭಿವೃದ್ಧಿ ಪರ್ವ:ಇನ್ನೊಂದು ವರ್ಷದಲ್ಲಿ ಮಾಗಡಿ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳ ಪರ್ವ ಪೂರ್ಣಗೊಂಡಿರುವುದನ್ನು ನೋಡಬಹುದಾಗಿದೆ. ಕುದೂರು ಗ್ರಾಮದಿಂದ ಜಿಲ್ಲೆಯ ಗಡಿವರೆವಿಗೂ ಸುಸಜ್ಜಿತ ವಿಶಾಲ ರಸ್ತೆಗೆ ಇಂದು ಗುದ್ದಲಿಪೂಜೆ ಮಾಡುತ್ತಿರುವುದು ನನ್ನೊಳಗಿನ ಶಕ್ತಿ ಹೆಚ್ಚಾಗುವಂತೆ ಮಾಡಿದೆ. ಗ್ರಾಮಗಳಲ್ಲಿ ಪಕ್ಷ ಜಾತಿ ಎಂಬ ವಿಷಯಗಳಿಗೆ ಮನಸ್ತಾಪ ಮಾಡಿಕೊಳ್ಳದೆ ಸೌಹಾರ್ದಯುತವಾಗಿ ಬಾಳ್ವೆ ಮಾಡಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಹೇಳಿದರು.ಕುದೂರು ಗ್ರಾಮಪಂಚಾಯ್ತಿ ಅಧ್ಯಕ್ಷೆ ರೇಖಾಸೋಮೇಶ್ ಮಾತನಾಡಿ, ಕುದೂರು ಗ್ರಾಮದಲ್ಲಿ ಅಭಿವೃದ್ಧಿಯ ಕಾರ್ಯಗಳು ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದೆ. ಇನ್ನೊಂದು ವರ್ಷದಲ್ಲಿ ಕುದೂರಿನ ಚಿತ್ರಣವೇ ಬದಲಾಗುತ್ತದೆ. ಅಂತಹ ಕೆಲಸಗಳಿಗೆ ಶಾಸಕರಾದ ಬಾಲಕೃಷ್ಣರವರು ಚಾಲನೆ ನೀಡಿರುವುದು ನಿಜಕ್ಕೂ ಗ್ರಾಮದ ಜನರು ಅಭಿಮಾನಪಡುವಂತಹದ್ದಾಗಿದೆ ಎಂದರು.ಕಾವೇರಿ ನೀರಾವರಿ ನಿಗಮ ವತಿಯಿಂದ ಕುದೂರು ಮರೂರು ಮುಖ್ಯರಸ್ತೆಯಿಂದ ಕೆ.ಜಿ. ಕೃಷ್ಣಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ, ಲೋಕೋಪಯೋಗಿ ಇಲಾಖೆ ವತಿಯಿಂದ ಕುದೂರು ಶಿವಗಂಗೆ ರಸ್ತೆಯ ಕಾಮಗಾರಿಗೆ ಗುದ್ದಲಿಪೂಜೆ, ಕಾಲೇಜು ಮತ್ತು ಮೈದಾನಕ್ಕೆ ಭೇಟಿ ನೀಡಿ ಹೈಟೆಕ್ ಮೈದಾನ ನಿರ್ಮಾಣ ಮಾಡುವಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಗಳು ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ಧಾರಿ ಎಲ್ಲರದ್ದಾಗಿದೆ ಎಂದು ಹೇಳಿದರು.ಲಕ್ಕೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಾರಮ್ಮ ದೇವಿ ಅಮ್ಮನವರ ದೇವಾಲಯವನ್ನು ಶಾಸಕರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ರಾಜಣ್ಣ, ಉಪಾಧ್ಯಕ್ಷೆ ರಮ್ಯಾ ಜ್ಯೋತಿ, ಸದಸ್ಯೆ ಭಾಗ್ಯಮ್ಮ, ಬಿಂಧುಲೋಕೇಶ್, ಸಂಧ್ಯಾಲಕ್ಷ್ಮಣ್, ಗ್ರಾಮಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ, ಕೆ.ಬಿ.ಬಾಲರಾಜ್, ಗಿರೀಶ್, ಜಯರಾಂ, ಶ್ರೀಗಿರಿಪುರ ಪ್ರಕಾಶ್, ಕಾಗಿಮಡು ದೀಪು, ಹೊನ್ನಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್, ಮುನಿರಾಜ್, ಮಂಜೇಶ್, ಲೋಕೇಶ್, ಮಹೇಶ್ ಮತ್ತಿತರರು ಹಾಜರಿದ್ದರು.------ 28ಕೆಆರ್ ಎಂಎನ್ 2.ಜೆಪಿಜಿಕುದೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆಯನ್ನು ಶಾಸಕ ಎಚ್.ಸಿ.ಬಾಲಕೃಷ್ಣ ನೆರವೇರಿಸಿದರು.

Share this article