ನಾಳೆಯಿಂದ ಹರಳೂರು ವೀರಭದ್ರೇಶ್ವರ ಜಾತ್ರೆ

KannadaprabhaNewsNetwork |  
Published : Apr 14, 2025, 01:21 AM IST

ಸಾರಾಂಶ

ತಾಲೂಕಿನ ಹರಳೂರು ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ದಿ.15 ರಿಂದ 21 ವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ತಾಲೂಕಿನ ಹರಳೂರು ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ದಿ.15 ರಿಂದ 21 ವರೆಗೆ ನಡೆಯಲಿದೆ. ಶ್ರೀ ವೀರಭದ್ರಸ್ವಾಮಿ ಸೇವಾ ಸಮಿತಿ, ಶ್ರೀ ವೀರಭದ್ರೇಶ್ವರ ದಾಸೋಹ ಟ್ರಸ್ಟ್, ಹರಳೂರು ಮತ್ತು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹಮ್ಮಿಕೊಂಡಿರುವ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವವನ್ನು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ನಂತರ ಲಿಂ.ಶ್ರೀ ಶಿವಕುಮಾರ ಸ್ವಾಮಿಗಳ ಪುತ್ಥಳಿಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ರಾತ್ರಿ ವೀರಭದ್ರಸ್ವಾಮಿಗೆ ಆರತಿ ಮತ್ತು ಆಗ್ನಿಕುಂಡ ನಡೆಯಲಿದ್ದು, ಶ್ರೀ ವೀರಭದ್ರಸ್ವಾಮಿ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಏ. 16 ರಂದು ಬೆಳಿಗ್ಗೆ ಧ್ವಜಾರೋಹಣ, ಕಳಸ ಸ್ಥಾಪನೆ ನಡೆಯಲಿದ್ದು, ನಂದಿ ವಾಹನ, ಗಜವಾಹನ ಸೇವೆ ಸಹ ಜರುಗಲಿದೆ. ಏ. 17 ರಂದು ಮಧ್ಯಾಹ್ನ 1 ಗಂಟೆಗೆ ಶ್ರೀ ವೀರಭದ್ರಸ್ವಾಮಿಯ ರಥೋತ್ಸವ ಜರುಗಲಿದೆ. ರಥೋತ್ಸವದ ಅಂಗವಾಗಿ ಹೂವಿನ ಅಲಂಕಾರ, ಧೂಳೋತ್ಸವ, ಪುಷ್ಪಾಲಂಕಾರ, ಪಾನಕ ಸೇವೆ ನಡೆಯಲಿದ್ದು, ಸಂಜೆ 7.30ಕ್ಕೆ ಶ್ರೀ ವೀರಭದ್ರಸ್ವಾಮಿ ನಾಟಕ ಮಂಡಳಿಯಿಂದ ಶನಿಪ್ರಭಾವ ಐತಿಹಾಸಿಕ ನಾಟಕದ ಪ್ರದರ್ಶನ ನಡೆಯಲಿದೆ. ರಾತ್ರಿ 8.30ಕ್ಕೆ ಸಿಂಹ ವಾಹನೋತ್ಸವ, ನವಿಲು ವಾಹನ, ಬೆಳ್ಳಿ ಪಲ್ಲಕ್ಕಿ ಉತ್ಸವ, ನಂದಿವಾಹನ ಸೇವೆಗಳು ನೆರವೇರಲಿವೆ.

ಏ. 18 ರಂದು ರಾತ್ರಿ ನಂದಿ ವಾಹನ ಸೇವೆ, ಏ. 19 ರಂದು ಸಂಜೆ 7.30ಕ್ಕೆ ಜೀ ಕನ್ನಡ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ , ಅನುರಾಧ ಭಟ್ ಮತ್ತು ಶ್ರೀ ಹರ್ಷ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶ್ರೀ ಚನ್ನಿಗರಾಯ ಸ್ವಾಮಿಗೆ ಬೆಲ್ಲದ ಆರತಿ ಸೇವೆ, ರಾತ್ರಿ 10 ಗಂಟೆಗೆ ಅಕ್ಕಿಪೂಜಾ ಅಲಂಕಾರ, ಪಲ್ಲಕ್ಕಿ ಉತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಲಿದೆ.

ಮೇ 20 ರಂದು ತಿರುಗಣಿ ಉತ್ಸವ, ಮೇ 21 ರಂದು ಓಕಳಿ ಮೆರವಣಿಗೆ ಜರುಗಲಿದೆ. ಹರಳೂರು ಜಂಗಮಮಠದ ಶ್ರೀ ಚನ್ನಬಸವಸ್ವಾಮೀಜಿ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.

ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ವೀರಭದ್ರಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ವೀರಭದ್ರಸ್ವಾಮಿ ಸೇವಾ ಸಮಿತಿ ಮತ್ತು ಶ್ರೀ ವೀರಭದ್ರೇಶ್ವರ ದಾಸೋಹ ಟ್ರಸ್ಟ್ ಮನವಿ ಮಾಡಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ