ವಿಘ್ನೇಶ್ ಎಂ. ಭೂತನಕಾಡು
ಜಿಲ್ಲೆಯ ಪ್ರಮುಖ ಜಲಾಶಯ, ಹಾರಂಗಿ ಹಿನ್ನೀರು ವ್ಯಾಪ್ತಿಯಲ್ಲಿ ಪ್ರವಾಸಿಗರು ಸೇರಿದಂತೆ ಕೆಲವು ಸ್ಥಳೀಯರು ಮೋಜು ಮಸ್ತಿಯಲ್ಲಿ ತೊಡಗಿರುವುದು ಸಾಮಾನ್ಯವಾಗಿದೆ. ಇದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಹಾರಂಗಿ ಹಿನ್ನೀರು ಪ್ರದೇಶವಾದ ಹೇರೂರು, ನಾಕೂರು ಶಿರಂಗಾಲ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾರ್ವಜನಿಕರು ಅನಧಿಕೃತವಾದ ಪ್ರವೇಶ ಮಾಡುವುದನ್ನು ಕಾವೇರಿ ನೀರಾವರಿ ನಿಗಮದಿಂದ ನಿಷೇಧಿಸಲಾಗಿದೆ. ಅಲ್ಲದೆ ಅಕ್ರಮವಾಗಿ ಪ್ರವೇಶಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಕೂಡ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದ್ದರೂ ಕೂಡ ಸಾರ್ವಜನಿಕರು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ.ಹಿನ್ನೀರು ವ್ಯಾಪ್ತಿಯಲ್ಲಿ ಅಕ್ರಮವಾಗಿ ಪ್ರವೇಶಿಸುವ ಮೂಲಕ ಇಲ್ಲಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಇದರಿಂದ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಸಾಮಾನ್ಯವಾಗಿ ಸಿಗುತ್ತಿವೆ. ಅಲ್ಲದೆ ಹಿನ್ನೀರಿನ ದಡ ಪ್ರದೇಶದಲ್ಲಿ ಅಡುಗೆ ತಯಾರಿ ಅಲ್ಲಿಯೇ ಊಟ ಮಾಡಿ ಅದರ ತ್ಯಾಜ್ಯಗಳನ್ನು ಅಲ್ಲೆ ಎಸೆದಿರುವುದು ಕೂಡ ಕಾಣಬಹುದಾಗಿದೆ.
ಅಕ್ರಮ ಪಂಪ್ ಸೆಟ್ ಗಳು: ಹಾರಂಗಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಅಲ್ಲಲ್ಲಿ ಅಕ್ರಮವಾಗಿ ಪಂಪ್ ಸೆಟ್ ಗಳನ್ನು ಹಾಕುವ ಮೂಲಕ ದಿನಂ ಪ್ರತಿ ಹಿನ್ನೀರಿನಿಂದ ನೀರನ್ನು ತೆಗೆಯಲಾಗುತ್ತಿದೆ. ಕೆಲವರು ಹಿನ್ನೀರಿನಿಂದ ನೇರವಾಗಿ ತಮ್ಮ ಕಾಫಿ ತೋಟಗಳಿಗೆ ನೀರು ಸಿಂಪಡೆ ಮಾಡುತ್ತಿರುವ ಚಿತ್ರಣ ಸಾಮಾನ್ಯವಾಗಿದೆ. ಇನ್ನೂ ಕೆಲವರು ಇತರೆ ಚಟುವಟಿಕೆಗಳಿಗೆ ನೀರನ್ನು ತೆಗೆಯುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲೇ ನೀರು ತೆಗೆಯುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾದರೆ ಪರಿಸ್ಥಿತಿ ಹೇಗೆ ಎಂಬಂತಾಗಿದೆ.
ಹಿನ್ನೀರು ಪ್ರದೇಶ ಸೇರಿದಂತೆ ಹಾರಂಗಿ ಜಲಾಶಯ ವ್ಯಾಪ್ತಿಯ ನಿರ್ಬಂಧಿತ ಪ್ರದೇಶದಲ್ಲಿ ಸಾರ್ವಜನಿಕರ ಅನಧಿಕೃತ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ಇಲ್ಲಿಗೆ ಸಾರ್ವಜನಿಕರು ಪ್ರವೇಶ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.