ಹಾರಂಗಿ ಜಲಾಶಯ ಭರ್ತಿ: ಇಂದು ನದಿಗೆ ನೀರು ಬಿಡುಗಡೆ

KannadaprabhaNewsNetwork |  
Published : Jul 25, 2026, 02:45 AM IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಭರ್ತಿ | Kannada Prabha

ಸಾರಾಂಶ

ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಶನಿವಾರ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುವುದು. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನ ಕೆಳ ಭಾಗದ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಹಾರಂಗಿ ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.

ಕುಶಾಲನಗರ: ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಶನಿವಾರ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುವುದು. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನ ಕೆಳ ಭಾಗದ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಹಾರಂಗಿ ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.

ಅಣೆಕಟ್ಟಿಗೆ ಪ್ರಸಕ್ತ 4526 ಕ್ಯುಸೆಕ್ಸ್ ಪ್ರಮಾಣದ ನೀರಿನ ಒಳಹರಿವು ಕಂಡುಬಂದಿದ್ದು, ಜಲಾಶಯ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ.

ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 8.5 ಟಿಎಂಸಿ ಆಗಿದ್ದು, ಇದೀಗ ಅಣೆಕಟ್ಟಿನಲ್ಲಿ ಅಂದಾಜು 8 ಟಿಎಂಸಿ ಪ್ರಮಾಣದ ನೀರಿನ ಸಂಗ್ರಹ ಮಟ್ಟ ಕಂಡುಬಂದಿದೆ.

ಈ ಸಾಲಿನ ಮಳೆಯಿಂದ ಹಾರಂಗಿ ಅಣೆಕಟ್ಟೆಗೆ 5.6 ಟಿಎಂಸಿಯಷ್ಟು ನೀರು ಹರಿದು ಬಂದು ಸಂಗ್ರಹಗೊಂಡಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 2856.5 ಅಡಿಗಳಷ್ಟಾಗಿತ್ತು. ಕಳೆದ ವರ್ಷ ಹೆಚ್ಚಿನ ಪ್ರಮಾಣದ ಮಳೆ ಸುರಿದ ಕಾರಣ ಮೇ ತಿಂಗಳ ಅಂತ್ಯದಲ್ಲೇ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿತ್ತು. ಈ ಬಾರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ಜಲಾಶಯ ತುಂಬಲು ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಳೆ ಹಾಗೂ ನೀರಿನ ಸಂಗ್ರಹ ಕೊರತೆಯಿಂದ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ನೀರಿಗಾಗಿ ಬಳಸಲು ಅಗತ್ಯವಿರುವುದರಿಂದ ಹಾರಂಗಿ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಜಲಾಶಯದ ನೀರನ್ನು ಅವಲಂಬಿಸಿ ಕೃಷಿ ಚಟುವಟಿಕೆಗಳನ್ನು ನಡೆಸದಂತೆ ರೈತರಿಗೆ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಸತೀಶ್ ಅವರು ಈಗಾಗಲೇ ಪ್ರಕಟಣೆ ಹೊರಡಿಸಿದ್ದಾರೆ.ಕೃಷಿ ಚಟುವಟಿಕೆಗೆ ಸ್ಪ್ರಿಂಕ್ಲರ್‌ ಮೊರೆ! : ಅಣೆಕಟ್ಟು ವ್ಯಾಪ್ತಿಯ ಅಚ್ಚುಕಟ್ಟು ಭಾಗದ ರೈತಾಪಿ ವರ್ಗ ತಮ್ಮ ಕೃಷಿ ಚಟುವಟಿಕೆಗಳಿಗೆ ಕೊಳವೆ ಬಾವಿ ಅವಲಂಬಿಸಿದ್ದು, ಆ ಮೂಲಕ ಸ್ಪ್ರಿಂಕ್ಲರ್ ಬಳಸಿ ತಮ್ಮ ಕೃಷಿಯನ್ನು ಸಂರಕ್ಷಿಸುವ ಕಾಯಕದಲ್ಲಿ ತೊಡಗಿಕೊಂಡಿರುವ ದೃಶ್ಯ ಗೋಚರಿಸಿದೆ.ಈ ಸಂಬಂಧ ಅಣೆಕಟ್ಟಿನ ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಸಹಕರಿಸುವಂತೆ ಕೋರಿದ್ದಾರೆ. ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಪ್ರತಿಕ್ರಿಯೆ ಹಂಚಿಕೊಂಡಿರುವ ಹಾರಂಗಿ ಅಣೆಕಟ್ಟು ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಆತಂಕ ತೋಡಿಕೊಂಡಿದ್ದು, ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಇರುವ ಕಾರಣ ಯಾವುದೇ ಹಂತದಲ್ಲಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ನದಿಗೆ ನೀರು ಹರಿಸದಂತೆ ಆಗ್ರಹಿಸಿದ್ದಾರೆ. ಅಣೆಕಟ್ಟು ತುಂಬಿ ಹೆಚ್ಚುವರಿ ಪ್ರಮಾಣದ ನೀರನ್ನು ಕಾಲುವೆಗಳ ಮೂಲಕ ಅಗತ್ಯವಿರುವ ಕೃಷಿ ಚಟುವಟಿಕೆಗಳಿಗೆ ಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು, ಮುಖಂಡರ ಮೇಲೆ ದೌರ್ಜನ್ಯ ಖಂಡನೀಯ: ರೈ
ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಯೋಜನೆ ತ್ವರಿತ ಅನುಷ್ಠಾನಗೊಳಿಸಿ: ಫೌಜಿಯಾ ತರನ್ನುಮ್