ಅಭಿವೃದ್ದಿಗೆ ಅನುದಾನ ಕ್ರೋಢೀಕರಣಕ್ಕೆ ಸಹಾಯ । ವಾರ್ಡ್‌ಗಳ ಸಂಖ್ಯೆ, ಸದಸ್ಯರ ಸಂಖ್ಯೆ ,ಕಚೇರಿ ಸಿಬ್ಬಂದಿ ಸಂಖ್ಯೆ ಹೆಚ್ಚಳ ಸಾಧ್ಯತೆ
ಬಿ.ರಾಮಪ್ರಸಾದ್ ಗಾಂಧಿಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಹಳ್ಳಿಗಳಿಂದ ಹಿಡಿದು ಪಟ್ಟಣ, ನಗರ ಪ್ರದೇಶಗಳು ಇತ್ತೀಚೆಗೆ ಬಹಳಷ್ಟು ವೇಗವಾಗಿ ಬೆಳೆಯುತ್ತಿವೆ. ಅದಕ್ಕೆ ತಕ್ಕಂತೆ ಸೌಲಭ್ಯಗಳ ಬೇಡಿಕೆ ಸಹ ಹೆಚ್ಚಾಗುತ್ತಿವೆ. ಆ ಪ್ರಕಾರ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣ ಸಹ ಹೊಸ ಹೊಸ ಬಡಾವಣೆಗಳು ಜನ್ಮತಾಳುವುದರೊಂದಿಗೆ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ.ಕಳೆದ 10 ವರ್ಷಗಳ ಹಿಂದೆ ಹರಪನಹಳ್ಳಿ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆಯನ್ನಾಗಿ ಪರಿವರ್ತಿಸಬೇಕೆಂಬ ಬೇಡಿಕೆ ಹುಟ್ಟಿಕೊಂಡಿತು.
ಈ ಸಂಬಂಧ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಫೆಬ್ರವರಿ 2015, ಡಿಸೆಂಬರ್ 2020 ಹಾಗೂ ಜೂನ್ -2023ರಲ್ಲಿ ನಗರಸಭೆಯನ್ನಾಗಿ ಮೇಲ್ದರ್ಜಗೇರಿಸಲು ಸದಸ್ಯರು ಪಕ್ಷ ಭೇದ ಮರೆತು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದರು. ನಂತರ ಸರ್ಕರದಿಂದ ಕೇಳಲಾದ ಎಲ್ಲಾ ಪೂರಕ ಮಾಹಿತಿಯನ್ನು ಸಮರ್ಪಕವಾಗಿ ನೀಡಲಾಯಿತು.ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರ ಆಸಕ್ತಿ ಪ್ರಯತ್ನದಿಂದ ಇದೀಗ ರಾಜ್ಯ ಸರ್ಕಾರ ಹರಪನಹಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಿದೆ.
2011ರ ಜನಗಣತಿ ಪ್ರಕಾರ ಹರಪನಹಳ್ಳಿ ಪಟ್ಟಣದ ಜನಸಂಖ್ಯೆ 47039 ಇದ್ದು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಬೆಳವಣಿಗೆಯ ದರ ಶೇ.1.22ರಂತೆ ನೀಡಿರುವ ಮಾಹಿತಿಯಂತೆ 2023ಕ್ಕೆ ಅಂದಾಜು 54437 ಜನಸಂಖ್ಯೆ ಇದೆ. ನಗರಸಭೆಯಾಗಲು ಸರ್ಕಾರದ ಮಾನದಂಡದಂತೆ ಜನಸಂಖ್ಯೆ ಇದೆ.ಹರಪನಹಳ್ಳಿ ಪುರಸಭೆಯು 25.36 ಚದರ ಕಿಮೀ ಹೊಂದಿದೆ. ಈ ವ್ಯಾಪ್ತಿಯಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಇತರ ವ್ಯಾಪಾರ ವಹಿವಾಟುಗಳಿಂದ ಕೂಡಿದ್ದು, ಶೇ.70ರಷ್ಟು ಜನರು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಹರಪನಹಳ್ಳಿ ಜಿಲ್ಲಾ ಕೇಂದ್ರ ಹೊಸಪೇಟೆಗೆ 80 ಕಿಮೀ ದೂರವಾಗುತ್ತದೆ. ಕೃಷಿಯೇತರ ಚಟುವಟಿಕೆಗಳಲ್ಲಿ ಅಂದಾಜು ಶೇ.75ರಷ್ಟು ಹೆಚ್ಚು ಉದ್ಯೋಗಾವಕಾಶವಿರುತ್ತದೆ.ನಗರಸಭೆಯಿಂದ ಆಗುವ ಲಾಭ:
ಪುರಸಭೆಯಿಂದ ನಗರಸಭೆಯಾಗುವುದರಿಂದ ಸರ್ಕಾರದಿಂದ ಜಾರಿಯಾಗುವ ಯೋಜನೆಗಳಲ್ಲಿ ಯಾವುದೇ ಅನುದಾನ ನಷ್ಟವುಂಟಾಗುವುದಿಲ್ಲ, 15ನೇ ಹಣಕಾಸು, ಎಸ್‌ಎಫ್‌ಐ ನಿಧಿ ಹಾಗೂ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ, ಸ್ವಚ್ಛ ಭಾರತ ಮಿಷನ್ -2 ಹಾಗೂ ಕುಡಿಯುವ ನೀರಿನ ಯೋಜನೆಗಳಲ್ಲಿ ಹೆಚ್ಚಿನ ಅನುದಾನ ಲಭ್ಯವಾಗಿ ನಗರದ ಅಭಿವೃದ್ಧಿಗೆ ಪೂರಕವಾಗುತ್ತದೆ.ನಗರದ ಆಸ್ತಿ ತೆರಿಗೆ, ಖಾತಾ ವರ್ಗಾವಣೆ ಶುಲ್ಕ ಹಾಗೂ ನೀರಿನ ತೆರಿಗೆ, ಘನತ್ಯಾಜ್ಯ ವಸ್ತು ನಿರ್ವಹಣಾ ಶುಲ್ಕ ಹೆಚ್ಚಳ ವಾಗುವುದರಿಂದ ನಗರದ ಅಭಿವೃದ್ದಿಗೆ ಅನುದಾನ ಕ್ರೋಢೀಕರಣಕ್ಕೆ ಸಹಾಯವಾಗುತ್ತದೆ ಎಂಬುದು ಇಲ್ಲಿಯ ಪೌರಾಯುಕ್ತ ಎರಗುಡಿ ಶಿವಕುಮಾರ ಅವರ ಅಭಿಮತವಾಗಿದೆ.
ಇದರ ಜೊತೆಗೆ ವಾರ್ಡ್‌ಗಳ ಸಂಖ್ಯೆ, ಸದಸ್ಯರ ಸಂಖ್ಯೆ, ಕಚೇರಿ ಸಿಬ್ಬಂದಿ ಸಂಖ್ಯೆ ಹೆಚ್ಚಳವಾಗುತ್ತದೆ. ಒಟ್ಟಿನಲ್ಲಿ ನಗರಸಭೆಯಾಗುವುದರಿಂದ ಪಟ್ಟಣ ಸಾಕಷ್ಟು ಅಭಿವೃದ್ಧಿಯತ್ತ ಮುಖ ಮಾಡುತ್ತದೆ. ಆ ನಿಟ್ಟಿನಲ್ಲಿ ಹರಪನಹಳ್ಳಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇದರ ಸದುಪಯೋಗಪಡಿಸಿಕೊಂಡು ಹರಪನಹಳ್ಳಿ ನಗರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.