ಹರಪನಹಳ್ಳಿ ನೂತನ ಕೋರ್ಟ್‌ ಕಟ್ಟಡಕ್ಕೆ ಕಿಡಿಗೇಡಿಗಳಿಂದ ಹಾನಿ

KannadaprabhaNewsNetwork |  
Published : Nov 25, 2025, 02:45 AM IST
1)- 24ಎಚ್‌ ಆರ್‌ ಪಿ 1 - ಕಿಡಿಗೇಡಿಗಳಿಂದ ನಿರಂತರ ಹಾನಿಗೀಡಾಗುತ್ತಿರುವ ಹರಪನಹಳ್ಳಿ ಪಟ್ಟಣದ ಗೋಸಾವಿ ಗುಡ್ದದ ಮೇಲಿರುವ ನೂತನ ಕೋರ್ಟ್‌ ಕಟ್ಟಡ.2)- 24ಎಚ್‌ ಆರ್‌ ಪಿ 2 -  ಚಿ.ವೆಂಕಟೇಶ, ವಕೀಲರ ಸಂಘದ ಅಧ್ಯಕ್ಷ (ಕೋಟ್‌ ಗೆ ) | Kannada Prabha

ಸಾರಾಂಶ

ಹೊಸಪೇಟೆ ರಸ್ತೆಯ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಈಗಿರುವ ಜೆಎಂಎಫ್‌ಸಿ ಹಿರಿಯ ಶ್ರೇಣಿ ಕೋರ್ಟ್ ಕಟ್ಟಡ ಶಿಥಿಲಗೊಂಡಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಅನೇಕ ತಿಂಗಳುಗಳ ಹಿಂದೆಯೇ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಕಾದಿರುವ ಪಟ್ಟಣದ ಗೋಸಾಯಿ ಗುಡ್ಡದ ಮೇಲಿರುವ ನೂತನ ಕೋರ್ಟ್‌ ಕಟ್ಟಡ ಕಿಡಿಗೇಡಿಗಳಿಂದ ದಿನದಿಂದ ದಿನಕ್ಕೆ ಹಾನಿಗೊಳಗಾಗುತ್ತಿದೆ.

ಹೊಸಪೇಟೆ ರಸ್ತೆಯ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಈಗಿರುವ ಜೆಎಂಎಫ್‌ಸಿ ಹಿರಿಯ ಶ್ರೇಣಿ ಕೋರ್ಟ್ ಕಟ್ಟಡ ಶಿಥಿಲಗೊಂಡಿದೆ. ವಕೀಲರ ಸಂಖ್ಯೆ ಸಹ ಹೆಚ್ಚಾಗಿದೆ. ಹಿರಿಯ ಶ್ರೇಣಿಯ ಕೋರ್ಟ್‌ ಹಾಲ್‌ ಅಂತೂ ಬಹಳ ಚಿಕ್ಕದಾಗಿದೆ. ಅದರಲ್ಲಿಯೇ ಹೇಗೋ ಕೋರ್ಟ್‌ ಕಲಾಪಗಳನ್ನು ನಡೆಸಿಕೊಂಡು ಹೋಗಲಾಗುತ್ತಿತ್ತು. ಇದನ್ನು ಮನಗಂಡು ಹೊಸಪೇಟೆ ರಸ್ತೆಯ ಗೋಸಾವಿ ಗುಡ್ಡದ ಮೇಲೆ ಹೊಸದಾಗಿ 2022ರ ಮೇ 28ರಂದು ಭೂಮಿ ಪೂಜೆ ಆಗಿ ಲೋಕೋಪಯೋಗಿ ಇಲಾಖೆಯವರು ₹7 ಕೋಟಿ ವೆಚ್ಚದಲ್ಲಿ ಕೋರ್ಟ್‌ ಕಟ್ಟಡ ನಿರ್ಮಾಣ ಮಾಡಿದರು. ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದಿವೆ.

ನಂತರ ಶಾಸಕಿ ಎಂ.ಪಿ. ಲತಾ ಅವರ ಆಸಕ್ತಿಯಿಂದ ₹1 ಕೋಟಿ ವೆಚ್ಚದಲ್ಲಿ ಪೀಠೋಪಕರಣ ಬಂದಿವೆ. ₹1.50 ಕೋಟಿ ಅನುದಾನ ಸಹ ನಿಗದಿಯಾಗಿದೆ. ಅದರಲ್ಲಿ ಏನೇನು ಮಾಡಬೇಕು ಎಂಬ ಚಿಂತನೆಯಲ್ಲಿ ಜನಪ್ರತಿನಿಧಿಗಳು, ಎಂಜಿನಿಯರ್‌ಗಳು ಇದ್ದಾರೆ. ನೂತನ ರಸ್ತೆ ನಿರ್ಮಣ ಸಹ ಆಗಿದೆ.

ವಕೀಲರ ಸಂಘದ ಕಟ್ಟಡಕ್ಕೆ ₹3.24 ಕೋಟಿ ಕ್ರಿಯಾ ಯೋಜನೆ ತಯಾರಾಗಿ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಇನ್ನೂ ಮಂಜೂರಾತಿ ಆಗಿಲ್ಲ. ವಕೀಲರ ಸಂಘಕ್ಕೆ ಪ್ರತ್ಯೇಕ ಕಟ್ಟಡ ಆಗುವವರೆಗೂ ನೂತನ ಕಟ್ಟಡದಲ್ಲಿ ಈಗಿರುವ ಮಿನಿ ಕೋರ್ಟ್‌ ಹಾಲ್‌ ನ್ನು ನೀಡಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇಷ್ಟೆಲ್ಲ ಕೆಲಸಗಳು ಆಗಿದ್ದರೂ ಇನ್ನೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. ಆದರೆ ನೂತನ ಕಟ್ಟಡಕ್ಕೆ ಕಿಡಿಗೇಡಿಗಳ ಕಾಟವಿದೆ. ಕೋರ್ಟ್‌ ಕಟ್ಟಡ ನಾಲ್ಕು ದಿಕ್ಕಿನಲ್ಲಿ ಗೋಡೆಯ ಗ್ಲಾಸ್‌ ಗಳನ್ನು ಒಡೆದು ಹಾಕಲಾಗಿದೆ. ಕಟ್ಟಡಕ್ಕೆ ಕಲ್ಲಿನಿಂದ ಕುಟ್ಟಿ ಹಾನಿ ಮಾಡಲಾಗುತ್ತಿದೆ. ರಾತ್ರಿ ಹೊತ್ತು ಈ ಕಟ್ಟಡದ ಆವರಣದಲ್ಲಿ ಗುಂಡು ತುಂಡಿನ ಪಾರ್ಟಿಗಳು ಆಗಾಗ ನಡೆಯುತ್ತಿರುತ್ತವೆ. ಅಲ್ಲದೇ ಅನೈತಿಕ ಚಟುವಟಿಕೆಗಳು ಸಹ ಇಲ್ಲಿ ನಡೆಯುತ್ತಿವೆ ಎನ್ನುವ ಆರೋಪವಿದೆ. ಹಾನಿಗೀಡಾದ ಕಟ್ಟಡವನ್ನು ಪುನಃ ಸರಿಪಡಿಸಿ ಸಂಬಂಧಿಸಿದ ಇಲಾಖೆಯವರು ಬೇಗ ಉದ್ಘಾಟನೆ ನೆರವೇರಿಸಬೇಕು ಎಂಬುದು ವಕೀಲರು, ಕಕ್ಷಿದಾರರು, ಕೋರ್ಟ್‌ ಸಿಬ್ಬಂದಿಯ ಒತ್ತಾಸೆ.

ಈಗ ಕಾರ್ಯ ನಿರ್ವಹಿಸುತ್ತಿರುವ ಕೋರ್ಟ್‌ ಕಟ್ಟಡ ಚಿಕ್ಕದಾಗಿದೆ; ಶಿಥಿಲಗೊಂಡಿದೆ. ವಕೀಲರ ಸಂಖ್ಯೆ ಸಹ ಬಹಳ ಜಾಸ್ತಿಯಾಗಿದೆ. ಬೇಗ ನೂತನ ಕೋರ್ಟ್‌ ಕಟ್ಟಡ ಉದ್ಘಾಟನೆ ಮಾಡಿ ಸುಗಮ ಕಲಾಪಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ, ಹೈಕೋರ್ಟ್‌ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ ಎನ್ನುತ್ತಾರೆ ಹರಪನಹಳ್ಳಿ ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೆಹಲಿ ಭೇಟಿ ವೇಳೆ ಉಪಮುಖ್ಯಮಂತ್ರಿ ನಿಗೂಢ ಹೇಳಿಕೆ
ಹುಣಸೂರಿನಲ್ಲಿ ₹10 ಕೋಟಿ ಚಿನ್ನ ದೋಚಿದ್ದವರು ಬಿಹಾರದಲ್ಲಿ ಬಲೆಗೆ