ರಂಗೋಲಿ ಅಳಿಸಿ, ಚಪ್ಪಲಿ ಸ್ಟ್ಯಾಂಡ್‌ ಉರುಳಿಸಿ ದಂಪತಿಯಿಂದ ಕಿರುಕುಳ

KannadaprabhaNewsNetwork | Updated : Apr 01 2024, 05:16 AM IST

ಸಾರಾಂಶ

ನೆರೆಮನೆಯವರ ರಂಗೋಲಿ ಅಳಿಸುವುದು, ಚಪ್ಪಲಿ ಸ್ಟ್ಯಾಂಡ್‌ ಉರುಳಿಸಿ ಸುಖಾಸುಮ್ಮನೆ ಕಿರುಕುಳ ನೀಡುತ್ತಿರುವ ಆರೋಪದಡಿ ದಂಪತಿ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 ಬೆಂಗಳೂರು:  ನೆರೆಮನೆಯವರ ರಂಗೋಲಿ ಅಳಿಸುವುದು, ಚಪ್ಪಲಿ ಸ್ಟ್ಯಾಂಡ್‌ ಉರುಳಿಸಿ ಸುಖಾಸುಮ್ಮನೆ ಕಿರುಕುಳ ನೀಡುತ್ತಿರುವ ಆರೋಪದಡಿ ದಂಪತಿ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಡಿಚಿಕ್ಕನಹಳ್ಳಿಯ ಚೈತನ್ಯ ಪ್ಯಾರಡೈಸ್‌ ಅಪಾರ್ಟ್‌ಮೆಂಟ್‌ ನಿವಾಸಿ ಎನ್‌.ಬಿ.ಮಂಜುನಾಥ್‌ ನೀಡಿದ ದೂರಿನ ಮೇರೆಗೆ ಪೊಲೀಸರು ಅದೇ ಅಪಾರ್ಟ್‌ಮೆಂಟ್‌ ನಿವಾಸಿಗಳಾದ ಪ್ರಣಬ್‌ ಜ್ಯೋತಿ ಸಿಂಗ್‌ ಮತ್ತು ನೇಹಾ ಕುಮಾರಿ ದಂಪತಿ ವಿರುದ್ಧ ಗಂಭೀರ ಸ್ವರೂಪವಲ್ಲದ (ಎನ್‌ಸಿಆರ್‌) ಪ್ರಕರಣ ದಾಖಲಿಸಿದ್ದಾರೆ.

ಏನಿದು ದೂರು?:

ದೂರುದಾರ ಮಂಜುನಾಥ್‌ ದಂಪತಿ ಹಾಗ ಪ್ರಣಬ್‌ ದಂಪತಿ ಕೋಡಿಚಿಕ್ಕನಹಳ್ಳಿಯ ಚೈತನ್ಯ ಪ್ಯಾರಡೈಸ್‌ ಅಪಾರ್ಟ್‌ಮೆಂಟ್‌ನ ಅಕ್ಕಪಕ್ಕದ ಪ್ಲ್ಯಾಟ್‌ನಲ್ಲಿ ನೆಲೆಸಿದ್ದಾರೆ. ಪ್ರಣಬ್‌ ದಂಪತಿ ಸುಖಾಸುಮ್ಮನೆ ಮಂಜುನಾಥ್‌ ದಂಪತಿಗೆ ಕಿರುಕುಳ ನೀಡುತ್ತಿದ್ದರು. ಈ ವಿಚಾರವಾಗಿ ಮಂಜುನಾಥ್‌ ಎರಡು ಬಾರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಪೊಲೀಸರು ಎರಡೂ ಕುಟುಂಬದವರನ್ನು ಕರೆಸಿ ವಿಚಾರಣೆ ನಡೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ. ಆದರೂ ಪ್ರಣಬ್‌ ದಂಪತಿ, ಮಂಜುನಾಥ್‌ ಕುಟುಂಬದ ಬಗ್ಗೆ ದ್ವೇಷ ಕಾರುತ್ತಿದ್ದರು.

ಮಾ.27ರಂದು ರಾತ್ರಿ ಮಂಜುನಾಥ್‌ ಫ್ಲ್ಯಾಟ್‌ ಎದುರಿನ ರಂಗೋಲಿಯನ್ನು ಉದ್ದೇಶಪೂರ್ವಕವಾಗಿ ಅಳಿಸಿ ಹಾಕಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಾ.28ರಂದು ಉದ್ದೇಶ ಪೂರ್ವಕವಾಗಿ ಪ್ರಣಬ್‌ ದಂಪತಿ ತಮ್ಮ ಚಪ್ಪಲಿಗಳನ್ನು ಮಂಜುನಾಥ್‌ ಮನೆ ಎದುರು ಬಿಟ್ಟಿದ್ದರು. ಈ ವೇಳೆ ಮಂಜುನಾಥ್‌ ದಂಪತಿ ಆ ಚಪ್ಪಲಿಗಳನ್ನು ಪಕ್ಕಕ್ಕೆ ಸರಿಸಿದ್ದರು. ಇದರಿಂದ ಕೋಪಗೊಂಡ ನೇಹಾಕುಮಾರಿ ಅವರು ಮಂಜುನಾಥ್‌ ಮನೆ ಎದುರಿನ ರಂಗೋಲಿ ಅಳಿಸಿ ಹಾಕಿ, ಚಪ್ಪಲಿ ಸ್ಟ್ಯಾಂಡ್‌ಗೆ ಒದ್ದು ಉರುಳಿಸಿ ರಂಪಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನೇಹಾಕುಮಾರಿಯ ರಂಪಾಟ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಣಬ್‌-ನೇಹಾ ದಂಪತಿ ವಿನಾಕಾರಣ ನಮ್ಮ ಜತೆಗೆ ಜಗಳ ತೆಗೆದು ಕಿರುಕುಳ ನೀಡುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಎನ್‌ಸಿಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article