ದಲಿತರಿಗೆ ಕಿರುಕುಳ: ಅಧಿಕಾರಿಗಳ ವರ್ಗಕ್ಕೆ ಆಗ್ರಹ: ಜಿಲ್ಲಾಧಿಕಾರಿ ಸತ್ಯಭಾಮರಿಗೆ ಮನವಿ

KannadaprabhaNewsNetwork | Published : Jan 13, 2024 1:32 AM

ಸಾರಾಂಶ

ಬಡ ದಲಿತ ಕುಟುಂಬಕ್ಕೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವರ್ಗಾವಣೆ ಮಾಡಿ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಶುಕ್ರವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿತು,

ಒತ್ತಾಯ । ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಕನ್ನಡಪ್ರಭ ವಾರ್ತೆ ಹಾಸನ

ಬಡ ದಲಿತ ಕುಟುಂಬಕ್ಕೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವರ್ಗಾವಣೆ ಮಾಡಿ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಶುಕ್ರವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.

ಬಡ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿ ಅನ್ನಪೂರ್ಣೇಶ್ವರಿ ಪರವಾಗಿ ಕೆಲಸ ಮಾಡುತ್ತಿರುವ ಮತ್ತು ಪ್ರಭಾವಿ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿರುವ ಹಾಗೂ ಕಡು ಭ್ರಷ್ಟ ಮುಖ್ಯಾಧಿಕಾರಿ ಆಗಿರುವ ರಮೇಶ್ ರವರನ್ನು ಅಮಾನತ್ತಿನಲ್ಲಿಟ್ಟು ವಿಚಾರಣೆ ಮಾಡಬೇಕು. ದುರ್ಗೇಶ್ ಮತ್ತು ರೂಪ ಇಬ್ಬರು ಹೇಮಾವತಿ ಮಕ್ಕಳಾಗಿದ್ದು, ಪುರಸಭೆಗೆ ದೂರು ನೀಡಿದ್ದು, ಪುರಸಭೆ ಎಂಜಿನಿಯರ್ ಅನ್ನಪೂರ್ಣೇಶ್ವರಿ ೧೨೭.೬೬% (೧೬೪.೨೫ ಚ.ಮೀ ಹೆಚ್ಚುವರಿ ಕಟ್ಟಡ) ಮತ್ತು ಹೇಮಾವತಿ ೩೪.೫೦% (೫೧.೪೨ ಚ.ಮೀ ಹೆಚ್ಚುವರಿ ಕಟ್ಟಡ) ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿರುವ ಬಗ್ಗೆ ವರದಿಯನ್ನು ನೀಡಿದ್ದರು. ವರದಿಯಲ್ಲಿ ಅನ್ನಪೂರ್ಣೇಶ್ವರಿ ಹೇಮಾವತಿ ಮನೆಕಡೆ ಯಾವುದೇ ಸೆಟ್ ಬ್ಯಾಕ್ ಬಿಡದೆ ಕಟ್ಟಡ ನಿರ್ಮಾಣ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಪುರಸಭೆ ಮುಖ್ಯಾಧಿಕಾರಿ, ಅನ್ನಪೂರ್ಣೇಶ್ವರಿ ಇಲ್ಲಿಯವರೆಗೆ ಒಂದು ನೋಟೀಸ್ ನೀಡದೆ, ಕೇವಲ ಹೇಮಾವತಿಗೆ ಪದೇ ಪದೇ ನೋಟಿಸ್ ನೀಡಿರುವುದಕ್ಕೆ, ಮುಖ್ಯಾಧಿಕಾರಿ ಪ್ರಭಾವಿ ಪರವಾಗಿ ನಿಂತಿರುವುದು ಕಂಡು ಬರುತ್ತದೆ ಎಂದು ದೂರಿದರು.

ಹೇಮಾವತಿರವರ ಮಕ್ಕಳು ಅನ್ನಪೂರ್ಣೇಶ್ವರಿಯವರ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದರೆ, ಅನ್ನಪೂರ್ಣೇಶ್ವರಿಯವರ ಬಗ್ಗೆ ವಿಚಾರಣೆ ನೆಡೆಸುವುದು ಬಿಟ್ಟು, ಸಕಲೇಶಪುರ ಪೊಲೀಸ್ ಉಪ ಅಧೀಕ್ಷಕರಾದ ಪ್ರಮೋದ್ ಕುಮಾರ್ ಸಹ ಮುಖ್ಯಾಧಿಕಾರಿ ವರದಿ ಮೇರೆಗೆ ಹೇಮಾವತಿ ಮಗಳಾದ ರೂಪರವರಿಗೆ ಆಸ್ತಿಯ ದಾಖಲೆಗಳನ್ನು ಹಾಜರು ಪಡಿಸಿ ಎಂದು ನೋಟಿಸ್ ನೀಡುತ್ತಾರೆ. ಅಂದರೆ ಇಲ್ಲೂ ಸಹ ಈ ರೀತಿ ನೋಟಿಸ್‌ಗಳು ಪ್ರಭಾವಿ ವ್ಯಕ್ತಿ ಆಗಿರುವ ಅನ್ನಪೂರ್ಣೇಶ್ವರಿಯವರಿಗೆ ನೀಡಿರುವುದಿಲ್ಲ, ಬದಲಾಗಿ ಬಡ ದಲಿತ ಕುಟುಂಬವನ್ನು ಗುರಿ ಮಾಡಲಾಗಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು, ಅಕ್ರಮ ಖಾತೆ, ಅಕ್ರಮ ಕಟ್ಟಡ ಮತ್ತು ತೆರಿಗೆ ವಂಚಿಸಿರುವ ಪ್ರಭಾವಿ ವ್ಯಕ್ತಿ ಆಗಿರುವ ಅನ್ನಪೂರ್ಣೇಶ್ವರಿಯವರಿಗೆ, ದಲಿತ ಕುಟುಂದ ಮೇಲೆ ಸವಾರಿ ಮಾಡಲು ಪುರಸಭೆ ಮುಖ್ಯಾಧಿಕಾರಿ ರಮೇಶ್ ಕುಮ್ಮಕ್ಕು ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಅತ್ಯಂತ ಪ್ರಭಾವಿ ವ್ಯಕ್ತಿ ಆಗಿರುವ ಅನ್ನಪೂರ್ಣೇಶ್ವರಿ ಪರವಾಗಿ ಮತ್ತು ದಲಿತ ಕುಟುಂಬವಾದ ಹೇಮಾವತಿ ವಿರುದ್ಧವಾಗಿ ಸುಳ್ಳು ದಾಖಲೆಗಳನ್ನು ಮುಖ್ಯಾಧಿಕಾರಿ ನೀಡುವ ಮುಖಾಂತರ, ಅನ್ನಪೂರ್ಣೇಶ್ವರಿಯವರು ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್‌ಗಳಲ್ಲಿ ಕೇಸ್‌ಗಳನ್ನು ಗೆಲ್ಲುತಿದ್ದಾರೆ, ಬಡ ದಲಿತ ಕುಟುಂಬ ಎಲ್ಲಾ ಕಡೆ ಸೋಲುತ್ತ ಬರುತ್ತಿರುವುದಾಗಿ ಹೇಳಿದರು.

ತನ್ನ ಪ್ರಭಾವ ಬಳಸಿ ಅಕ್ರಮವಾಗಿ ಜಾಗ ಕಬಳಿಸಿ ಅಕ್ರಮ ಕಟ್ಟಡ ಕಟ್ಟಿರುವುದಲ್ಲದೆ ದಲಿತ ಕುಟಂಬಕ್ಕೆ ಚಿತ್ರಹಿಂಸೆ ನೀಡುತ್ತಿರುವ ಸಕಲೇಶಪುರ ಪುರಸಭೆಯ ಸದಸ್ಯೆ ಅನ್ನಪೂರ್ಣೇಶ್ವರಿ ಸದಸ್ಯತ್ವನ್ನು ರದ್ದು ಪಡಿಸುವ ಬಗ್ಗೆ ಹಾಗೂ ಅಕ್ರಮ ಎಸಗಿರುವ ಸಕಲೇಶಪುರ ಪುರಸಭೆಯ ಸದಸ್ಯೆ ಅನ್ನಪೂರ್ಣೇಶ್ವರಿ ಪರವಾಗಿ ನಿಂತು ದಲಿತ ಕುಟುಂಬಕ್ಕೆ ಅನ್ಯಾಯ ಮಾಡುತ್ತಿರುವ ಸಕಲೇಶಪುರ ಪುರಸಭೆಯ ಮುಖ್ಯಾಧಿಕಾರಿ ರಮೇಶ್ ಕುಮಾರ್ ರವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಕೆ. ಪ್ರಕಾಶ್, ದಸಂಸ ಮೈಸೂರು ವಿಭಾಗೀಯ ಅಧ್ಯಕ್ಷ ಕುಮಾರಸ್ವಾಮಿ, ರಘುವೀರ್, ಸುಬ್ರಮಣ್ಯ, ಹರೀಶ್, ನಟರಾಜ್, ರಂಗಸ್ವಾಮಿ, ಶರತ್ ಕುಮಾರ್, ಮಧು, ವಿಜಯಕುಮಾರ್ ಬಾಗಿವಾಳ್ ಉಪಸ್ಥಿತರಿದ್ದರು.

ಹಾಸನ ಡಿಸಿ ಕಚೇರಿ ಮುಂದೆ ಆರ್‌ಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Share this article