ಕಾರವಾರ: ದಕ್ಷಿಣ ಕನ್ನಡದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರಿಂದ ಕಿರುಕುಳ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳು ನಾಗರಿಕ ಸಮಾಜದಲ್ಲಿ ಭೀತಿಯ ವಾತಾವರಣವನ್ನು ಉಂಟು ಮಾಡಿದ್ದು, ನಾಗರಿಕರ ಖಾಸಗಿ ಜೀವನ ಮತ್ತು ವ್ಯಕ್ತಿತ್ವದ ಗೌರವವನ್ನು ಘನತೆಯನ್ನು ಹಾಳು ಮಾಡುತ್ತಿದೆ. ಪೊಲೀಸರು ವಾರದಿಂದ ಕೋಮು ಸೌಹಾರ್ದ ಕಾಪಾಡುವ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಹಿಂದೂ ಕಾರ್ಯಕರ್ತರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.ಹಿಂದೂ ಕಾರ್ಯಕರ್ತರಿಗೆ ವಿಚಾರಣೆಯ ನೆಪದಲ್ಲಿ ಪೊಲೀಸ್ ಠಾಣೆಯಿಂದ ಮಧ್ಯ ರಾತ್ರಿ ಕರೆ ಮಾಡಿ ಠಾಣೆಗೆ ಕರೆಯುವುದು, ಮಧ್ಯರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಹೋಗಿ ವಿಚಾರಣೆ ಮಾಡುವುದು, ಬಲವಂತವಾಗಿ ರಾತ್ರಿ ಅವರ ಫೋಟೊ ತೆಗೆಯುವುದು ನಡೆಯುತ್ತಿದೆ. ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಅವರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿ ಕಿರುಕುಳ ನೀಡಿ, ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಅವರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತದೆ ಎಂದು ಆರೋಪಿಸಿದರು.
ಪೊಲೀಸರು ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತರಾಗಿ ಗಮನ ಹರಿಸಿ, ಸೂಕ್ತ ತನಿಖೆ, ಕ್ರಮ ಜರುಗಿಸಿ ಈ ಪ್ರಕರಣದ ಮೇಲೆ ನಿಗಾ ಇಡಬೇಕು. ಮಾನಸಿಕ ಕಿರುಕುಳ ನೀಡುವ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡುವ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಪೀಡಿತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ 14 ಸಂಘಟನೆಗಳ ಮುಖಂಡರು ಇದ್ದರು.