ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೃತ ಮನೋಜ್ ತಂದೆ ದೇವರಾಜುಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಮುಖ್ಯಮಂತ್ರಿಗಳ ರಿಲೀಪ್ ಫಂಡ್ ನಿಂದ ತಕ್ಷಣ 25 ಲಕ್ಷ ರು. ಪರಿಹಾರ ನೀಡುವಂತೆ ಆದೇಶ ಬಂದಿದ್ದು, ಅದರಂತೆ ನಾವು ಪರಿಹಾರದ ಚೆಕ್ ನೀಡಿದ್ದೇವೆ ಎಂದರು.
ದೇವರಾಜು ಮಾತನಾಡಿ, ಸರ್ಕಾರ ಹಣ ನೀಡಿದೆ. ಆದರೆ, ನಮ್ಮ ಮಗ ಬದುಕಿ ಬರಲ್ಲ, ಮುಂದಿನ ದಿನಗಳಲ್ಲಿ ನಮಗೆ ಆದಂತೆ ಬೇರೆ ಯಾರಿಗೂ ಆಗುವುದು ಬೇಡ. ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ನನ್ನ ಮಗ ರ್‍ಯಾಂಕ್ ವಿದ್ಯಾರ್ಥಿ, ಇನ್ನು ಎರಡು ವರ್ಷ ಹೋಗಿದ್ದರೆ ಉತ್ತಮ ಉದ್ಯೋಗ ಸಂಪಾದಿಸಿ ಇದಕ್ಕಿಂತ ಎರಡರಷ್ಟು ಹಣ ಸಂಪಾದನೆ ಮಾಡುತ್ತಿದ್ದ. ಪರಿಹಾರದ ಹಣವನ್ನು ಅವನ ತಂಗಿ ಹಾಗೂ ತಾಯಿ ಖಾತೆಗೆ ಹಾಕುತ್ತೇವೆ, ಅವರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ. ಮಗಳಿದ್ದಾಳೆ, ಅವಳಿಗಾದರೂ ಉತ್ತಮ ಭವಿಷ್ಯ ರೂಪಿಸಿ ಕೊಡುತ್ತೇನೆ ಎಂದು ತಮ್ಮ ಮನದ ದುಃಖವನ್ನು ತೋಡಿಕೊಂಡರು. ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಹಾಗೂ ಕುಣಿಗಲ್ ತಹಸೀಲ್ದಾರ್ ರಶ್ಮಿ ಇದ್ದರು.