ತುರುವೇಕೆರೆ: ಹಾಡುಹಗಲೇ ಮಹಿಳೆಯೋರ್ವರನ್ನು ಚಿರತೆ ಬಲಿ ತೆಗೆದುಕೊಂಡಿರುವ ಘಟನೆ ಸಮೀಪದ ಅರೇಮಲ್ಲೇನಹಳ್ಳಿಯಲ್ಲಿ ನಡೆದಿದೆ.

ತುರುವೇಕೆರೆ: ಹಾಡುಹಗಲೇ ಮಹಿಳೆಯೋರ್ವರನ್ನು ಚಿರತೆ ಬಲಿ ತೆಗೆದುಕೊಂಡಿರುವ ಘಟನೆ ಸಮೀಪದ ಅರೇಮಲ್ಲೇನಹಳ್ಳಿಯಲ್ಲಿ ನಡೆದಿದೆ. ಅರೇಮಲ್ಲೇನಹಳ್ಳಿ ಗ್ರಾಮದ ಸುಜಾತ (40) ಬಲಿಯಾದ ದುರ್ದೈವಿ. ಸುಜಾತ ಭಾನುವಾರ ಬೆಳಗ್ಗೆ ಎಂದಿನಂತೆ ತಮ್ಮ ಜಮೀನಿನಲ್ಲಿ ದನಕರುಗಳನ್ನು ಮೇಯಿಸಲು ತೆರಳಿದ್ದರು. ಸಾಯಂಕಾಲದ ವೇಳೆಗೆ ಸಹಜವಾಗಿ ಮನೆಗೆ ಮರಳುತ್ತಿದ್ದರು. ಅವರು ಸಾಕಷ್ಟು ಸಮಯವಾದರೂ ಮನೆಗೆ ಬಾರದಿದ್ದುದರಿಂದ ಅವರ ಪತಿ ಭೈರೇಗೌಡ ಸುಜಾತಾರನ್ನು ಹುಡುಕಿಕೊಂಡು ತಮ್ಮ ಜಮೀನಿನತ್ತ ತೆರಳಿದ್ದಾರೆ. ಆ ವೇಳೆ ಸುಜಾತ ರವರ ರಕ್ತಸಿಕ್ತವಾದ ದೇಹ ಪತ್ತೆಯಾಗಿದೆ. ಕೂಡಲೇ ಅವರು ಅಕ್ಕಪಕ್ಕದಲ್ಲಿದ್ದ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ನೋಡಲಾಗಿ ಸುಜಾತರವರ ಕುತ್ತಿಗೆಯನ್ನು ಕಚ್ಚಿರುವ ಚಿರತೆ ಸುಮಾರು ಮೂವತ್ತು ಮೀಟರ್ ನಷ್ಟು ದೂರ ಅವರನ್ನು ಎಳೆದುಕೊಂಡು ಹೋಗಿರುವ ಕುರುಹು ದೊರೆತಿದೆ.

ಅರೇಮಲ್ಲೇನಹಳ್ಳಿ ಗ್ರಾಮದ ಬಳಿ ಇರುವ ಶಂಕರಪ್ಪನ ದೇವಾಲಯದ ಬಳಿ ಇರುವ ಹುಲಿಕಲ್ ನ ಬಂಡೆ ಎಂಬ ಸ್ಥಳದಲ್ಲಿ ಸುಮಾರು ವರ್ಷಗಳಿಂದ ನಾಲ್ಕೈದು ಚಿರತೆಗಳು ಇವೆ. ಇದುವರೆಗೂ ಸಣ್ಣಪುಟ್ಟ ಪ್ರಾಣಿಗಳನ್ನು ತಿನ್ನುತ್ತಿದ್ದವು. ಆದರೆ ಈಗ ಮನುಷ್ಯರ ಮೇಲೆ ದಾಳಿ ಮಾಡಿರುವುದು ಇದೇ ಮೊದಲು ಎಂದು ಗ್ರಾಮದ ಮುಖಂಡ ಜಯರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಈಗ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಚಿರತೆಯನ್ನು ಹಿಡಿಯಬೇಕು ಅಲ್ಲದೇ ಮೃತ ಸುಜಾತ ರವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯಜಗದೀಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೃತ ಸುಜಾತರಿಗೆ ಪತಿ ಭೈರೇಗೌಡ, ಓರ್ವ ಮಗ ಮತ್ತು ಓರ್ವ ಮಗಳು ಇದ್ದಾರೆ.