ತಾಲೂಕಿನಾದ್ಯಂತ ಮೇ ತಿಂಗಳಿನಲ್ಲಿ ವಾಡಿಕೆಯ ೬೮ ಮಿಮೀ ಮಳೆ ಆಗಬೇಕಿತ್ತು, ೧೨೬ ಮಿಮೀ ಮಳೆ ಬಿದ್ದಿದೆ. ವರುಣನ ಕೃಪೆಯಿಂದ ರೈತರು ಖುಷಿಯಾಗಿದ್ದಾರೆ. ಬಿತ್ತನೆ ಕಾರ್ಯ ಜೋರಾಗಿದ್ದು, ಕೆಲ ದಿನಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ.
ಬಸವರಾಜ ಹಿರೇಮಠ
ಶಿಗ್ಗಾಂವಿ: ತಾಲೂಕಿನಲ್ಲಿ ಅವಧಿ ಪೂರ್ವದಲ್ಲಿ ಹದಭರಿತ ಮುಂಗಾರು ಮಳೆಯಾಗಿದೆ. ಹೀಗಾಗಿ ಜಮೀನುಗಳನ್ನು ಹದ ಮಾಡಿಕೊಂಡ ಬಹುತೇಕ ರೈತರು ಬಿತ್ತನೆ ಪ್ರಾರಂಭಿಸಿದ್ದಾರೆ.ತಾಲೂಕಿನಾದ್ಯಂತ ಮೇ ತಿಂಗಳಿನಲ್ಲಿ ವಾಡಿಕೆಯ ೬೮ ಮಿಮೀ ಮಳೆ ಆಗಬೇಕಿತ್ತು, ೧೨೬ ಮಿಮೀ ಮಳೆ ಬಿದ್ದಿದೆ. ವರುಣನ ಕೃಪೆಯಿಂದ ರೈತರು ಖುಷಿಯಾಗಿದ್ದಾರೆ. ಬಿತ್ತನೆ ಕಾರ್ಯ ಜೋರಾಗಿದ್ದು, ಕೆಲ ದಿನಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ. ಹೆಚ್ಚಿನ ಟ್ರ‍್ಯಾಕ್ಟರ್ ಬಳಕೆ: ಕೃಷಿಯಲ್ಲಿ ತಂತ್ರಜ್ಞಾನ ಬೆಳೆದಂತೆ ಇತ್ತೀಚಿನ ವರ್ಷಗಳಲ್ಲಿ ರೈತರು ಒಕ್ಕಲುತನಕ್ಕೆ ದುಬಾರಿ ಬೆಲೆಯ ಎತ್ತುಗಳನ್ನು ಸಾಕುವುದನ್ನು ಕಡಿಮೆ ಮಾಡಿದ್ದಾರೆ. ದುಬಾರಿ ಬಾಡಿಗೆ ನೀಡಿ ಟ್ರ‍್ಯಾಕ್ಟರ್ ಮೂಲಕವೇ ಉಳುಮೆ ಮತ್ತು ಬಿತ್ತನೆ ಮಾಡುತ್ತಿದ್ದಾರೆ.ತಾಲೂಕಿನಲ್ಲಿ ಶೇ. ೨೫ರಷ್ಟು ಮಾತ್ರ ಎತ್ತುಗಳಿವೆ. ಹೀಗಾಗಿ ಎತ್ತುಗಳಿರುವ ರೈತರು ಮೊದಲು ತಮ್ಮ ಹೊಲಗಳ ಬಿತ್ತನೆ ಕಾರ್ಯ ಪೂರ್ಣಗೊಳಿಸಿ, ನಂತರ ಬೇರೆಯವರ ಹೊಲಗಳನ್ನು ಬಾಡಿಗೆ ರೂಪದಲ್ಲಿ ಬಿತ್ತಲು ತೆರಳುತ್ತಾರೆ. ಹೀಗಾಗಿ ಎತ್ತು ಸಕಾಲಕ್ಕೆ ದೊರೆಯದ ಕಾರಣ ರೈತರು ಅನಿವಾರ್ಯವಾಗಿ ಟ್ರ್ಯಾಕ್ಟರ್ ಮೂಲಕ ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.ಇಲಿಗಳ ಕಾಟ: ಈಗಾಗಲೇ ಬಂಕಾಪುರ ಹೋಬಳಿ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದ್ದು, ಇಲಿಗಳ ಕಾಟ ಹೆಚ್ಚಾಗಿದೆ. ಬಿತ್ತಿದ ಶೇಂಗಾ, ಮೆಕ್ಕೆಜೋಳ ಬೀಜಗಳು ಮೊಳಕೆ ಒಡೆಯುವ ಮೊದಲೆ ಇಲಿಗಳು ತಿನ್ನುತ್ತಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.ಕೃಷಿ ಇಲಾಖೆ ಸಲಹೆ: ಇಲಿ ನಿಯಂತ್ರಣಕ್ಕೆ ರೈತರು ಬಿಲದ ಸುತ್ತ ಪಾಷಾಣ ಇಡುವ ಅಭ್ಯಾಸ ಹೆಚ್ಚಿನವರಿಗೆ ಇದ್ದು, ಇದರಿಂದ ತಕ್ಕ ಮಟ್ಟಿಗೆ ಇಲಿ ನಿಯಂತ್ರಣವಾಗುತ್ತದೆ. ಆದರೆ ಇಲಿಗಳು ತಮ್ಮ ಚಾಣಾಕ್ಷತನದಿಂದ ಪಾಷಾಣದ ವಾಸನೆಯನ್ನು ಬಹುಬೇಗ ಕಂಡುಹಿಡಿದು ಬಿಡುತ್ತವೆ. ಹೀಗಾಗಿ ಇಲಿಗಳನ್ನು ಕೊಲ್ಲಲು ಪಾಷಾಣದಂತಹ ಅಪಾಯಕಾರಿ ವಿಧಾನಗಳಿಗಿಂತ ಜೈವಿಕ, ಸಾಂಪ್ರದಾಯಿಕ ವಿಧಾನ ಬಳಸಿ ಇಲಿಗಳನ್ನು ನಿಯಂತ್ರಿಸಬಹುದು.
ಬಿತ್ತನೆ ಪ್ರಕ್ರಿಯೆ: ತಾಲೂಕಿನಲ್ಲಿ ಹದಭರಿತ ಮಳೆಯಾಗಿದ್ದು, ಮುಂಗಾರು ಬಿತ್ತನೆಗೆ ಪೂರಕ ವಾತಾವರಣವಿದೆ. ಕೃಷಿ ಇಲಾಖೆಯ ಮುಖಾಂತರ ತಾಲೂಕಿನ ರೈತರ ಬೇಡಿಕೆಗಳ ಅನುಸಾರ ಅವಶ್ಯವಿರುವ ಬಿತ್ತನೆ ಬೀಜಗಳ ಪೂರೈಕೆ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಸಂಪೂರ್ಣ ಬಿತ್ತನೆ ಪ್ರಕ್ರಿಯೆ ಮುಗಿಯಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಲಿ ತಿಳಿಸಿದರು.ಮಳೆ ಬೇಕು: ಈ ವರ್ಷ ಉತ್ತಮವಾಗಿ ಸುರಿದ ಮಳೆಯಿಂದ ಹೊಂಗನಸು ಹೊತ್ತು ಸಾಲ ಪಡೆದು ಭತ್ತ, ಗೋವಿನಜೋಳವನ್ನು ಬಿತ್ತನೆ ಮಾಡಿದ್ದೇನೆ. ಆದರೆ ಕೆಲವು ದಿನಗಳಿಂದ ಮಳೆಯ ಸುಳಿವೇ ಇಲ್ಲ. ಸಸಿ ಬೆಳೆಯಲು ತಕ್ಷಣ ಮಳೆ ಬೀಳಬೇಕಿದೆ ಎಂದು ಶ್ಯಾಡಂಬಿಯ ರೈತರಾದ ರುದ್ರಗೌಡ ಎಸ್. ಪಾಟೀಲ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.