ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ರೈತರ ನಡುವಿನ ಸಂಬಂಧ ಗಟ್ಟಿಗೊಳ್ಳಬೇಕಾದರೆ ವಿಶ್ವವಿದ್ಯಾಲಯದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯುವುದು ಅಗತ್ಯವಾಗಿದೆ ಎಂದು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ರೈತರ ನಡುವಿನ ಸಂಬಂಧ ಗಟ್ಟಿಗೊಳ್ಳಬೇಕಾದರೆ ವಿಶ್ವವಿದ್ಯಾಲಯದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯುವುದು ಅಗತ್ಯವಾಗಿದೆ ಎಂದು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಲಹೆ ನೀಡಿದರು.ಬಾಗಲಕೋಟೆಯ ತೋವಿವಿಯ ಉದ್ಯಾನಗಿರಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ತೋಟಗಾರಿಕೆ ಮೇಳಕ್ಕೆ ಭಾನುವಾರ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸುವದರ ಮೂಲಕ ರೈತರಿಗೆ ಬೇಕಾಗುವ ಹೊಸ ಸಂಶೋಧನೆ, ತಳಿಗಳ ಅಭಿವೃದ್ದಿ ಹಾಗೂ ಮಣ್ಣಿನ ಫಲವತ್ತತೆ ಕಾಪಾಡುಕೊಳ್ಳುವುದು ಸೇರಿದಂತೆ ಮಾರುಕಟ್ಟೆಯ ಮಾಹಿತಿ ನೀಡುವಂತೆ ಒಂದು ದೊಡ್ಡ ಆರೋಗ್ಯಯುತ ಆಸ್ಪತ್ರೆಯಾಗಿ ಪರಿಣಮಿಸಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯದ ವಿಜ್ಞಾನಗಳಿಗಿಂತ ಶಿಕ್ಷಣ ಪಡೆಯದ ರೈತರು ಕೃಷಿ, ತೋಟಗಾರಿಕೆಯಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದು, ಅದರಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಅವರ ಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಹಂಚಿಕೊಳ್ಳುವ ಅವಕಾಶ ಕಲ್ಪಿಸಬೇಕಿದೆ. ಸವಳು ಜವಳು ಭೂಮಿಯಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರಿಗೆ ತಿಳಿಸಿಕೊಡುವ ಕೆಲಸವಾಗಬೇಕು. ಮುಖ್ಯವಾಗಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ, ಕೃಷಿ, ತೋಟಗಾರಿಕ ಹಾಗೂ ಕೃಷಿ ಮಾರುಕಟ್ಟೆ ಕೂಡಿಕೊಂಡು ಮಾರುಕಟ್ಟೆ ಮಾಹಿತಿ ನೀಡುವ ಕಾರ್ಯವಾಗಬೇಕು ಎಂದು ತಿಳಿಸಿದರು.ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ತೋಟಗಾರಿಕೆ ವಿವಿಗೆ ಬಂದಾಗ ಬೆಂಗಳೂರಿನ ಲಾಲ್‌ಬಾಗ್ ಗೆ ಹೋದ ನೆನಪು ಬರುತ್ತದೆ. ಲಾಲ್‌ಬಾಗ್ ಹಾಗೆ ಹಲವು ವಿಧಧ ಹೂವುಗಳನ್ನು ಕಾಣುತ್ತಿದ್ದೇವೆ. ವಿಶ್ವವಿದ್ಯಾಲಯ ಅವಿಷ್ಕಾರ ಮಾಡಿ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ತಿಳಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಾಧನೆ ಮಾಡಿದ ರೈತರಿಗೂ ಸಹ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅವರ ಸಾಧನೆಗೆ ಸಂದ ಗೌರವಾಗಿದೆ ಎಂದರು.
ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಮಾತನಾಡಿ, ರಾಜ್ಯದಲ್ಲಿಯ ತೋಟಗಾರಿಕೆ ಬೆಳೆಗಳಿಗೆ ವಿಫುಲ ಅವಕಾಶ, ವಾತಾವರಣ ಎಲ್ಲವೂ ನಮ್ಮಲ್ಲಿದೆ. ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೋಟಗಾರಿಕೆಗೆ ವಿಶೇಷವಾಗಿದೆ. ವಿಶ್ವವಿದ್ಯಾಲಯದ ನೂತನ ಸಂಶೋಧನಗಳ ಲಾಭ ರೈತರು ಪಡೆಯುವಂತಾಗಬೇಕು ಎಂದರು.ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಯಂತ್ರೋಪಕರಣ ಖರೀದಿಸಲು ಸರ್ಕಾರ ಸಹಾಯಧನ ಮಾಡುತ್ತಿದೆ.ಯಂತ್ರೋಪಕರಣ ಬಾಡಿಗೆ ರೂಪದಲ್ಲಿ ದೊರೆಯುವಂತೆ ಸಹ ಮಾಡಲಾಗುತ್ತಿದೆ ಎಂದು ತಿಳಿಸಿದರು.ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು. ಬೆಳಗಾವಿ ವಿಭಾಗದ ಆಯುಕ್ತರಾದ ಜಾನಕಿ ಕೆ.ಎಂ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು.
ವಿಶ್ವವಿದ್ಯಾಲಯದ ಹೊರತಂದ ವಿವಿಧ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಚಿತ್ತರಗಿ-ಇಳಕಲ್ಲ ವಿಜಯ ಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಎಸ್,ಎನ್.ವಾಸುದೇವ, ಎಚ್.ಜಿ.ಮನೋಹರ, ಡಾ.ಅನಿತಾ ಕೆ.ವಿ, ಡಾ.ತಮ್ಮಯ್ಯ ಎನ್, ಬಾಲಾಜಿ ಕುಲಕರ್ಣಿ ಹಾಗೂ ಜನಾರ್ಧನ ಸೇರಿದಂತೆ ಇತರರು ಉಪಸ್ಥಿತರಿದ್ದರು.8 ಜನ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ:
ತೋಟಗಾರಿಕೆ ಕ್ಷತ್ರದಲ್ಲಿ ಸಾಧನೆ ಮಾಡಿದ 8 ಜನ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೋಲಾರ ಜಿಲ್ಲೆಯ ವಿ.ಮಂಜುನಾಥ ಬಿನ್ ಎನ್.ಎಸ್.ವೆಂಕಟೇಶಪ್ಪ, ಚಿಕ್ಕಬಳ್ಳಾಪೂರ ಜಿಲ್ಲೆಯ ಬಿ.ನಂಜುಂಡಗೌಡ, ಉತ್ತರ ಕನ್ನಡ ಜಿಲ್ಲೆಯ ನಾಗಪ್ಪ ಕಪ್ಪುಗೌಡ, ಬಾಗಲಕೋಟೆ ಜಿಲ್ಲೆಯ ಮಹಾದೇವ ಮೆಳ್ಳಿಗೇರಿ, ಬೀದರ ಜಿಲ್ಲೆಯ ಸತ್ಯಶೀಲ ವೈಜಿನಾಥ ನಿಡೋದ, ಕಲಬುರಗಿ ಜಿಲ್ಲೆಯ ಶರ್ವಕುಮಾರ ಶರಣಪ್ಪ ಆವಂಟಿ, ಯಾದಗಿರಿ ಜಿಲ್ಲೆಯ ವಿಶ್ವಶಂಕರ ಸಂತೋಷಕುಮಾರ ಹಾಗೂ ವಿಜಯಪುರ ಜಿಲ್ಲೆಯ ಬಸವರಾಜ ಪರಗೊಂಡಪ್ಪ ಮಾದೇಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.