ಸಾರಂಗಮಠದ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ವತಿಯಿಂದ ದೇಶದ ಶ್ರೇಷ್ಠ ವಿಜ್ಞಾನಿಗೆ ಕೊಡಮಾಡುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ದೇಶದ ಪರಮಾಣು ವಿಜ್ಞಾನಿ ಹಾಗೂ ಭಾರತ ಅಣುಶಕ್ತಿ ಆಯೋಗದ ಅಧ್ಯಕ್ಷ, ಮುಂಬೈ ಬಿಎಆರ್‌ಸಿ ನಿರ್ದೇಶಕ ಡಾ.ಅನೀಲ ಕಾಕ್ಕೋಡ್ಕರ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದ ಸಾರಂಗಮಠದ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ವತಿಯಿಂದ ದೇಶದ ಶ್ರೇಷ್ಠ ವಿಜ್ಞಾನಿಗೆ ಕೊಡಮಾಡುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ದೇಶದ ಪರಮಾಣು ವಿಜ್ಞಾನಿ ಹಾಗೂ ಭಾರತ ಅಣುಶಕ್ತಿ ಆಯೋಗದ ಅಧ್ಯಕ್ಷ, ಮುಂಬೈ ಬಿಎಆರ್‌ಸಿ ನಿರ್ದೇಶಕ ಡಾ.ಅನೀಲ ಕಾಕ್ಕೋಡ್ಕರ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಗಳು, ಡಿ.24ರಂದು ಸಂಜೆ 4ಕ್ಕೆ ಶ್ರೀಮಠದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂತಾರಾಷ್ಟ್ರೀಯ ವಿಜ್ಞಾನ ಕ್ಷೇತ್ರದಲ್ಲಿ ಸಾಧನಗೈದವರಿಗೆ 2016 ರಿಂದ ಪ್ರತಿ ವರ್ಷ ಸಿಂದಗಿ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ವತಿಯಿಂದ ಶ್ರೇಷ್ಠ ಗಣಿತ ಮತ್ತು ಖಗೋಳ ವಿಜ್ಞಾನಿಯಾದ ಭಾಸ್ಕರಾಚಾರ್ಯ ಹೆಸರಿನಲ್ಲಿ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ₹1 ಲಕ್ಷ ನಗದು ಮತ್ತು ಬೆಳ್ಳಿ ಫಲಕ ಒಳಗೊಂಡಿದೆ ಎಂದು ತಿಳಿಸಿದರು.
ಈಗಾಗಲೇ ಈ ಪ್ರಶಸ್ತಿ ಖ್ಯಾತ ವಿಜ್ಞಾನಿಗಳಾದ ಪ್ರೊ.ಸಿ.ಎನ್.ಆರ್. ರಾವ್, ಇಸ್ರೋ ಮಾಜಿ ನಿರ್ದೇಶಕ ಪ್ರೊ.ಯು.ಆರ್. ರಾವ್, ಕೃಷಿ ವಿಜ್ಞಾನಿ ಡಾ. ಎಸ್.ಎ. ಪಾಟೀಲ, ಬಾಹ್ಯಕಾಶ ವಿಜ್ಞಾನಿ ಡಾ.ಎಸ್.ಕೆ.ಕಸ್ತೂರಿರಂಗನ್, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣಕುಮಾರ್, ಕೃಷಿ ವಿಜ್ಞಾನಿ ಡಾ.ಎಸ್. ಅಯ್ಯಪ್ಪನ್ ಅವರಿಗೆ ನೀಡಿ ಗೌರವಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪರಮಾಣು ವಿಜ್ಞಾನಿ ಡಾ.ಅನೀಲ ಕಾಕ್ಕೋಡ್ಕರ್ ಅವರ ಸಾಧನೆ ಗುರುತಿಸಿ ಪರಮಾಣು ವಿಜ್ಞಾನಿ ಡಾ.ಅನೀಲ ಕಾಕ್ಕೋಡ್ಕರ್‌ಗೆ ಡಿ.24ರಂದು ಸಿಂದಗಿ ಸಾರಂಗಮಠದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಮಾರಂಭದಲ್ಲಿ ಡಾ.ಪರಮಹಂಸ ಸಾಲಿಮಠ, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಅರುಣ ಶಹಾಪೂರ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಶೋಕ ವಾರದ, ಗಂಗಾಧರ ಜೋಗೂರ, ಅಶೋಕ ಮಸಳಿ, ಡಾ.ಬಿ.ಜಿ. ಮಠ ಸೇರಿದಂತೆ ಇತರರಿದ್ದರು.--------
ಬಾಕ್ಸ್.... ಡಾ.ಅನೀಲ ಕಾಕ್ಕೋಡ್ಕರ್ ಹಿನ್ನೆಲೆಮಧ್ಯಪ್ರದೇಶ ಮೂಲದವರಾದ ಡಾ.ಅನೀಲ ಕಾಕ್ಕೋಡ್ಕರ ಒಬ್ಬ ಪ್ರಖ್ಯಾತ ಭಾರತೀಯ ಪರಮಾಣು ವಿಜ್ಞಾನಿ. ಪರಮಾಣು ಶಕ್ತಿಗೆ ಇಂಧನವಾಗಿ ಥೋರಿಯಂನಲ್ಲಿ ಭಾರತದ ಸ್ವಾವಲಂಬನೆ ಸಾಧಿಸಿದ ಕಾಕೋಡ್ಕರ್ ಅವರನ್ನು ಚಾಂಪಿಯನ್ ಎಂದು ಸಂಬೋಧಿಸುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪದ್ಮವಿಭೂಷಣ ನೀಡಿ ಗೌರವಿಸಿದೆ.
ಡಾ.ಅನೀಲ ಕಾಕೋಡ್ಕರ್ ಅವರು ಆರಂಭಿಕ ಶಿಕ್ಷಣವನ್ನು ಬರ್ವಾನಿ ಮತ್ತು ಖಾರ್ಗೋನೆಯಲ್ಲಿ ಪಡೆದಿದ್ದಾರೆ. ಮುಂಬೈ ವಿಶ್ವವಿದ್ಯಾನಿಲಯದಿಂದ 1963 ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ, 1969ರಲ್ಲಿ ನಾಟಿಂಗ್ ಹ್ಯಾಮ್ ವಿಶ್ವವಿದ್ಯಾಲಯದಿಂದ ಪ್ರಾಯೋಗಿಕ ಒತ್ತಡ ವಿಶ್ಲೇಷಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1964ರಲ್ಲಿ ಬಾಬಾ ಪರಮಾಣು ಸಂಶೋಧನಾ ಕೇಂದ್ರ ಸೇರಿದರು. 1996ರಲ್ಲಿ ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್ ನಿರ್ದೇಶಕರಾದರು.ಹೈಟೆಕ್ ಯೋಜನೆಯಾದ ಧ್ರುವ ರಿಯಾಕ್ಟರ್‌ನ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು. 1974 ಮತ್ತು 1998ರಲ್ಲಿ ಅವರು ಭಾರತದ ಶಾಂತಿಯುತ ಪರಮಾಣು ಪರೀಕ್ಷೆಗಳ ವಾಸ್ತುಶಿಲ್ಪಿಗಳ ತಂಡದ ಪ್ರಮುಖ ಭಾಗವಾಗಿದ್ದರು. 1974 ಮೇ 18ರಂದು ಪೋಖ್ರಾನ್‌ನಲ್ಲಿ ಭಾರತ ನಡೆಸಿದ ಮೊದಲ ಯಶಸ್ವಿ ಶಾಂತಿಯುತ ಪರಮಾಣು ಸ್ಫೋಟದ ಪ್ರಯೋಗದ ಪರೀಕ್ಷೆಗಳ ಸರಣಿಯಲ್ಲಿ ಡಾ.ಕಾಕ್ಕೋಡ್ಕರ್ ಪ್ರಮುಖ ಪಾತ್ರ ವಹಿಸಿದ್ದರು.
2000-2009 ವರ್ಷಗಳಲ್ಲಿ ಭಾರತ ಸರ್ಕಾರದ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯಾಗಿದ್ದರು. ಜನವರಿ 2010ರಿಂದ ಜನವರಿ 2015ರ ಅವಧಿಯಲ್ಲಿಡಿ ಎಇ ಹೋಮಿ ಬಾಬಾ ಚೇರ್ ಪ್ರೊಫೆಸರ್ ಆಗಿದ್ದರು ಮತ್ತು ಜನವರಿ 2015 ರಿಂದ ಜನವರಿ 2017 ರವರೆಗೆ ಐಎನ್‌ಎಇ ಸತೀಶ್ ಧವನ್ ಚೇರ್ ಆಫ್ ಎಂಜಿನಿಯರಿಂಗ್ ಎಮಿನೆನ್ಸ್ ಆಗಿದ್ದರು. ಎಐಸಿಟಿಇ ಡಿಸ್ಟಿಂಗ್ವಿಶ್ಡ್ ಚೇರ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ:
ಡಾ.ಅನೀಲ ಕಾಕ್ಕೋಡ್ಕರ್ ಅವರು ಭಾರತೀಯ ರಾಷ್ಟ್ರೀಯ ಎಂಜಿನಿಯರಿಂಗ್ ಅಕಾಡೆಮಿಯ ಫೆಲೋ ಆಗಿದ್ದಾರೆ ಮತ್ತು 1999-2000ದ ಅವಧಿಯಲ್ಲಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ವಿಜ್ಞಾನ ಅಕಾಡೆಮಿ, ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಭಾರತ ಮತ್ತು ಮಹಾರಾಷ್ಟ್ರ ವಿಜ್ಞಾನ ಅಕಾಡೆಮಿಯ ಫೆಲೋ ಆಗಿದ್ದಾರೆ. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಅಕಾಡೆಮಿಯ ಸದಸ್ಯರಾಗಿದ್ದಾರೆ ಮತ್ತು ವಿಶ್ವ ನಾವೀನ್ಯತೆ ಪ್ರತಿಷ್ಠಾನದ ಗೌರವ ಸದಸ್ಯ ಮತ್ತು 1999-2002ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಪರಮಾಣು ಸುರಕ್ಷತಾ ಸಲಹಾ ಗುಂಪಿನ (ಐಎನ್‌ಎಸ್‌ಜಿ) ಸದಸ್ಯರಾಗಿದ್ದರು. ಮುಂಬೈನ ವಿ.ಜೆ.ಟಿ.ಐನ ಗವರ್ನರ್‌ಗಳ ಮಂಡಳಿಯಲ್ಲಿದ್ದಾರೆ. 2012ರಲ್ಲಿ ರೈಲು ಸುರಕ್ಷತಾ ಸಮಿತಿ ಮುಖ್ಯಸ್ಥರಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮುಂಬೈನ ರಾಜೀವ್ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.ವೈದ್ಯಕೀಯ ಸಾಧನ ನಾವೀನ್ಯತೆಗಾಗಿ 11 ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸಂಸ್ಥೆಗಳ ಜಾಲವಾದ ಬಯೋ ಮೆಡಿಕಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ (ಇನ್ಕ್ಯುಬೇಷನ್) ಕೇಂದ್ರದ ಸ್ಟೀರಿಂಗ್ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಜಲಂಧರ್‌ನ ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಮಹಾರಾಷ್ಟ್ರ ಜ್ಞಾನ ನಿಗಮ ಲಿಮಿಟೆಡ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪುಸ್ತಕಗಳು:ಡಾ. ಅನೀಲ ಕಾಕೋಡ್ಕರ್ ಮತ್ತು ಸುರೇಶ್ ಗಂಗೋತ್ರ ಅವರಿಂದ ರಚಿಸಲ್ಪಟ್ಟ ಫೈರ್ ಆ್ಯಂಡ್ ಫ್ಯೂರಿ ಟ್ರಾನ್ಸ್‌ಫಾಮಿರ್ಂಗ್ ಇಂಡಿಯಾಸ್ ಸ್ಟ್ರಾಟೆಜಿಕ್ ಐಡೆಂಟಿಟಿ ಪುಸ್ತಕವನ್ನು ಹೊರತಂದಿದ್ದಾರೆ.
ಪ್ರಶಸ್ತಿ ಮತ್ತು ಗೌರವಗಳು:ಡಾ. ಅನೀಲ ಕಾಕೋಡ್ಕರ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳಿಗೆ ಭಾಜನರಾಗಿದ್ದಾರೆ. ಅವರಿಗೆ 1998ರಲ್ಲಿ ಪದ್ಮಶ್ರೀ ಪ್ರಶಸ್ತಿ, 1999ರಲ್ಲಿ ಪದ್ಮಭೂಷಣ ಮತ್ತು 2009ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿವೆ.