ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಅನೇಕ ವರ್ಷಗಳಿಂದ ನಾಪತ್ತೆಯಾಗಿದ್ದ ಕಸದ ರಾಶಿಯ ‘ಬ್ಲ್ಯಾಕ್‌ ಸ್ಪಾಟ್‌’ಗಳು ಈಗ ಎಲ್ಲೆಂದರಲ್ಲಿ ತಲೆ ಎತ್ತುತ್ತಿದ್ದು, ರಸ್ತೆ ಬದಿಗಳು ಕಸದ ಕೊಂಪೆಗಳಾಗುತ್ತಿವೆ. ಕಸ ಸಂಗ್ರಹ, ನಿರ್ವಹಣೆ ಯಾವುದೂ ಶಿಸ್ತುಬದ್ಧವಾಗಿ ನಡೆಯದೆ ಜನರು ಬವಣೆಪಡುವಂತಾಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಅನೇಕ ವರ್ಷಗಳಿಂದ ನಾಪತ್ತೆಯಾಗಿದ್ದ ಕಸದ ರಾಶಿಯ ‘ಬ್ಲ್ಯಾಕ್‌ ಸ್ಪಾಟ್‌’ಗಳು ಈಗ ಎಲ್ಲೆಂದರಲ್ಲಿ ತಲೆ ಎತ್ತುತ್ತಿದ್ದು, ರಸ್ತೆ ಬದಿಗಳು ಕಸದ ಕೊಂಪೆಗಳಾಗುತ್ತಿವೆ. ಕಸ ಸಂಗ್ರಹ, ನಿರ್ವಹಣೆ ಯಾವುದೂ ಶಿಸ್ತುಬದ್ಧವಾಗಿ ನಡೆಯದೆ ಜನರು ಬವಣೆಪಡುವಂತಾಗಿದೆ.

ಈ ಹಿಂದೆ ಆಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಯು ಮಹಾನಗರ ಪಾಲಿಕೆಯ ಕಸ ಸಂಗ್ರಹ, ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಅನೇಕ ಕೊರತೆಗಳ ನಡುವೆಯೂ ಕಸ ಸಂಗ್ರಹ, ನಿರ್ವಹಣೆಯಲ್ಲಿ ದೊಡ್ಡ ಸಮಸ್ಯೆಗಳು ಇರಲಿಲ್ಲ. ಬ್ಲ್ಯಾಕ್‌ ಸ್ಪಾಟ್‌ಗಳೂ ಮಾಯವಾಗಿದ್ದವು. ಈ ಕಂಪೆನಿಯ ಗುತ್ತಿಗೆಯನ್ನು ನಿಲ್ಲಿಸಿದ ಬಳಿಕ ಪಾಲಿಕೆಯೇ ಎಲ್ಲ ಜವಾಬ್ದಾರಿ ನಿರ್ವಹಿಸುತ್ತಿದೆ. ಕಸದ ಸಮಸ್ಯೆ ಅಲ್ಲಿಂದಲೇ ಮರಳಿ ಆರಂಭವಾಗಿದೆ.

ಸ್ವಚ್ಛ ಮಂಗಳೂರಿಗೆ ಕುತ್ತು:

ನಗರದ ಅನೇಕ ವಾರ್ಡ್‌ಗಳಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಪ್ರತಿ ಶುಕ್ರವಾರ ಒಣ ಕಸ ಹಾಗೂ ಇತರ ದಿನಗಳಲ್ಲಿ ಪ್ರತಿದಿನ ಹಸಿ ಕಸ ಸಂಗ್ರಹಿಸುವ ನಿಯಮ ಮಾಡಲಾಗಿತ್ತು. ಆದರೆ ಪ್ರತಿದಿನ ಕಸ ಸಂಗ್ರಹ ಆಗದೆ ಮನೆಗಳಿಂದ ಹೊರಗಿಟ್ಟ ಕಸ ಬೀದಿನಾಯಿಗಳಿಂದಾಗಿ ರಸ್ತೆ ತುಂಬ ಚೆಲ್ಲಾಪಿಲ್ಲಿಯಾಗುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಮರುದಿನ ಕಸ ಸಂಗ್ರಹಿಸಲು ಆಗಮಿಸುವ ಸಿಬ್ಬಂದಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಕಸ ತೆಗೆಯುವುದೇ ಇಲ್ಲ. ಹೀಗೇ ಮುಂದುವರಿದರೆ ಸ್ವಚ್ಛ ಮಂಗಳೂರು ಸ್ವಚ್ಛತೆಯಲ್ಲಿ ಕೊನೆ ಸ್ಥಾನಕ್ಕೆ ಹೋಗುವುದರಲ್ಲಿ ಸಂಶಯವೇ ಇಲ್ಲ.

ಈ ವರ್ಷ ಫೆಬ್ರವರಿಯಲ್ಲಿ ಪಾಲಿಕೆ ಆಡಳಿತದ ಐದು ವರ್ಷದ ಅವಧಿ ಮುಗಿದಿದ್ದು, ಚುನಾವಣೆಯಾಗದೆ ಜನಪ್ರತಿನಿಧಿಗಳೇ ಇಲ್ಲ, ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿಯಾಗಿ ಮುಂದುವರಿದಿದ್ದಾರೆ. ಅಧಿಕಾರಿಗಳು ಸರಿಯಾಗಿ ನಿಯಂತ್ರಣ ಮಾಡದೆ ಇರುವುದರಿಂದ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.

ಎಲ್ಲೆಡೆ ಕಸ.. ಕಸ:

ನಗರದ ಬಹುತೇಕ ಎಲ್ಲ ರಸ್ತೆ ಬದಿಗಳಲ್ಲಿ ಧೂಳು- ಕಸ ರಾಶಿ ಬಿದ್ದಿದೆ. ಅಲ್ಲಲ್ಲಿ ಅಗೆದು ಹಾಕಿದ ರಸ್ತೆಗಳಿಗೆ ಮುಕ್ತಿ ಕೊಡಿಸುವವರಿಲ್ಲ. ಹಿಂದೆ ಆಯಕಟ್ಟಿನ ಜಾಗಗಳು ಕಸ ಹಾಕುವ ತಾಣಗಳಾಗಿದ್ದವು. ಆ ಸ್ಪಾಟ್‌ಗಳನ್ನು ನಗರವಾಸಿಗಳು ಮತ್ತೆ ನೆನಪಿಸಿಕೊಂಡು ಮತ್ತೆ ಬ್ಲ್ಯಾಕ್‌ ಸ್ಪಾಟ್‌ ಆಗುತ್ತಿವೆ. ಕೆಲವೆಡೆ ಸಿಸಿ ಕ್ಯಾಮರಾ ಹಾಕಿದ್ದರೂ ಅದರ ಫೂಟೇಜ್‌ ಪಡೆದು ಎಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಜಿ ಕಾರ್ಪೊರೇಟರ್‌ವೊಬ್ಬರು ಪ್ರಶ್ನಿಸುತ್ತಾರೆ.

ರಸ್ತೆ ಬದಿಯಲ್ಲೇ ಕಸ ವರ್ಗಾವಣೆ, ದುರ್ನಾತ!

ಮನೆ ಮನೆಗಳಿಂದ ಸಂಗ್ರಹಿಸಿದ ಹಸಿಕಸವನ್ನು ನಗರದ ವಿವಿಧೆಡೆ ರಸ್ತೆ ಬದಿಯಲ್ಲೇ ಕಂಪ್ರೆಸರ್‌ ಲಾರಿಗೆ ವರ್ಗಾಯಿಸಲಾಗುತ್ತಿದೆ. ಆಗ ಉತ್ಪತ್ತಿಯಾಗುವ ಕೊಳಕು ನೀರು ರಸ್ತೆ ಬದಿಯಲ್ಲೇ ಹರಿಯುವುದರೊಂದಿಗೆ ಆ ಪ್ರದೇಶವಿಡೀ ದುರ್ನಾತ ಬೀರುತ್ತಿದೆ. ನಗರದ ಮೋರ್ಗನ್ಸ್‌ ಗೇಟ್‌, ಬಿಕರ್ನಕಟ್ಟೆ, ಮಣ್ಣಗುಡ್ಡ, ಉರ್ವ ಮಾರ್ಕೆಟ್‌ ಸೇರಿದಂತೆ ಎಲ್ಲೆಡೆ ಈ ದೃಶ್ಯ ನೋಡಲು ಸಿಗುತ್ತಿದೆ. ಜನರು ಮೂಗು ಮುಚ್ಚಿ ಸಂಚರಿಸುವಂತಾಗಿದೆ.