ನೌಕಾನೆಲೆಯ ಕಸ ಸುರಿಯುವುದನ್ನು ನಿಲ್ಲಿಸಲು ಹಾರವಾಡ ಗ್ರಾಮಸ್ಥರ ಮನವಿ

KannadaprabhaNewsNetwork |  
Published : Nov 27, 2026, 02:30 AM IST
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಆಗಮಿಸಿದ್ದ ಹಾರವಾಡ ಗ್ರಾಮಸ್ಥರು. | Kannada Prabha

ಸಾರಾಂಶ

ವಿಚಾರಣೆ ವೇಳೆ ಕಸವನ್ನು ಕಾರವಾರ ನೌಕಾನೆಲೆಯಿಂದ ತರಲಾಗುತ್ತಿದೆ ಎಂದು ಚಾಲಕ ಹೇಳಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾರವಾರ: ಕಾರವಾರ ನೌಕಾನೆಲೆಯಿಂದ ಕಸವನ್ನು ತಂದು ಹಾರವಾಡ ಗ್ರಾಮದ ಹೊಲ, ಗುಡ್ಡ ಹಾಗೂ ನೀರಿನ ಮೂಲಗಳ ಸಮೀಪ ಅಕ್ರಮವಾಗಿ ಸುರಿಯಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಸ ಸುರಿಯುವುದನ್ನು ತಕ್ಷಣ ನಿಲ್ಲಿಸಿ, ಈಗಾಗಲೇ ಸುರಿದಿರುವ ಕಸವನ್ನು ತೆರವುಗೊಳಿಸಿ ಸಾರ್ವಜನಿಕ ಸೌಲಭ್ಯಗಳನ್ನು ರಕ್ಷಿಸುವಂತೆ ಅವರು ಒತ್ತಾಯಿಸಿದ್ದಾರೆ.ಇದೇ ನ. 21ರಂದು ಮಧ್ಯಾಹ್ನ ವಾಹನದಲ್ಲಿ ಕಸವನ್ನು ತಂದು ಹಾರವಾಡ ಗ್ರಾಮದ ವ್ಯಾಪ್ತಿಯಲ್ಲಿ ಸುರಿಯಲಾಗಿತ್ತು. ಇದನ್ನು ತಡೆಯಲು ಗ್ರಾಮಸ್ಥರು ಮುಂದಾದರೂ ಚಾಲಕ ವಾಹನ ನಿಲ್ಲಿಸಿರಲಿಲ್ಲ ಎನ್ನಲಾಗಿದೆ. ಅದೇ ದಿನ ಮಧ್ಯಾಹ್ನ 1.30ರ ಸುಮಾರಿಗೆ ವಿಚಾರಣೆ ನಡೆಸಿದಾಗ, ಬಹಳ ದಿನಗಳಿಂದ ಗ್ರಾಮದಲ್ಲಿ ಕಸ ಸುರಿಯುತ್ತಿರುವುದಾಗಿ ಚಾಲಕ ತಿಳಿಸಿದ್ದಾನೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ವಿಚಾರಣೆ ವೇಳೆ ಕಸವನ್ನು ಕಾರವಾರ ನೌಕಾನೆಲೆಯಿಂದ ತರಲಾಗುತ್ತಿದೆ ಎಂದು ಚಾಲಕ ಹೇಳಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗಾಗಿ ನೌಕಾನೆಲೆಯಲ್ಲಿ ಕಸ ಸಾಗಣೆಗೆ ಆದೇಶ ನೀಡಿದವರು ಯಾರು, ಗುತ್ತಿಗೆದಾರರು ಯಾರು ಹಾಗೂ ನೌಕಾನೆಲೆಯಿಂದ ಈವರೆಗೆ ಎಷ್ಟು ಲೋಡ್ ಕಸವನ್ನು ಗ್ರಾಮಕ್ಕೆ ಕಳುಹಿಸಲಾಗಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ನಂತರ ವಾಹನವನ್ನು ಗ್ರಾಮ ಪಂಚಾಯಿತಿ ವಶಕ್ಕೆ ಪಡೆದು ಅಂಕೋಲಾ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಈ ಸಂಬಂಧ ನವೆಂಬರ್ 23ರಂದು ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದಲ್ಲಿ ಕಸ ಸುರಿಯುವುದರಿಂದ ಕುಡಿಯುವ ನೀರಿನ ಬಾವಿ, ಬೋರ್‌ವೆಲ್ ಹಾಗೂ ಹಳ್ಳದ ನೀರು ಕಲುಷಿತವಾಗುವ ಆತಂಕವಿದೆ. ಮುಖ್ಯ ರಸ್ತೆ ಮತ್ತು ಹೊಲದ ರಸ್ತೆಗಳ ಬಳಿಯೂ ಕಸದಿಂದ ದುರ್ವಾಸನೆ ಹರಡುತ್ತಿದೆ. ಶಾಲೆ ಹಾಗೂ ಅಂಗನವಾಡಿ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಗಿ ಡೆಂಘೀ, ಮಲೇರಿಯಾ ಹಾಗೂ ಭೇದಿಯಂತಹ ಕಾಯಿಲೆಗಳು ಹರಡುವ ಅಪಾಯವಿದೆ. ಹೊಲಗಳ ಬೆಳೆ ಹಾನಿಯಾಗುವುದರ ಜತೆಗೆ ಜಾನುವಾರುಗಳ ಆರೋಗ್ಯಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ತನಿಖೆ ನಡೆಸಿ, ಕಸ ಸುರಿಯುವುದನ್ನು ತಕ್ಷಣ ನಿಲ್ಲಿಸಬೇಕು. ಈಗಾಗಲೇ ಸುರಿದಿರುವ ಕಸವನ್ನು ತೆರವುಗೊಳಿಸಿ, ಕುಡಿಯುವ ನೀರಿನ ಮೂಲಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹಾರವಾಡ ಗ್ರಾಮಸ್ಥರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿತ್ತರಂಜನ್ ಬೋಳಾರ್‌ಗೆ ರಾಜ್ಯದ ಶ್ರೇಷ್ಠ ಸಾಧಕ ಪುರಸ್ಕಾರ ‘ಕರುನಾಡ ರತ್ನ’ ಪ್ರಶಸ್ತಿ
ಸೌಜನ್ಯಾ ಪ್ರಕರಣದಲ್ಲಿ ಸಿಎಂ ಡಿಕೆಶಿ ನ್ಯಾಯ ಕೊಡಿಸಬೇಕು: ತಿಮರೋಡಿ