ಹಾವೇರಿ: ವಿದ್ಯಾರ್ಥಿಗಳು ಕಠಿಣ ಅಭ್ಯಾಸದಿಂದ ಉನ್ನತ ಹುದ್ದೆ ಪಡೆಯುವ ಮೂಲಕ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿದೆ ಎಂದು ಬೆಂಗಳೂರು ಅಬಕಾರಿ ಇಲಾಖೆಯ ಡಿವೈಎಸ್‌ಪಿ ಬಸವರಾಜ ಕರಮಣ್ಣನವರ ತಿಳಿಸಿದರು.ಸ್ಥಳೀಯ ಬಸವೇಶ್ವರ ನಗರದ 12ನೇ ಕ್ರಾಸ್‌ನಲ್ಲಿರುವ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ 2025- 2026ನೇ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಿರಂತರ ಗುರುಗಳ ಸಲಹೆ- ಸೂಚನೆ ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಮುಂದಿನ ಗುರಿಯನ್ನು ಮುಟ್ಟಲು ಶ್ರಮವಹಿಸಿದರೆ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗಲಿದೆ. ವಿದ್ಯಾರ್ಥಿಗಳಿಗೆ ಪಿಯು ಹಂತ ಮಹತ್ವಪೂರ್ಣವಾಗಿದೆ. ಮುಂದಿನ ಬದುಕಿನ ದಾರಿಗೆ ಇದು ತಳಹದಿಯಾಗಲಿದೆ. ಭಾರತ ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿದ್ದು, ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ಸಿಗಲಿದೆ. ಉತ್ತಮವಾಗಿ ಓದುವ ಮೂಲಕ ಕಾಲೇಜಿಗೆ ಹಾಗೂ ಪಾಲಕರಿಗೆ ಕೀರ್ತಿಯನ್ನು ತರಬೇಕು ಎಂದರು.ಬ್ಯಾಡಗಿ ಸಿಪಿಐ ಮಹಾಂತೇಶ ಲಂಬಿ ಮಾತನಾಡಿ, ಉತ್ತಮ ಅಭ್ಯಾಸ ಮಾಡಿ ಉನ್ನತ ಹುದ್ದೆ ಪಡೆಯಲು ನಿರಂತರ ಶ್ರಮಬೇಕು. ಅಧ್ಯಯನಶೀಲತೆ ಮೂಲಮಂತ್ರವಾಗಬೇಕು. ನಿಮ್ಮ ಗುರಿ ನಿಖರವಾಗಿರಬೇಕು. ಅದನ್ನು ಮುಟ್ಟಲು ಸದಾ ಜಾಗೃತರಾಗಿ ಅಭ್ಯಾಸ ಮಾಡಿ ಜೀವನದಲ್ಲಿ ಯಾಶಸ್ವಿ ವ್ಯಕ್ತಿಗಳಾಗಬೇಕು. ಸ್ವಾಮಿ ವಿವೇಕಾನಂದ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವ ಕಾಲೇಜು ಆಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರವಿಕುಮಾರ ಪೂಜಾರ ಮಾತನಾಡಿ, ಅನುಭವಿ ಉಪನ್ಯಾಸಕರು ಹೊಂದಿರುವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ನಮ್ಮ ಕಾಲೇಜಿನ ವಿದ್ಯಾರ್ಥಿನಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುವುದು ಹೆಮ್ಮೆ ವಿಷಯವಾಗಿದೆ. ಗುಣಾತ್ಮಕ ಶಿಕ್ಷಣ ನೀಡುವುದೇ ನಮ್ಮ ಉದ್ದೇಶವಾಗಿದೆ ಎಂದರು.