- ಮಲೇಬೆನ್ನೂರು ನೀರಾವರಿ ಕಚೇರಿಗೆ ಫ್ಲೆಕ್ಸ್ ಕಟ್ಟಿ ಕರ್ತವ್ಯಕ್ಕೆ ಅಡ್ಡಿ । ಕೆಲವರ ವಶ, ಪೊಲೀಸ್ ವಾಹನಕ್ಕೆ ಘೇರಾವ್
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಭದ್ರಾ ನಾಲೆಯ ಕೊನೆ ಭಾಗದ ನಾಲೆಯಲ್ಲಿ ಹೂಳು ತೆರವು, ಗೇಟ್‌ಗಳ ದುರಸ್ತಿ ಮತ್ತು ಜಂಗಲ್ ತೆಗೆಸುವ ಕಾಮಗಾರಿ ನಡೆಸಲು ಒತ್ತಾಯಿಸಿ ಮಲೇಬೆನ್ನೂರು ನೀರಾವರಿ ನಿಗಮದ ಎದುರು ದಾವಣಗೆರೆ ಮತ್ತು ಹರಿಹರ ತಾಲೂಕಿನ ರೈತರು ಮಂಗಳವಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಭಾವಚಿತ್ರ ಹಿಡಿದು ಶಿವಮೊಗ್ಗ- ಹೊನ್ನಾಳಿ ಮಾಗದಲ್ಲಿ ವಾಹನಗಳ ಸಂಚಾರ ತಡೆದು ರಸ್ತೆ ತಡೆ ಚಳವಳಿ ನಡೆಸಿದರು.ಬೆಳಗ್ಗೆ ನೀರಾವರಿ ನಿಗಮ ನೌಕರರು ಕರ್ತವ್ಯ ನಿರ್ವಹಿಸಲೂ ಬಿಡದೇ ಬಾಗಿಲಿಗೆ ರೈತ ಸಂಘದ ಫ್ಲೆಕ್ಸ್ ಕಟ್ಟಿದ ಆಕ್ರೋಶ ವ್ಯಕ್ತಪಡಿಸಿದರು. ರೈತರ ಪ್ರತಿಭಟನೆಯಿಂದಾಗಿ ನೌಕರರು ಸ್ವಲ್ಪ ಹೊತ್ತು ಮರದ ಕೆಳಗೆ ಕುಳಿತರು. 1 ಗಂಟೆ ನಂತರ ಪೊಲೀಸರ ಭದ್ರತೆಯಲ್ಲಿ ಮತ್ತೆ ನೌಕರರು ಕಚೇರಿಯೊಳಗೆ ತೆರಳಿದಾಗ ರೈತರು ತಡೆದರು.
ಪ್ರತಿಭಟನಾನಿರತ ಕೆಲ ರೈತರನ್ನು ವಶಕ್ಕೆ ಪಡೆದು ಪೋಲಿಸ್ ವಾಹನದಲ್ಲಿ ಕೂರಿಸಲಾಯಿತು. ಆಗ ಕೆಲವರು ಪೊಲೀಸ್ ವಾಹನದ ಚಕ್ರದ ಮುಂಭಾಗದಲ್ಲಿ ಕುಳಿತು, ಚಲಿಸದಂತೆ ಅಡ್ಡಿಪಡಿಸಿದರು. ಸಂಜೆ 4 ಗಂಟೆಯಾದರೂ ಯಾವುದೇ ರಾಜಕಾರಣಿಗಳು, ಅಧಿಕಾರಿಗಳು ಸ್ಥಳ್ಕಕೆ ಬರಲಿಲ್ಲ. ಗೇಟ್ ಬಳಿಯೇ ರೈತ ಮುಖಂಡರು ಧರಣಿ ಮುಂದುವರಿಸಿದರು.
ಗುತ್ತೂರು, ಗಂಗನರಸಿ, ಅಮರಾವತಿ ಮತ್ತು ಕೋಡಿಹಳ್ಳಿ ಗ್ರಾಮಗಳ ರೈತರಾದ ಕರಿಬಸಪ್ಪ, ಗೌಡರ ಮಂಜಣ್ಣ, ಶಿವಪ್ಪ, ವಿರೂಪಾಕ್ಷಪ್ಪ, ಪಾಲಾಕ್ಷಪ್ಪ, ನಾಗರಾಜ್, ರೋಹನ್, ಪರಮೆಶ್ವರಪ್ಪ, ಮಹದೇವಪ್ಪ, ರಾಜಣ್ಣ, ಮಲ್ಲೇಶ್,ಲೋಕಣ್ಣ, ಸೋಮಣ್ಣ, ವೀರಮ್ಮ, ಯಲ್ಲಮ್ಮ, ರಾಮಮ್ಮ, ಮಂಜಮ್ಮ, ಗುಡ್ಡಪ್ಪ ಹಾಗೂ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.
-೨೨-ಎಂಬಿಆರ್೧: ನಾಲೆ ಕೊನೆ ಭಾಗದ ರೈತರಿಗೆ ನೀರು ಹರಿಸಲು ಒತ್ತಾಯಿಸಿ ಮಲೇಬೆನ್ನೂರು ನೀರಾವರಿ ಇಲಾಖೆ ಕಚೇರಿ ಎದುರು ಹರಿಹರ, ದಾವಣಗೆರೆ ತಾಲೂಕಿನ ರೈತರು ರಸ್ತೆ ತಡೆ ನಡೆಸಿದರು.