ಕಾರವಾರ: ಮೀನುಗಾರರಿಗೆ ಮಾರಕವಾಗಿರುವ ಕೇಣಿ ಬಂದರು ಯೋಜನೆ ಕೈಬಿಡುವಂತೆ ಆಗ್ರಹಿಸಿದ ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ, ಒಂದು ವೇಳೆ ಬಂದರು ನಿರ್ಮಾಣಕ್ಕೆ ಮುಂದಾದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.ಈ ಕುರಿತು ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೂ ಮನವಿ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಬೃಹತ್ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿ ಮಾಡಲು ಮುಂದಾಗಿರುವುದನ್ನು ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ ತೀವ್ರವಾಗಿ ವಿರೋಧಿಸುತ್ತಿದೆ. ಕಾರವಾರ ಅಂಕೋಲಾ ಭಾಗದ ಸಾಕಷ್ಟು ಮೀನುಗಾರರು ಮೀನುಗಾರಿಕೆಯನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಈ ಹಿಂದೆ ನೌಕಾನೆಲೆ ನಿರ್ಮಾಣವಾಗುವಾಗ ಸಾವಿರಾರು ಎಕರೆ ಜಮೀನನ್ನು, ಕಡಲ ತೀರವನ್ನ ವಶಕ್ಕೆ ಪಡೆದ ನಂತರ ಮೀನುಗಾರರಿಗೆ ಮೀನುಗಾರಿಕೆ ಮಾಡಲು ಕಡಲ ತೀರ ಇಲ್ಲದ ರೀತಿಯಲ್ಲಿ ಆಗಿದೆ. ಇದೀಗ ಕೇಣಿ ಭಾಗದಲ್ಲಿ ಬೃಹತ್ ಬಂದರನ್ನ ನಿರ್ಮಾಣ ಮಾಡಲು ಮುಂದಾಗಿದ್ದು ಜೆ.ಎಸ್.ಡಬ್ಲ್ಯೂ ಕಂಪನಿ ಈಗಾಗಲೇ ಸರ್ವೆ ಸಹ ಮಾಡಿದ್ದು ಸಾರ್ವಜನಿಕ ಅಹವಾಲು ಸ್ವೀಕಾರ ದಿನಾಂಕವನ್ನ ಸಹ ನಿಗದಿ ಮಾಡಲಾಗಿದೆ. ಸರ್ಕಾರ ಬಡ ಮೀನುಗಾರರ ಪರ ಇದೆಯೋ ಅಥವಾ ಬಂಡವಾಳಶಾಹಿಗಳ ಪರ ಇದೆಯೋ ಎನ್ನುವುದು ತಿಳಿಯುತ್ತಿಲ್ಲ. ಕೇಣಿಯಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡು ನೂರಾರು ಜನರು ಇದ್ದು ಬಂದರು ನಿರ್ಮಾಣ ಆದರೆ ಕೇಣಿ ಮಾತ್ರವಲ್ಲ ಸುತ್ತಮುತ್ತಲಿನ ಹಲವಾರು ಗ್ರಾಮದ ಮೀನುಗಾರರಿಗೆ ಮೀನುಗಾರಿಕೆ ಮಾಡಲು ಸಮಸ್ಯೆ ಆಗಲಿದೆ.ಈಗಾಗಲೇ ಹೊನ್ನಾವರ ಹಾಗೂ ಕಾರವಾರದಲ್ಲಿ ಬಂದರು ಮಾಡಲು ಮುಂದಾಗಿದ್ದು, ಕೇಣಿಯಲ್ಲೂ ಬೃಹತ್ ಬಂದರು ನಿರ್ಮಾಣ ಮಾಡಿದರೆ ಇಡೀ ಕಡಲ ತೀರಗಳೇ ಬಂದರಿಗೆ ಹೋದರೆ ಮೀನುಗಾರರು ಎಲ್ಲಿ ಹೋಗಬೇಕು. ಕರಾವಳಿಯ ಜನರು ಮೀನು ಆಹಾರವನ್ನು ಅವಲಂಬಿತರಾಗಿದ್ದು ಮೀನುಗಾರರು ತಮ್ಮ ವೃತ್ತಿಯಲ್ಲಿ ಬೆಳೆಯಬೇಕು ಹೊರತು, ಬಂದರು ಆಗಿ ವೃತ್ತಿಯನ್ನು ಕಳೆದುಕೊಳ್ಳಬಾರದು. ಸರ್ಕಾರ ಈ ಬಗ್ಗೆ ಗಮನಹರಿಸಿ ಕೂಡಲೇ ಕೇಣಿ ಬಂದರು ಯೋಜನೆಯನ್ನ ಕೈ ಬಿಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಮುಂದಿನ ದಿನದಲ್ಲಿ ಸಂಘಟನೆ ವತಿಯಿಂದ ನಿರಂತರ ಹೋರಾಟ ಹಾಗೂ ಕಾನೂನು ಹೋರಾಟ ಮಾಡಲಾಗುವುದು ಎಂದು ಸಂಘ ಮನವಿಯಲ್ಲಿ ತಿಳಿಸಿದೆ.
ಸಂಘದ ಗೌರವಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್, ಜಿಲ್ಲಾಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಉಪಾಧ್ಯಕ್ಷ ಭರತ್ ಕಾರ್ವಿ, ಸುನಿಲ್ ತಾಂಡೇಲ್, ಪ್ರವೀಣ್ ತಾಂಡೇಲ್, ಕಾರ್ಯದರ್ಶಿಯಾದ ಕೃಷ್ಣ ತಾಂಡೇಲ್, ನಂದೀಶ್ ಮಜಾಳಿಕರ್, ಮೋಹನ್ ಉಳ್ಳೇಕರ್, ಕೃಷ್ಣ ಕಾಮು ಹರಿಕಂತ್ರ, ವಿನಾಯಕ ಚಂದ್ರಕಾಂತ ಹರಿಕಂತ್ರ ಇದ್ದರು.