ಸಾಮರಸ್ಯವೇ ನಮ್ಮ ನಾಡ ಸಂಸ್ಕೃತಿ ಜೀವಾಳ: ಸಚಿವ ಡಾ.ಅಜಯ್ ಧರ್ಮಸಿಂಗ್

KannadaprabhaNewsNetwork |  
Published : Nov 02, 2026, 02:15 AM IST
01ಕೆಪಿಆರ್ಸಿಆರ್01:  | Kannada Prabha

ಸಾರಾಂಶ

ಕನ್ನಡಿಗರ ಬಹುದೊಡ್ಡ ಹಬ್ಬವಾಗಿರುವ ಕರ್ನಾಟಕ ರಾಜ್ಯೋತ್ಸವವನ್ನು ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳಾದ ಮಾನ್ವಿ,ಸಿರವಾರ,ಲಿಂಗಸುಗೂರು,ಸಿಂಧನೂರು, ದೇವದುರ್ಗ, ಮಸ್ಕಿ ಹಾಗೂ ಅರಕೇರಾದಲ್ಲಿ ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಕನ್ನಡಿಗರ ಬಹುದೊಡ್ಡ ಹಬ್ಬವಾಗಿರುವ ಕರ್ನಾಟಕ ರಾಜ್ಯೋತ್ಸವವನ್ನು ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳಾದ ಮಾನ್ವಿ,ಸಿರವಾರ,ಲಿಂಗಸುಗೂರು,ಸಿಂಧನೂರು, ದೇವದುರ್ಗ, ಮಸ್ಕಿ ಹಾಗೂ ಅರಕೇರಾದಲ್ಲಿ ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು.

ಜಿಲ್ಲಾಡಳಿತದ ಜೊತೆಗೆ ಆಯಾ ತಾಲೂಕಾಡಳಿತಗಳ ವ್ಯಾಪ್ತಿಯ ಸರ್ಕಾರಿ ಕಚೇರಿಗಳು,ಶಾಲಾ-ಕಾಲೇಜುಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ಕನ್ನಡ ಪರ ಸಂಘಟನೆಗಳು ಸೇರಿದಂತೆ ಎಲ್ಲೆಡೆ ಕರ್ನಾಟಕ ರಾಜ್ಯೋತ್ಸವನ್ನು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸುವುದರ ಮುಖಾಮಂತರ ಕನ್ನಡ ಡಿಂಡಿಮವನ್ನು ಮೊಳಗಿಸಿದರು.

ಜಿಲ್ಲಾಡಳಿತದಿಂದ : ರಾಯಚೂರಿನ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ-2026ರ ಅಂಗವಾಗಿ ಭಾನುವಾರ ಸ್ಥಳೀಯ ಜಿಲ್ಲಾ ಕ್ರೀಡಾಂ ಗಣದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಕವಾಯತು ತಂಡಗಳಿಂದ ಗೌರವ ವಂದನೆಗಳನ್ನು ಸ್ವೀಕರಿಸಿದರು.

ನಂತರ ರಾಜ್ಯೋತ್ಸವದ ಭಾವಷವನ್ನು ನೆರವೇರಿಸಿದ ಸಚಿವರು ನಮ್ಮ ನಾಡು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಅದರಂತೆ ನಾಡಿನ ಉಜ್ವಲ ಮತ್ತು ಭವ್ಯ ಸಾಂಸ್ಕೃತಿಕ ಪರಂಪರೆ, ಕನ್ನಡ ನಾಡು ನುಡಿಯ ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಾಮರಸ್ಯವೇ ನಮ್ಮ ನಾಡಿನ ಸಂಸ್ಕೃತಿಯ ಜೀವಾಳವಾಗಿದೆ. ಕರ್ನಾಟಕವು ಸರ್ವಧರ್ಮ ರಕ್ಷಣೆ, ಸತ್ಯಾರಾಧನೆ, ಧರ್ಮನೀತಿ, ಸರ್ವಧರ್ಮ ಸಹಿಷ್ಣುತೆ, ಧಾರ್ಮಿಕ ಸಮನ್ವಯ, ಸಹಬಾಳ್ವೆ, ಸೌಹಾರ್ದತೆ ಮತ್ತು ಭಾವೈಕ್ಯತೆಯ ದಿವ್ಯ ಸ್ವರ್ಗವಾಗಿದೆ ಎಂದು ಬಣ್ಣಿಸಿದರು.

ಬಳಿಕ ವಿವಿಧ ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟಸಿಂಗ್, ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಉಪಾಯುಕ್ತ ಶರಣಪ್ಪ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೋಪಾಲ ಗೆಣ್ಣೂರ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ತಹಸೀಲ್ದಾರ್ ಸುರೇಶ ವರ್ಮಾ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇ ಶಕ ವಿರೇಶ ನಾಯಕ, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಮುಖಂಡರಾದ ಜಿ.ಶಿವಮೂರ್ತಿ, ಭೀಮನಗೌಡ ಇಟಗಿ ಸೇರಿ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಕರು, ಕನ್ನಡ ಹಾಗೂ ಇತರೆ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಸಾರ್ವಜನಿಕರು ಇದ್ದರು.

ನಾಡ ದೇವಿ ಭುವನೇಶ್ವರಿ ಮೂರ್ತಿ ಮೆರವಣಿಗೆ: ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ನಾಡ ದೇವತೆ ಮೂರ್ತಿ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು. ಸ್ಥಳೀಯ ಕರ್ನಾಟಕ ಸಂಘದ ಆವರಣದಲ್ಲಿ ಉಸ್ತುವಾರಿ ಸಚಿವ ಡಾ.ಅಜಯ್‌ ಧರ್ಮಸಿಂಗ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು ನಂತರ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು. ಮುಖ್ಯ ರಸ್ತೆ,ವೃತ್ತಗಳ ಮುಖಾಂತರ ಕ್ರೀಡಾಂಗಣಕ್ಕೆ ಬಂದು ತಲುಪಿತು, ವಿವಿಧ ಕಲಾತಂಡಗಳ ಪ್ರದರ್ಶನ, ನಾನಾ ಇಲಾಖೆಗಳ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಈ ವೇಳೆ ಜನಪ್ರತಿನಿಧಿಗಳು,ಅಧಿಕಾರಿಗಳು,ನಿವಾಸಿಗಳು ಇದ್ದರು.

9 ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೊತ್ಸವ ಪ್ರಶಸ್ತಿ: ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ರಾಷ್ಟ್ರಧ್ವಜಾರೋಹಣ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಜಿಲ್ಲೆಯ 9 ಜನ ಮಹನಿಯರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದರು.

ಶಂಕರರಾವ್ ಊಭಾಳೆ (ಸಾಹಿತ್ಯ), ರಘುಪತಿ ಫೂಜಾರ ದಿನ್ನಿ (ಕ್ಲಾರಿಯೋನೆಟ್), ಡಾ.ಅಜೀತ್ ವಿ. ಕುಲಕರ್ಣಿ (ವೈದ್ಯಕೀಯ), ಉರುಕುಂದಪ್ಪ ಬಡಿಗೇರ್ (ಶಿಲ್ಪಾ ಕಲಾ), ಡಾ.ಶಂತ ಕುಲಕರ್ಣಿ ವಸಂತರಾಜ ಉದರಕಲ್ (ಸಮಾಜ ಸೇವೆ), ಸಮತಾ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ (ಸಮಾಜ ಸೇವೆ), ಬಂದೇನವಾಜ್ (ಸಮಗ್ರ ಕೃಷಿ ಪದ್ದತಿ), ರಘುನಾಥರೆಡ್ಡಿ (ಪತ್ರಿಕಾದ್ಯೋಮ), ಮಹ್ಮದ್ ಖಾಲಿದ್ (ಕ್ರೀಡಾ) ಅವರಿಗೆ ಗಣ್ಯರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಿದರು.

ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿದ ಸಚಿವ: ರಾಯಚೂರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಕವಾಯತು ತಂಡಗಳು ನಿರ್ಗಮಿಸುತ್ತಿದ್ದ ಸಮಯದಲ್ಲಿ ಪರೇಡ್‌ ನಡೆಸಿ ನಿಂತು ಕೊಂಡಿದ್ದ ವಿದ್ಯಾರ್ಥಿನಿ ಬಿಸಿಲಿಗೆ ತಲೆಸುತ್ತಿ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಉಸ್ತುವಾರಿ ಸಚಿವ ಡಾ.ಅಜಯ್‌ ಧರ್ಮಸಿಂಗ್‌ ಅವರು ವೇದಿಕೆಯಿಂದ ಕೆಳಗಿಳಿದು ವಿದ್ಯಾರ್ಥಿನಿ ಆರೋಗ್ಯವನ್ನು ವಿಚಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರ ನೆಲೆ: ದಾವಣಗೆರೆಗೆ ಐಟಿ-ಬಿಟಿ ಉದ್ಯಮಕ್ಕೆ ಯತ್ನ
ಕನ್ನಡದಂತಹ ಭಾಷೆ, ಶಿಸ್ತು, ಆಡಳಿತ ವೈಖರಿ ಬೇರೆಲ್ಲೂ ಸಿಗದು: ವೆಂಕಟೇಶ್‌