ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಡೀ ವಿಶ್ವದ ಗಮನ ಸೆಳೆದಿದೆ. ಕನ್ನಡ ಭಾಷೆ, ನಾಡು-ನುಡಿ, ಶಿಸ್ತುಬದ್ಧತೆ ಹಾಗೂ ಆಡಳಿತ ವೈಖರಿ ಬೇರೆ ಯಾವ ರಾಜ್ಯದಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಡೀ ವಿಶ್ವದ ಗಮನ ಸೆಳೆದಿದೆ. ಕನ್ನಡ ಭಾಷೆ, ನಾಡು-ನುಡಿ, ಶಿಸ್ತುಬದ್ಧತೆ ಹಾಗೂ ಆಡಳಿತ ವೈಖರಿ ಬೇರೆ ಯಾವ ರಾಜ್ಯದಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಹೇಳಿದರು.

ತಾಲೂಕು ಆಡಳಿತ ಹಾಗೂ ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ಭಾನುವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ, ಕರ್ನಾಟಕದಲ್ಲಿ ಜನಿಸಿದ್ದೇ ನಮ್ಮ ಪುಣ್ಯ. ಇಲ್ಲಿನ ಸಾಂಸ್ಕೃತಿಕ ನೆಲೆಗಟ್ಟು ಬೇರೆ ಎಲ್ಲೂ ನೋಡಲು ಸಾಧ್ಯವಿಲ್ಲ. ಕನ್ನಡಿಗರು ಎಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆ ಎಂದರು.

ಪಾವಗಡ ತಾಲೂಕು ಗಡಿ ಪ್ರಾಂತ್ಯದಲ್ಲಿಲ್ಲ. ಕರ್ನಾಟಕದ ಮಧ್ಯದಲ್ಲಿದೆ ಎಂಬ ಭಾವನೆ ಇದೆ. ಇಲ್ಲಿನ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿದ್ದಾರೆ. ಕಳೆದ ವರ್ಷ 40ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

ಕ್ರೀಡಾಂಗಣದ ಅಭಿವೃದ್ಧಿಗೆ 1 ಕೋಟಿ ರು. ಅನುದಾನ ನೀಡಿದ್ದು, ಇನ್ನೂ 1 ಕೋಟಿ ರು ಅನುದಾನ ನೀಡಲಾಗುವುದು. ಪಟ್ಟಣದ ಪ್ರಗತಿಗೆ ಒಟ್ಟು 30 ಕೋಟಿ ರು. ಅನುದಾನ ತರಲಾಗಿದೆ. ಶ್ರೀ ಶನಿಮಹಾತ್ಮ ದೇವಸ್ಥಾನದ ಅಭಿವೃದ್ಧಿಗೆ ಈಗಾಗಲೇ 70 ಲಕ್ಷ ಬಿಡುಗಡೆ ಮಾಡಲಾಗಿದೆ. ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 1 ಕೋಟಿ ವೆಚ್ಚ, ಪಾವಗಡ-ಚಳ್ಳಕೆರೆ ಮಾರ್ಗದ ಅಭಿವೃದ್ಧಿ ಸೇರಿದಂತೆ ಒಟ್ಟು 150 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶೀಘ್ರ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ತಮ್ಮ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿದರು.

ತಹಸೀಲ್ದಾರ್ ವೈ.ರವಿ ಧ್ವಜಾರೋಹಣ ನೆರೆವೇರಿಸಿದರು. ತಾಪಂ ಇಒ ಮಧುಸೂದನ್, ಎಸಿಡಿಪಿಒ ರಖೀಬ್, ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್, ಬಿಇಒ ರೇಣುಕಮ್ಮ, ಸರ್ವೆಯರ್‌ ಕೃಷ್ಣಪ್ಪ, ಅಬಕಾರಿ ಇನ್‌ಸ್ಪೆಕ್ಟರ್‌ ಮೈಕಲ್‌, ತಾಲೂಕು ಕಸಾಪ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ, ಪುರಸಭೆ ಅಧ್ಯಕ್ಷರಾದ ಸುದೇಶ್ ಬಾಬು, ಎ. ಶಂಕರರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ರವಿ, ಆರ್‌.ಟಿ. ಖಾನ್‌ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.