ಕನ್ನಡ ಭಾಷೆ ಗಡಿ ಮೀರಿ ಬೆಳೆದಿದೆ. ಕನ್ನಡಿಗರು ಜಗತ್ತಿನ ೨೦ಕ್ಕೂ ಹೆಚ್ಚು ದೇಶಗಳಲ್ಲಿ ತಮ್ಮದೇ ಅಸ್ತಿತ್ವ ಬೆಳೆಸಿಕೊಂಡು ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿ ವೀರೇಶ ಕುಮಾರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಾಗರ

ಕನ್ನಡ ಭಾಷೆ ಗಡಿ ಮೀರಿ ಬೆಳೆದಿದೆ. ಕನ್ನಡಿಗರು ಜಗತ್ತಿನ ೨೦ಕ್ಕೂ ಹೆಚ್ಚು ದೇಶಗಳಲ್ಲಿ ತಮ್ಮದೇ ಅಸ್ತಿತ್ವ ಬೆಳೆಸಿಕೊಂಡು ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿ ವೀರೇಶ ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ನೆಹರೂ ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಕೇವಲ ಆಚರಣೆ ಮಾತ್ರವಲ್ಲ, ಕನ್ನಡಿಗರ ಬದುಕಿನ ಸಂಭ್ರಮದ ಕ್ಷಣ ಎಂದು ಬಣ್ಣಿಸಿದರು.

ಕ್ರಿ.ಶ.೪೫೦ರಲ್ಲಿ ದೊರೆಕಿದ ಹಲ್ಮಿಡಿ ಶಾಸನಕ್ಕೂ ಪೂರ್ವದಲ್ಲಿ ಕನ್ನಡ ಭಾಷೆ ಇತ್ತು ಎನ್ನುವುದಕ್ಕೆ ಅನೇಕ ದಾಖಲೆಗಳು ಲಭ್ಯವಾಗಿದೆ. ಕನ್ನಡ ನಾಡನ್ನು ಕದಂಬರಿಂದ ಹಿಡಿದು ಮೈಸೂರು ಅರಸರವರೆಗೂ ಅತ್ಯಂತ ಹೆಮ್ಮೆಪಟ್ಟುಕೊಳ್ಳುವ ರೀತಿಯಲ್ಲಿ ರಾಜ್ಯಾಡಳಿತ ನಡೆಸಿದ್ದಾರೆ. ಕನ್ನಡಿಗರಿಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ. ೮ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡ ಭಾಷೆ ಜಗತ್ತಿನ ಅತ್ಯಂತ ಶ್ರೇಷ್ಟ ಭಾಷೆಗಳಲ್ಲಿ ಒಂದಾಗಿದೆ ಎಂದು ವಿಶ್ಲೇಷಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿ, ಸಾರ್ವಜನಿಕವಾಗಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಕನ್ನಡಿಗರಾಗಿ ಕನ್ನಡ ಭಾಷೆಯ ಬ್ಗಗೆ ನಿಷ್ಕಾಳಜಿ ಎಂದಿಗೂ ಸಲ್ಲದು. ಕಾವೇರಿ ನದಿನೀರು ಹಂಚಿಕೆ ವಿಷಯದಲ್ಲಿ ಪದೇಪದೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ನಮಗೆ ಕುಡಿಯುವ ನೀರು ಇಲ್ಲದೆ ಇದ್ದಾಗ ಪಕ್ಕದ ರಾಜ್ಯಕ್ಕೆ ನೀರು ಹರಿಸಿ ಎನ್ನುವ ತೀರ್ಮಾನದ ಪುನರ್ ಅವಲೋಕನ ಅಗತ್ಯ ಎಂದು ಹೇಳಿದರು.

ತಹಸೀಲ್ದಾರ್ ಡಾ. ಪ್ರತಿಭಾ ಆರ್., ಪೌರಾಯುಕ್ತ ಎಚ್.ಕೆ.ನಾಗಪ್ಪ, ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಇನ್ನಿತರರು ಹಾಜರಿದ್ದರು. ರಮೇಶ್ ಸ್ವಾಗತಿಸಿ, ವಿ.ಟಿ.ಸ್ವಾಮಿ ವಂದಿಸಿ, ಎಚ್.ಜಿ.ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ನಂತರ ಆರಕ್ಷಕ, ಗೃಹರಕ್ಷಕ, ಎನ್.ಸಿ.ಸಿ. ಇನ್ನಿತರೆ ತಂಡಗಳಿಂದ ಆಕರ್ಷಕ ಕವಾಯತು ನಡೆಯಿತು.