ನಗರದ ವಿವಿಧೆಡೆ ಕರ್ಕಶ ಶಬ್ದ ಮಾಡುತ್ತಿರುವ ಸೈಲೆನ್ಸರ್ ಹೊಂದಿದ ಹಲವು ಬೈಕ್‌ಗಳನ್ನು ವಿಶೇಷ ಕಾರ್ಯಾಚರಣೆ ಮೂಲಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಂದಾಪುರ: ನಗರದ ವಿವಿಧೆಡೆ ಕರ್ಕಶ ಶಬ್ದ ಮಾಡುತ್ತಿರುವ ಸೈಲೆನ್ಸರ್ ಹೊಂದಿದ ಹಲವು ಬೈಕ್‌ಗಳನ್ನು ವಿಶೇಷ ಕಾರ್ಯಾಚರಣೆ ಮೂಲಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.ವೇಗದ ಚಾಲನೆ, ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಶುಕ್ರವಾರ ಹಾಗೂ ಶನಿವಾರ ಈ ಬಗ್ಗೆ ಕಾರ್ಯಾಚರಣೆಗಿಳಿದ ಕುಂದಾಪುರ ಸಂಚಾರ ಠಾಣೆ ಪೊಲೀಸರು 6-7 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ದ್ವಿಚಕ್ರ ವಾಹನಗಳಲ್ಲಿ ಆಯಾ ಸಂಸ್ಥೆ ಅಳವಡಿಸಿದ ಸೈಲೆನ್ಸರ್ (ಡೆಸಿಬಲ್ ಕಿಲ್ಲರ್) ಮಾರ್ಪಾಡುಗೊಳಿಸಿ ಕುಂದಾಪುರ ನಗರದೊಳಗಿನ ಕಾಲೇಜು, ಆಸ್ಪತ್ರೆ ಆವರಣ, ವಿದ್ಯಾರ್ಥಿಗಳ ಹಾಸ್ಟೆಲ್ ಸಹಿತ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ಕಶ ಶಬ್ದದೊಂದಿಗೆ ಸುತ್ತಾಡುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿತ್ತು. ಈ ಹಿನ್ನೆಲೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರ ನಿರ್ದೇಶನದಲ್ಲಿ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ನಗರ ಠಾಣೆ ಇನ್ಸ್‌ಪೆಕ್ಟರ್ ಜಯರಾಮ ಗೌಡ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಟ್ರಾಫಿಕ್ ಠಾಣೆ ಪಿಎಸ್ಐ ಅನೂಪ್ ನಾಯಕ್, ಸುಧಾ ಪ್ರಭು ಹಾಗೂ ಸಿಬ್ಬಂದಿಗಳ ತಂಡ ಸಂಚಾರ ಠಾಣೆ ವ್ಯಾಪ್ತಿಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿದ ದೂರುಗಳಿರುವ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಸಂಚಾರ ನಿಯಮ ಪಾಲನೆ ಅಗತ್ಯವಾಗಿದೆ. ಈ ಉದ್ದೇಶದಿಂದ ದ್ವಿಚಕ್ರ, ಘನ ಹಾಗೂ ಲಘು ವಾಹನಗಳ ಮೇಲೆ ನಿಗಾ ವಹಿಸಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಅತಿ ವೇಗ, ನಿರ್ಲಕ್ಷ್ಯ ವಹಿಸುವ ವಾಹನ ಸವಾರರನ್ನು ಪತ್ತೆ ಮಾಡಿ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸುವ ಕಾರ್ಯಾಚರಣೆ ಮುಂದುವರಿಯಲಿದ್ದು, ಪ್ರಸ್ತುತ ವಶಪಡಿಸಿಕೊಂಡ ಬೈಕ್‌ಗಳಿಗೆ ಸಂಬಂಧಿತ ದಾಖಲೆಗಳು ಹಾಗೂ ಸವಾರರ ಚಾಲನ ಪರವಾನಿಗೆ ಸಹಿತ ಲೋಪದೋಷಗಳನ್ನಾಧರಿಸಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕುಂದಾಪುರ ಸಂಚಾರ ಠಾಣೆ ಪೊಲೀಸ್ ಉಪ ನಿರೀಕ್ಷಕ ಅನುಪ್ ನಾಯಕ್ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.