ಸುಗ್ಗಿ ಹಬ್ಬ: ರಾಸುಗಳನ್ನು ಅಲಂಕರಿಸಿ ಕಿಚ್ಚು ಹಾಯಿಸಿದ ರೈತರು

KannadaprabhaNewsNetwork | Published : Jan 15, 2025 12:47 AM

ಸಾರಾಂಶ

ವರ್ಷದ ಮೊದಲ ಹಬ್ಬ ಸಂಕ್ರಾಂತಿ ಅಂಗವಾಗಿ ಪಟ್ಟಣದ ಕೋಟೆ ಬೀದಿ ಗಂಗಾಧರೇಶ್ವರಸ್ವಾಮಿ, ಸಾರಂಗಪಾಣಿ, ಪಟ್ಟಲದಮ್ಮನ, ಕೋಟೆ ಆಂಜನೇಯಸ್ವಾಮಿ, ಹೊರವಲಯದ ಶಕ್ತಿ ದೇವತೆ ದಂಡಿನ ಮಾರಮ್ಮನ, ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದ್ದವು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲಡೆ ಸಡಗರ ಸಂಭ್ರಮದಿಂದ ರೈತರು ತಮ್ಮ ರಾಸುಗಳಿಗೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಕಿಚ್ಚು ಹಾಯಿಸಿದರು.

ವರ್ಷದ ಮೊದಲ ಹಬ್ಬ ಸಂಕ್ರಾಂತಿ ಅಂಗವಾಗಿ ಪಟ್ಟಣದ ಕೋಟೆ ಬೀದಿ ಗಂಗಾಧರೇಶ್ವರಸ್ವಾಮಿ, ಸಾರಂಗಪಾಣಿ, ಪಟ್ಟಲದಮ್ಮನ, ಕೋಟೆ ಆಂಜನೇಯಸ್ವಾಮಿ, ಹೊರವಲಯದ ಶಕ್ತಿ ದೇವತೆ ದಂಡಿನ ಮಾರಮ್ಮನ, ಇತಿಹಾಸ ಪ್ರಸಿದ್ಧ ಮಾರೇಹಳ್ಳಿಯ ಲಕ್ಷ್ಮಿನರಸಿಂಹಸ್ವಾಮಿ ಹಾಗೂ ತಾಲೂಕಿನ ಕಂದೇಗಾಲ-ಕಲ್ಲುವೀರನಹಳ್ಳಿಯ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದ್ದವು.

ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ತೊಟ್ಟು ಮನೆ ಮನೆಗಳಿಗೆ ತೆರಳಿ ಎಳ್ಳು, ಬೆಲ್ಲ, ಕೊಬ್ಬರಿ, ಕಬ್ಬು ಬೀರಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ರೈತರು ತಮ್ಮ ರಾಸುಗಳ ಕೊಂಬುಗಳಿಗೆ ಬಣ್ಣ ಬಳೆದು ಹೂವು ಮತ್ತು ಬಲೂನ್ ಸೇರಿದಂತೆ ವಿವಿಧ ಬಗೆಯ ಅಲಂಕಾರಿಕ ವಸ್ತುಗಳಿಂದ ಶೃಂಗಾರ ಮಾಡಿದರು.

ನಂತರ ಸೂರ್ಯ ಮುಳುಗುವ ವೇಳೆ ಸಂಪ್ರದಾಯದಂತೆ ಸಂಕ್ರಮಣನಿಗೆ ಪೂಜೆ ಸಲ್ಲಿಸಿ ನಂತರ ಪೊಂಗಲ್ ಎರಚಿ ರಾಸುಗಳನ್ನು ರೈತರು ಬೆಂಕಿಯಲ್ಲಿ ಕಿಚಾಯಿಸಿದರು. ಪಟ್ಟಣದ ಪ್ರಮುಖ ಬಡಾವಣೆಗಳು ಸೇರಿದಂತೆ ಎಲ್ಲೆಡೆ ಯುವಕರು ಸಂಭ್ರಮಿಸಿದರು.

ಬೆಂಕಿಯಲ್ಲಿ ರಾಸುಗಳು ಹಾರುವ ದೃಶ್ಯಗಳನ್ನು ಕಂಡು ಯುವಜನತೆ ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಸೆರೆ ಹಿಡಿದು ಸಂಭ್ರಮಿಸಿದರು.

ವಿಶೇಷವಾಗಿ ತಾಲೂಕಿನ ನೆಲಮಾಕನಹಳ್ಳಿಯಲ್ಲಿ ಗ್ರಾಮಸ್ಥರು ಕತ್ತೆಗೆ ವಿಶೇಷವಾಗಿ ಅಲಂಕಾರ ಮಾಡಿ ಮೆರವಣಿಗೆ ಮಾಡಿದರು. ಹಲವು ಮಂದಿ ಪೂಜೆ ಸಲ್ಲಿಸಿದರು. ಯುವ ಸಮೂಹ ಕತ್ತೆಯ ಜತೆ ಫೋಟೋ ತೆಗೆಸಿಕೊಂಡರು.

ಪಟ್ಟಣದ ಪೇಟೆ ಒಕ್ಕಲಗೇರಿಯ ಟೋಲ್ ಗೇಟ್, ಕನಕಪುರ ರಸ್ತೆ, ಸುಲ್ತಾನ್ ರಸ್ತೆ, ಕೊಳ್ಳೇಗಾಲ ರಸ್ತೆ, ಮೈಸೂರು ರಸ್ತೆ ಸೇರಿದಂತೆ ವಿವಿಧೆಡೆ ಹಾಗೂ ತಾಲೂಕಿನ ಎಲ್ಲ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ರೈತರು ತಮ್ಮ ರಾಸುಗಳನ್ನು ಕಿಚ್ಚು ಹಾಯಿಸುವ ಮೂಲಕ ಹಬ್ಬ ಆಚರಿಸಿದರು.

Share this article