ಕನ್ನಡಪ್ರಭ ವಾರ್ತೆ ಹೊಸದುರ್ಗ
ವಾಣಿ ವಿಲಾಸ ಜಲಾಶಯದಿಂದ ಹೊಸದುರ್ಗ ತಾಲೂಕಿಗೆ ಅನ್ಯಾಯವಾಗಿದ್ದು ಅದನ್ನು ಸರಿದೂಗಿಸಲು ಶಾಸಕ ಬಿ.ಜಿ.ಗೋವಿಂದಪ್ಪ ಕೈಗೊಳ್ಳುವ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಮಾಜಿ ಸಚಿವ ಗೂಳೀಹಟ್ಟಿ ಶೇಖರ್ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಶಾಸಕ ಬಿಜಿ ಗೋವಿಂದಪ್ಪನವರಿಗೆ ವಿವಿ ಸಾಗರ ಜಲಾಶಯದಿಂದ ಹೊಸದುರ್ಗ ತಾಲೂಕಿನ ರೈತರಿಗೆ ಸಂಕಷ್ಠವೇ ಹೊರತು ಯಾವುದೇ ಪ್ರಯೋಜವಿಲ್ಲ ಎಂಬುದು ಈಗ ಅರಿವಾಗಿದೆ. ಈಗ ಜಿಲ್ಲಾ ಉಸ್ತುವಾರಿ ಸಚಿವರ ಆಡಳಿತದ ಬಗ್ಗೆ ಹಾಗೂ ಜಲಾಶಯದಿಂದ ತಾಲೂಕಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅಸಮಾದಾನ ಹೊರಹಾಕಿದ್ದು ಅವರ ಅಸಮಾದಾನಕ್ಕೆ ನಮ್ಮ ಸಮ್ಮತಿಯೂ ಇದೆ ಎಂದರು.
ಮುಖ್ಯಮಂತ್ರಿಗಳು ವಿವಿಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುತ್ತಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸದುರ್ಗ ಶಾಸಕರಿಗೆ ನೀಡಬೇಕು. ಈ ಕಾರ್ಯಕ್ರಮದಲ್ಲಿ ಹೊಸದುರ್ಗ ತಾಲೂಕಿನ ರೈತರನ್ನೆ ಬಳಸಿಕೊಳ್ಳಬೇಕು ಹಾಗೆಯೇ ಜಲಾಶಯ ಸಂಪೂರ್ಣ ಹೊಸದುರ್ಗ ತಾಲೂಕಿನಲ್ಲಿಯೇ ಇದ್ದು ಅದನ್ನು ಹೊಸದುರ್ಗ ವಾಣಿ ವಿಲಾಸ ಸಾಗರ ಜಲಾಶಯ ಎಂದು ಘೋಷಣೆ ಮಾಡಬೇಕು. ಇಲ್ಲಿಯವರೆಗೂ ಹಿರಿಯೂರು ಜಲಾಶಯ ಎಂದು ಕರೆಯಲಾಗುತ್ತಿದೆ ಅದನ್ನು ಸರಿಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.ಜಲಾಶಯ ತುಂಬಿರುವುದು ನಾಲ್ಕೈದು ತಾಲೂಕುಗಳಿಗೆ ಸಂತಸ ತಂದಿರಬಹುದು ಆದರೆ ಹೊಸದುರ್ಗ ತಾಲೂಕಿಗೆ ಸಂತಸದ ಬದಲು ದುಖಃ ತಂದಿದೆ. ತಾಲೂಕಿನ ಜನ ಜಲಾಶಯದ ನೀರನ್ನು ಎಮ್ಮೆ , ಕುರಿ ಮೈ ತೊಳೆಯಲು ಮಾತ್ರ ಬಳಸಬಹುದಾಗಿದೆ ಆದರೆ ಒಂದು ಹನಿ ನೀರನ್ನು ಕುಡಿಯಲಿಕ್ಕಾಗಲೀ ಅಥವಾ ಕೃಷಿಗಾಗಿ ಬಳಸುವಂತಿಲ್ಲ. ಜಲಾಶಯ ನಿರ್ಮಾಣಕ್ಕೆ ಜಮೀನು ನೀಡಿರುವುದು ನಮ್ಮ ಜನ, ಜಲಾಶಯ ನಿರ್ಮಾಣ ಆಗಿರುವುದು ನಮ್ಮ ತಾಲೂಕಿನ ಜಾಗ. ಅನ್ಯಾಯವಾಗುತ್ತಿರುವುದು ತಮ್ಮ ಜನರಿಗೆ ಹಾಗಾಗಿ ಈ ಬಗ್ಗೆ ನಮ್ಮ ತಾಲೂಕಿನ ಜನರಿಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದ್ದಾರೆ.
ನನ್ನ ಅವಧಿಯಲ್ಲಿ ಜಲಾಶಯದ ವಾರಸುದಾರಿಕೆ ಬಗ್ಗೆ ವಿಧಾನಸಭೆಯಲ್ಲಿಯೇ ಪ್ರಸ್ತಾಪಿಸಿ ಅದು ಹೊಸದುರ್ಗ ತಾಲೂಕಿಗೆ ಸೇರಿದೆ ಎನ್ನುವುದನ್ನು ಖಚಿತ ಪಡಿಸಿದ್ದೇನೆ. ಅಲ್ಲದೆ ನಮ್ಮ ತಾಲೂಕಿಗೆ 1 ಟಿಎಂಸಿ ನೀರನ್ನು ಕಾಯ್ದಿರಿಸುವಂತೆ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೆ ಅದು ಸಾಧ್ಯವಾಗಲಿಲ್ಲ ಈಗ ಸರ್ಕಾರ ಬದಲಾಗಿದೆ. ಈಗಿರುವ ಮುಖ್ಯಮಂತ್ರಿಗಳು ಒಳ್ಳೆಯವರಿದ್ದಾರೆ ಅವರ ಜೊತೆ ನಮ್ಮ ಶಾಸಕರ ಸಂಬಂದವೂ ಚನ್ನಾಗಿದೆ ಈಗಲಾದರೂ ನಮ್ಮ ತಾಲೂಕಿಗೆ ಜಲಾಶಯದ ನೀರನ್ನು ಬಳಕೆ ಮಾಡಲು ಪಾಲನ್ನು ಕೇಳಬೇಕು ಇದಕ್ಕೆ ನಮ್ಮ ಬೆಂಬಲ ವಿರುತ್ತದೆ ಎಂದು ಅವರು ತಿಳಿಸಿದ್ದಾರೆ.ನಮ್ಮ ಡ್ಯಾಂ ನಮ್ಮ ಹಕ್ಕು:ನಮ್ಮಭದ್ರಾ ಜಲಾಶಯದಿಂದ ಈಗ ನೀರು ತರಲು ಕೆಲಸ ನಡೆಯುತ್ತಿದೆ ಅದರಿಂದ ಬೇಸಿಗೆ ಸಮಯದಲ್ಲಿ ನೀರು ಪಡೆಯಲು ಸಾಧ್ಯವಿಲ್ಲ ಹಾಗಾಗಿ ನಮ್ಮದೇ ಜಲಾಶಯವಿದ್ದು ಅದರಲ್ಲಿ ನಮ್ಮ ಪಾಲು ಕೇಳಬೇಕಿದೆ ಈ ನಿಟ್ಟಿನಲ್ಲಿ ನಮ್ಮ ಡ್ಯಾಂ ನಮ್ಮ ಹೋರಾಟದ ರೂಪರೇಷೆಗಳು ಸಿದ್ದವಾಗುತ್ತಿವೆ ಈ ಬಗ್ಗೆ ತಾಲೂಕಿನ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.